ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಸಂಚಾರ ದಟ್ಟಣೆ ಬಿಸಿ: ಜನರು ಹೈರಾಣು

Published 1 ಅಕ್ಟೋಬರ್ 2023, 0:27 IST
Last Updated 1 ಅಕ್ಟೋಬರ್ 2023, 0:27 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಶನಿವಾರ ಇಡೀ ದಿನ ವಿಪರೀತ ದಟ್ಟಣೆ ಉಂಟಾಗಿದ್ದರಿಂದ ಜನರು ಹೈರಾಣಾದರು.

ಶುಕ್ರವಾರ ಬಂದ್‌ ಇದ್ದಿದ್ದರಿಂದ ವಾಹನಗಳ ಓಡಾಟ ತೀರಾ ವಿರಳವಾಗಿತ್ತು. ಆದರೆ, ಶನಿವಾರ ಬೆಳಿಗ್ಗೆಯಿಂದಲೇ ಹೆಚ್ಚು ವಾಹನಗಳು ರಸ್ತೆಗೆ ಇಳಿದಿದ್ದವು. ಕೇಂದ್ರ ವಾಣಿಜ್ಯ ಪ್ರದೇಶ (ಸಿಬಿಡಿ) ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನಗಳು ಹೆಚ್ಚಾಗಿ ಸಂಚರಿಸಿದವು.

ರಾಜಭವನ ರಸ್ತೆ, ಚಾಲುಕ್ಯ ವೃತ್ತ, ರೇಸ್‌ಕೋರ್ಸ್ ರಸ್ತೆ, ಅರಮನೆ ರಸ್ತೆ, ಕೆ.ಆರ್. ವೃತ್ತ, ಕಾರ್ಪೊರೇಷನ್ ವೃತ್ತ, ಮೈಸೂರು ರಸ್ತೆ, ಯಶವಂತಪುರ, ಮೆಜೆಸ್ಟಿಕ್, ಓಕಳಿಪುರ, ನವರಂಗ ವೃತ್ತ, ರಿಚ್ಮಂಡ್ ವೃತ್ತ, ಶಾಂತಿನಗರ, ನಿಮ್ಹಾನ್ಸ್ ರಸ್ತೆ, ಡೇರಿ ವೃತ್ತಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಿದವು.

ಕೆಲ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸಿದ್ದರಿಂದ, ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಇಂಥ ರಸ್ತೆಗಳಲ್ಲಿ ಸಿಲುಕಿದ್ದ ಜನ, ದಟ್ಟಣೆಯಲ್ಲಿ ಸಿಲುಕಿ ಪರದಾಡಿದರು. ಹೊರವರ್ತುಲ ರಸ್ತೆಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತು, ದಟ್ಟಣೆ ಕಂಡುಬಂತು.

ಸಿಬ್ಬಂದಿ ಕೊರತೆ: ನಗರದ ಬಹುತೇಕ ರಸ್ತೆಗಳಲ್ಲಿ ಸಂಚಾರ ಪೊಲೀಸ್ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿತ್ತು. ನಿತ್ಯವೂ ಸಿಬ್ಬಂದಿ ಇರುತ್ತಿದ್ದ ವೃತ್ತಗಳಲ್ಲಿ ಶನಿವಾರ ಯಾರೊಬ್ಬರೂ ಇರಲಿಲ್ಲ. ಪ್ರಮುಖ ವೃತ್ತಗಳಲ್ಲಿ ಮಾತ್ರ ಒಬ್ಬೊಬ್ಬ ಸಿಬ್ಬಂದಿ ಕಂಡುಬಂದರು. ಸಿಗ್ನಲ್ ನಿರ್ವಹಣೆ ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸದಿದ್ದರಿಂದ ದಟ್ಟಣೆ ಉಂಟಾಯಿತೆಂದು ಜನರು ದೂರಿದರು.

‘ಕೆಲ ದಿನಗಳಿಂದ ನಗರದಲ್ಲಿ ವಿಪರೀತ ದಟ್ಟಣೆ ಉಂಟಾಗುತ್ತಿದೆ. ಬೆಳಿಗ್ಗೆ ಮನೆಯಿಂದ ಕಚೇರಿಗೆ ಹೋಗಲು ಹಾಗೂ ಕಚೇರಿಯಿಂದ ಮನೆಗೆ ಬರುವಾಗ ದಟ್ಟಣೆಯಲ್ಲಿ ಸಿಲುಕುತ್ತಿದ್ದೇವೆ. ದಟ್ಟಣೆಗೆ ಪರಿಹಾರ ಸೂಚಿಸಿ. ರಸ್ತೆಯಲ್ಲಿ ನಿಲ್ಲುವುದನ್ನು ತಪ್ಪಿಸಿ’ ಎಂದು ಅಮೃತಹಳ್ಳಿ ನಿವಾಸಿ ರಾಕೇಶ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT