ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಮ ಉಲ್ಲಂಘನೆ ದಂಡ:‘ಪರಿಷ್ಕೃತ ದಂಡ ಶೀಘ್ರ ಜಾರಿ’

ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತ ಹೆಚ್ಚಳ
Last Updated 28 ಜೂನ್ 2019, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ವಿಧಿಸಲಾಗುವ ದಂಡದ ಮೊತ್ತವನ್ನು ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಗುರುವಾರ ಆದೇಶ ಹೊರಡಿಸಿದ್ದು, ಅದನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಇನ್ನೆರಡು ದಿನ ಬೇಕಾಗಬಹುದು’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ. ಹರಿಶೇಖರನ್ ಹೇಳಿದರು.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಂಡ ವಿಧಿಸಲು ಪೊಲೀಸರಿಗೆ 600 ಉಪಕರಣಗಳನ್ನು ನೀಡಲಾಗಿದ್ದು, ಅವುಗಳಲ್ಲಿ ಸದ್ಯ ಹಳೇ ದಂಡದ ಮೊತ್ತದ ವಿವರವಿದೆ. ಆ ಉಪಕರಣಗಳನ್ನು ಅಪ್‌ಡೇಟ್ ಮಾಡುವ ಕೆಲಸ ನಡೆಯುತ್ತಿದ್ದು, ಅದು ಪೂರ್ಣಗೊಂಡ ಬಳಿಕವೇ ಪರಿಷ್ಕೃತ ದಂಡ ವಿಧಿಸುವ ಕೆಲಸ ಆರಂಭವಾಗಲಿದೆ’ ಎಂದರು.

‘ಸಂಚಾರ ನಿಯಮ ಉಲ್ಲಂಘನೆ ಯಿಂದಲೇ ಅಪಘಾತಗಳು ಸಂಭವಿಸುತ್ತಿದ್ದ ಬಗ್ಗೆ ಪ್ರಕರಣಗಳ ಸಮೇತ 2018ರಲ್ಲಿ ಸಾರಿಗೆ ಇಲಾಖೆಗೆ ವರದಿ ಸಲ್ಲಿಸಲಾಗಿತ್ತು. ಜೊತೆಗೆ, 30 ಪ್ರಕಾರಗಳ ನಿಯಮ ಉಲ್ಲಂಘನೆ ತಡೆಯುವ ಸಂಬಂಧ ದಂಡದ ಮೊತ್ತ ಹೆಚ್ಚಳ ಮಾಡುವಂತೆಯೂ ಪ್ರಸ್ತಾವ ಸಲ್ಲಿಸಲಾಗಿತ್ತು. ಆ ಪೈಕಿ ನಾಲ್ಕು ಪ್ರಮುಖ ಉಲ್ಲಂಘನೆಗಳಿಗೆ ದಂಡದ ಮೊತ್ತ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ’ ಎಂದು ಹೇಳಿದರು.

ಹೊರವಲಯದ ರಸ್ತೆಗಳಲ್ಲೇ ಹೆಚ್ಚು ಉಲ್ಲಂಘನೆ: ‘ನಗರದೊಳಗೆ ವಾಹನ ಗಳ ದಟ್ಟಣೆ ಹೆಚ್ಚಾಗಿದ್ದು, ನಿಯಮ ಉಲ್ಲಂಘನೆ ಪ್ರಮಾಣವೂ ಕಡಿಮೆ. ಆದರೆ, ಹೊರ ವಲಯದ ರಸ್ತೆಗಳಲ್ಲಿ ಅದರ ಪ್ರಮಾಣ ಹೆಚ್ಚಿದೆ’ ಎಂದು ಹರಿಶೇಖರನ್ ಹೇಳಿದರು.

‘ಕೆ.ಆರ್‌.ಪುರ, ಯಲಹಂಕ ಸೇರಿ ದಂತೆ ಹಲವು ಠಾಣೆಗಳ ವ್ಯಾಪ್ತಿಯಲ್ಲಿರುವಹೊರವಲಯದ ರಸ್ತೆಗಳಲ್ಲಿ ಹೆಚ್ಚು ಅಪಘಾತಗಳು ಘಟಿಸುತ್ತಿವೆ. ಮೊತ್ತ ಹೆಚ್ಚಳ ಮಾಡಿರುವುದರಿಂದ, ಆ ರಸ್ತೆಗಳಲ್ಲಿ ವಾಹನ ಓಡಿಸುವ ಚಾಲಕರಿಗೆ ಎಚ್ಚರಿಕೆ ನೀಡಿದಂತಾಗಿದೆ. ಅವರೆಲ್ಲ ಬದಲಾದರೆ ಅಪಘಾತಗಳ ಸಂಖ್ಯೆ ಕಡಿಮೆ ಆಗಲಿದೆ’ ಎಂದು ಆಶಯ ವ್ಯಕ್ತಪಡಿಸಿದರು.

ಚಾಲಕರ ಸಭೆ ಶೀಘ್ರ: ‘ಮೊಬೈಲ್‌ನಲ್ಲಿ ಮಾತನಾಡುತ್ತ ಹಾಗೂ ಸೆಲ್ಫಿ ತೆಗೆದುಕೊಳ್ಳುತ್ತ ಚಾಲನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ತಾವೂ ಸಾಯುವುದರ ಜೊತೆಗೆ ಅಮಾಯಕರ ಪ್ರಾಣವನ್ನೂ ಕೆಲ ಚಾಲಕರು ಬಲಿ ಪಡೆಯುತ್ತಿದ್ದಾರೆ. ಹೀಗಾಗಿ ಮೊಬೈಲ್ ಬಳಕೆ ಮಾಡುತ್ತ ಚಾಲನೆ ಮಾಡುವವರಿಗೆ ವಿಧಿಸುವ ದಂಡದ ಮೊತ್ತವನ್ನೂ ಹೆಚ್ಚಳ ಮಾಡಲಾಗಿದೆ’ ಎಂದು ಹರಿಶೇಖರನ್‌ ಹೇಳಿದರು.

‘ಓಲಾ, ಉಬರ್‌ ಸೇರಿದಂತೆ ಹಲವು ಕಂಪನಿಯ 1.70 ಲಕ್ಷ ವಾಹ ನಗಳು ಹಾಗೂ 1 ಲಕ್ಷ ಆಟೊಗಳು ನಗರದಲ್ಲಿವೆ. ಮನೆ ಬಾಗಿಲಿಗೆ ಆಹಾರ ಸರಬರಾಜು ಮಾಡುವ ಕಂಪನಿಗಳ ಬೈಕ್‌ಗಳ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾ ಗಿದೆ. ಇವರೆಲ್ಲರೂ ಮೊಬೈಲ್‌ ಬಳಸುತ್ತಲೇ ಚಾಲನೆ ಮಾಡುತ್ತಿದ್ದು, ಇತರರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಅವರೆಲ್ಲರಿಗೂ ಸಭೆ ಏರ್ಪಡಿಸಿ ಜಾಗೃತಿ ಮೂಡಿಸಲಾಗುವುದು’ ಎಂದರು.

ಮಾಲೀಕರಿಗೆ ಪ್ರತ್ಯೇಕ ₹ 500 ದಂಡ

‘ಅತಿ ವೇಗದ ಚಾಲನೆ ಪ್ರಕರಣಗಳಲ್ಲಿ ವಾಹನಗಳ ಮಾಲೀಕರಿಗೆ ಪ್ರತ್ಯೇಕವಾಗಿ ₹500 ದಂಡ ವಿಧಿಸಲಾಗುವುದು’ ಎಂದು ಹರಿಶೇಖರನ್ ಅವರು ಹೇಳಿದರು.

‘ನಿಯಮ ಉಲ್ಲಂಘನೆಯಾಗದಂತೆ ವಾಹನ ಓಡಿಸುವ ಜವಾಬ್ದಾರಿ ಮಾಲೀಕನದ್ದು. ಕಾರು ಚಾಲಕನಿಗೆ ₹ 1,000 ದಂಡ ವಿಧಿಸಿದರೆ, ಮಾಲೀಕ ₹500 ದಂಡ ಪಾವತಿ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT