ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿಗಾಗಿ ದಿಢೀರ್‌ ಟೋಯಿಂಗ್: ಜನರಿಗೆ ಕಿರಿಕಿರಿ

ಪರ್ಯಾಯ ರಸ್ತೆ ನೆಪದಲ್ಲಿ ಪೊಲೀಸರ ಕಾರ್ಯಾಚರಣೆ
Last Updated 2 ಜನವರಿ 2020, 23:40 IST
ಅಕ್ಷರ ಗಾತ್ರ

ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಬಂದ ದಿನವೇ ಪರ್ಯಾಯ ರಸ್ತೆ ನೆಪದಲ್ಲಿ ಹಲವು ಖಾಸಗಿ ವಾಹನಗಳನ್ನು ದಿಢೀರ್‌ ಆಗಿ ಟೋಯಿಂಗ್ ಮಾಡಲಾಗಿದ್ದು, ಸಂಚಾರ ಪೊಲೀಸರ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರಿನಲ್ಲಿ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್ ಮೂಲಕ ನಗರದ ಎಚ್‌ಎಎಲ್‌ ನಿಲ್ದಾಣಕ್ಕೆ ನರೇಂದ್ರ ಮೋದಿ ಬಂದಿಳಿದರು. ಅಲ್ಲಿಂದಲೇ ಡಿಆರ್‌ಡಿಒ ಹಾಗೂ ರಾಜಭವನದತ್ತ ಹೋದರು. ಪ್ರಧಾನಿ ವಾಹನ ಸಂಚಾರಕ್ಕಾಗಿ ಕಬ್ಬನ್‌ ರಸ್ತೆಯನ್ನು ಮೊದಲೇ ನಿಗದಿಪಡಿಸಲಾಗಿತ್ತು. ಆ ರಸ್ತೆಯಲ್ಲೆಲ್ಲ ಸಿಬ್ಬಂದಿ ನಿಂತುಕೊಂಡಿದ್ದರು.ಪ್ರ

ಧಾನಿ ಬರುವ ಮುಂಚೆಯೇ ಅವರ ಭದ್ರತಾ ಸಿಬ್ಬಂದಿ ಹೇಳಿದರೆಂಬ ಕಾರಣಕ್ಕೆ ನಗರದ ಸಂಚಾರ ಪೊಲೀಸರು, ಎಂ.ಜಿ.ರಸ್ತೆಯನ್ನು ಪ್ರಧಾನಿ ಸಂಚರಿಸುವ ಪರ್ಯಾಯ ರಸ್ತೆಯೆಂದು ದಿಢೀರನೇ ಘೋಷಿಸಿದರು.

ಟೈಗರ್ ವಾಹನಗಳನ್ನು ಸ್ಥಳಕ್ಕೆ ಕರೆಸಿ ರಸ್ತೆ ಅಕ್ಕ–ಪಕ್ಕದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಸೇರಿದಂತೆ ಎಲ್ಲ ಪ್ರಕಾರದ ವಾಹನಗಳನ್ನು ಟೋಯಿಂಗ್ ಮಾಡಿಸಿದರು.

ಎಂ.ಜಿ.ರಸ್ತೆಯಲ್ಲಿ ಶಾಪಿಂಗ್‌ಗೆ ಬಂದಿದ್ದ, ಕಚೇರಿ ಕೆಲಸಕ್ಕೆ ಬಂದಿದ್ದ ಹಾಗೂ ಇತರೆ ಎಲ್ಲ ಸಾರ್ವಜನಿಕರ ವಾಹನಗಳನ್ನು ಕೆಲವೇ ನಿಮಿಷಗಳಲ್ಲಿ ಟೋಯಿಂಗ್ ಮಾಡಿಕೊಂಡು ಹೋಗಲಾಯಿತು. ಕೆಲ ನಿಮಿಷ ಬಿಟ್ಟು ನಿಗದಿತ ಸ್ಥಳಕ್ಕೆ ಬಂದರೂ ವಾಹನವಿಲ್ಲದಿರುವುದನ್ನು ಕಂಡು ಸವಾರರು ಗಾಬರಿಗೊಂಡರು.

‘‌ಯಾವುದೇ ಸಂಚಾರ ನಿಯಮವನ್ನೂ ಉಲ್ಲಂಘಿಸಿಲ್ಲ. ಅಷ್ಟಾದರೂ ದಿಢೀರನೇ ವಾಹನಗಳನ್ನು ಟೋಯಿಂಗ್ ಮಾಡಲಾಗಿದೆ. ಅದನ್ನು ಪ್ರಶ್ನಿಸಿದರೆ, ಪ್ರಧಾನಿ ಸಂಚಾರಕ್ಕಾಗಿ ಟೋಯಿಂಗ್ ಮಾಡಲಾಗಿದೆ ಎಂದಷ್ಟೇ ಪೊಲೀಸರು ಹೇಳುತ್ತಿದ್ದಾರೆ’ ಎಂದು ಖಾಸಗಿ ಕಂಪನಿ ನೌಕರ ಕೆ. ಆನಂದ್ ಹೇಳಿದರು.

‘ಪ್ರಧಾನಿ ನಗರಕ್ಕೆ ಬರುತ್ತಾರೆ ಎಂಬುದು ತಿಂಗಳ ಮುಂಚೆಯೇ ಪೊಲೀಸರಿಗೆ ಗೊತ್ತಿರುತ್ತದೆ. ಎಂ.ಜಿ.ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡಬಾರದೆಂದು ಒಂದು ದಿನದ ಮುಂಚೆಯೇ ಹೇಳಬಹುದಿತ್ತು. ಇಲ್ಲಿ ಪೊಲೀಸರು ತಮ್ಮಿಷ್ಟಕ್ಕೆ ಬಂದಂತೆ ವರ್ತಿಸಿ ಬೈಕ್ ಟೋಯಿಂಗ್ ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎನ್‌ಎಸ್‌ಜಿ ಹೇಳಿದಂತೆ ಕೆಲಸ: ದಿಢೀರ್ ಟೋಯಿಂಗ್ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಗರದ ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್‌.ರವಿಕಾಂತೇಗೌಡ ಲಭ್ಯರಾಗಿಲ್ಲ.

ವಾಹನಗಳನ್ನು ಟೋಯಿಂಗ್ ಮಾಡುವ ಕರ್ತವ್ಯದಲ್ಲಿದ್ದ ಇನ್‌ಸ್ಪೆಕ್ಟರ್‌ ಅವರನ್ನು ಪ್ರಶ್ನಿಸಿದಾಗ, ‘ಪ್ರಧಾನಿ ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆ ಮೀಸಲಿಡಬೇಕೆಂದು ರಾಷ್ಟ್ರೀಯ ಭದ್ರತಾ ದಳದ (ಎನ್‌ಎಸ್‌ಜಿ) ಅಧಿಕಾರಿಗಳು ಹೇಳಿದ್ದರು. ಕಬ್ಬನ್ ರಸ್ತೆಗೆ ಪರ್ಯಾಯವಾಗಿ ಎಂ.ಜಿ.ರಸ್ತೆ ಮೀಸಲಿಡಲಾಗಿತ್ತು. ಹೀಗಾಗಿ, ವಾಹನಗಳನ್ನು ಟೋಯಿಂಗ್ ಮಾಡಲಾಯಿತು’ ಎಂದರು.

ವಾಹನಗಳನ್ನು ಟೋಯಿಂಗ್ ಮಾಡಿಸಿ ಇಡೀ ರಸ್ತೆಯನ್ನೇ ಖಾಲಿ ಮಾಡಿಸಿದರೂ ಪ್ರಧಾನಿ ವಾಹನ ಮಾತ್ರ ಈ ರಸ್ತೆಯಲ್ಲಿ ಹಾದು ಹೋಗಲಿಲ್ಲ. ನಿಗದಿಯಂತೆ ಕಬ್ಬನ್ ರಸ್ತೆಯಲ್ಲೇ ಪ್ರಧಾನಿ ವಾಹನ ಸಂಚರಿಸಿತು.

ಸಾಲುಗಟ್ಟಿ ನಿಂತ ವಾಹನಗಳು
ಪ್ರಧಾನಿ ಅವರ ವಾಹನದ ಸಂಚಾರಕ್ಕಾಗಿ ಹಲವೆಡೆ ಖಾಸಗಿ ವಾಹನಗಳನ್ನು ತಡೆದು ನಿಲ್ಲಿಸಲಾಗಿತ್ತು. ಅಂಥ ರಸ್ತೆಗಳಲ್ಲಿ ನಿಮಿಷಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಅತೀ ಹೆಚ್ಚು ದಟ್ಟಣೆ ಇರುವ ಸಂಜೆ ವೇಳೆಯಲ್ಲೇ ಪ್ರಧಾನಿ ಅವರು ಎಚ್‌ಎಎಲ್‌ನಿಂದ ಹೊರಟಿದ್ದರು. ಅದಕ್ಕಾಗಿ ಪ್ರಮುಖ ರಸ್ತೆಯಲ್ಲಿ ವಾಹನಗಳ ಸಂಚಾರವನ್ನೇ ನಿರ್ಬಂಧಿಸಲಾಗಿತ್ತು. ಒಳ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಗಟ್ಟಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರಿದ್ದ ವಾಹನ ಹಾಗೂ ಬೆಂಗಾವಲು ವಾಹನಗಳು ರಸ್ತೆ ದಾಟಿ ಹೋಗುವವರೆಗೂ ಖಾಸಗಿ ವಾಹನಗಳ ಓಡಾಟವಿರಲಿಲ್ಲ. ವಾಹನಗಳ ಸಮೇತ ರಸ್ತೆಯಲ್ಲೇ ನಿಂತಿದ್ದ ಜನರೆಲ್ಲರೂ ರಸ್ತೆಯಲ್ಲೇ ಕಾದು ಪರದಾಡಿದರು.

ಈ ಸಂಬಂಧ ಟ್ವೀಟ್ ಮಾಡಿರುವ ಮಹಿಳೆಯೊಬ್ಬರು, ‘ಪ್ರಧಾನಿಯವರೇ ನಿಮಗೆ ಧನ್ಯವಾದ. ನನ್ನ ಸಂಜೆಯನ್ನು ರಸ್ತೆಯಲ್ಲೇ ಕಳೆಯುವಂತೆ ಮಾಡಿ ಹಾಳು ಮಾಡಿದ್ದಕ್ಕೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT