ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ ಪಾವತಿಗೆ ಕಾಲಾವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್

Published 6 ಜನವರಿ 2024, 19:30 IST
Last Updated 6 ಜನವರಿ 2024, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಆಸ್ತಿ ತೆರಿಗೆ ಪಾವತಿಸಲು ಮಾಲೀಕರಿಗೆ ಹೆಚ್ಚಿನ ಕಾಲಾವಕಾಶ ಮಾಡಿಕೊಡಲಾಗುವುದು. ಜೊತೆಗೆ, ವಸತಿ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಿದವರಿಗೆ ತೆರಿಗೆ ಕಡಿಮೆ ಮಾಡಲು ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಶಿವಾಜಿನಗರ, ಹೆಬ್ಬಾಳ ಹಾಗೂ ಪುಲಕೇಶಿನಗರ ವಿಧಾನಸಭಾ ಕ್ಷೇತ್ರಗಳ ನಾಗರಿಕರ ಕುಂದುಕೊರತೆ ಆಲಿಸುವ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಅವರು ಶನಿವಾರ ಭರವಸೆ ನೀಡಿದರು.

‘ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದ ಹಲವು ತೊಂದರೆಗಳ ಬಗ್ಗೆ ನಾಗರಿಕರು ಗಮನ ಸೆಳೆದಿದ್ದಾರೆ. ವಸತಿ ನಿವೇಶನಗಳಲ್ಲಿ ವಾಣಿಜ್ಯ ಕಟ್ಟಡಗಳನ್ನು ಕಟ್ಟಿರುವವರಿಗೆ ತೆರಿಗೆ ಹಾಗೂ ದಂಡ ಹೆಚ್ಚಾಗಿದೆ. ನಮಗೆ ಸಮಯಾವಕಾಶ ಬೇಕು ಎಂದು ಮನವಿ ಸಲ್ಲಿಸುತ್ತಿದ್ದಾರೆ. ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಹಸಿರು ರಕ್ಷಕ, ಉದ್ಯಾನ ಮಿತ್ರ ಮತ್ತು ಕೆರೆ ಮಿತ್ರ ಎಂಬ ಬಿಬಿಎಂಪಿಯ ಮೂರು ಆ್ಯಪ್‌ಗಳನ್ನು ಶಿವಕುಮಾರ್‌ ಬಿಡುಗಡೆ ಮಾಡಿದರು.

‘ನನ್ನ ಆರೋಗ್ಯ ಸರಿಯಿಲ್ಲ. ಆದರೆ ನಿಮಗೆ ಸಮಯ ನೀಡಿದ್ದೇನೆ. ಮಾತಿಗೆ ತಪ್ಪಬಾರದು ಎಂಬ ಕಾರಣಕ್ಕೆ ವೈದ್ಯರ ವಿಶ್ರಾಂತಿ ಸಲಹೆಯನ್ನು ಲೆಕ್ಕಿಸದೆ ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿ ಅಹವಾಲು ಸ್ವೀಕರಿಸಿದರು.

‘ನನ್ನ ಮಗ ಶಿವಾಜಿನಗರದ ಅಲೋಷಿಯಸ್ ಶಾಲೆಯಲ್ಲಿ ಓದುತ್ತಿದ್ದು, ಶಾಲಾ ಶುಲ್ಕ ಬಾಕಿ ಇದ್ದು ಕಟ್ಟುವ ಶಕ್ತಿ ಇಲ್ಲ’ ಎಂದು ಭವ್ಯ ಅಳಲು ತೋಡಿಕೊಂಡರು.

‘15 ವರ್ಷಗಳಿಂದ ಬಿಬಿಎಂಪಿ ಪೂರ್ವ ವಲಯದ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ಕಾಯಂ ಮಾಡಿ’ ಎಂಬ ಶ್ರೀದೇವಿ ಮತ್ತು ಜ್ಯೋತಿ ಅವರ ಮನವಿಯನ್ನು ಈಡೇರಿಸುವ ಭರವಸೆ ಡಿಸಿಎಂ ನೀಡಿದರು.

‘ನಮ್ಮ ಮನೆ ನೀರಿನ ಬಿಲ್ ₹7-8 ಸಾವಿರ ಬರುತ್ತಿದೆ’ ಎಂದು ಶಿವಾಜಿನಗರದ ಜ್ಞಾನೇಶ್ವರ ಹೇಳಿದಾಗ, ಆಶ್ಚರ್ಯ ವ್ಯಕ್ತಪಡಿಸಿದ ಶಿವಕುಮಾರ್‌, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

‘ಹಲಸೂರು ಕೆರೆಗೆ ಅಗತ್ಯವಾಗಿ ಬೇಕಾದ ಕಾಮಗಾರಿ ನಡೆಸದೆ ಬೇರೆ ಕೆಲಸಗಳನ್ನು ಮಾಡುತ್ತಿದ್ದಾರೆ. ಇಲ್ಲಿಗೆ ಹರಿಯುವ ಒಳಚರಂಡಿ ನೀರನ್ನು ಮೊದಲು ತಡೆಯಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿ’ ಎಂದು ಹಲಸೂರಿನ ಮೋಹನ್‌ ರಾಜ್‌ ಮನವಿ ಮಾಡಿದರು.

ಮಧ್ಯಾಹ್ನ 3 ಗಂಟೆ ವೇಳೆಗೆ ಕಾರ್ಯಕ್ರಮ ಸ್ಥಳದಲ್ಲಿ ದೂರು ನೀಡುವ ಕೌಂಟರ್‌ಗಳಲ್ಲಿ ಜನರೇ ಇರಲಿಲ್ಲ. ‘ಗೃಹಲಕ್ಷ್ಮಿ’ ಯೋಜನೆಗೆ ಸಂಬಂಧಿಸಿದ ಕೌಂಟರ್‌ನಲ್ಲಿ ಮಾತ್ರ ಸಮಸ್ಯೆ ಹೇಳಿಕೊಳ್ಳುವವರ ಸಾಲು ಸಂಜೆವರೆಗೂ ಇತ್ತು.

‘ವ್ಯಾಪಾರಸ್ಥರು ಕನ್ನಡ ತಾಯಿಗೆ ಗೌರವ ನೀಡಬೇಕು’

‘ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಭಾಷೆ ಇರಬೇಕು. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ಮಾಡುತ್ತಿದ್ದು ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ. ಉಳಿದಂತೆ ಅವರು ಯಾವುದೇ ಭಾಷೆಯಲ್ಲಿ ಹಾಕಿಕೊಳ್ಳಲಿ. ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರಬೇಕು. ವ್ಯಾಪಾರ ಮಾಡುವವರು ಕನ್ನಡ ತಾಯಿ ಹಾಗೂ ಭೂಮಿಗೆ ಗೌರವ ನೀಡಬೇಕು’ ಎಂದು ಡಿಸಿಎಂ ಶಿವಕುಮಾರ್‌ ಹೇಳಿದರು.

‘ಕಾನೂನಿನ ಅಡಿಯಲ್ಲಿ ನ್ಯಾಯ’

‘ಕೆ.ಜೆ. ಹಳ್ಳಿ– ಡಿ.ಜೆ. ಹಳ್ಳಿ ಪ್ರಕರಣದಲ್ಲಿ ನಾವು ಏನೇ ಮಾಡಿದರೂ ಕಾನೂನು ವ್ಯಾಪ್ತಿಯಲ್ಲಿ ಮಾಡಬೇಕು. ಬಿಜೆಪಿ ಸರ್ಕಾರ ಕೆಲವು ಸೆಕ್ಷನ್ ಪ್ರಯೋಗ ಮಾಡಿರುವುದರಿಂದ ಬಂಧಿತರು ಹೊರಬರಲು ಆಗುತ್ತಿಲ್ಲ. ಕಾನೂನಿನ ಅಡಿಯಲ್ಲಿ ನ್ಯಾಯ ಒದಗಿಸಿಕೊಡಬೇಕು. ಕಾನೂನು ಕೈಗೆತ್ತಿಕೊಂಡವರ ವಿರುದ್ಧದ ಕ್ರಮಕ್ಕೆ ನಮ್ಮ ಅಭ್ಯಂತರವಿಲ್ಲ. ಕೆಲವು ಅಮಾಯಕರು ಇದರಲ್ಲಿ ಸಿಲುಕಿದ್ದಾರೆ ಎಂಬ ಕೂಗು ಇದೆ’ ಎಂದು ಬಂಧಿತರ ಸಂಬಂಧಿತ ಮನವಿಗೆ ಶಿವಕುಮಾರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT