ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಂದು ಸಮುದಾಯವನ್ನು ದೋಷಿಯಾಗಿಸುವ ಧಾವಂತ’

ಡಿ.ಜೆ.ಹಳ್ಳಿ ಪ್ರಕರಣ: ನಾಗರಿಕ ಸಮಾಜ ಸಂಘಟನೆಗಳ ಸತ್ಯಶೋಧನಾ ವರದಿ
Last Updated 28 ಸೆಪ್ಟೆಂಬರ್ 2020, 20:11 IST
ಅಕ್ಷರ ಗಾತ್ರ

ಬೆಂಗಳೂರು: ಡಿ.ಜೆ ಹಳ್ಳಿ, ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆ ಮತ್ತು ಹಿಂಸಾಚಾರಕ್ಕೆ ಕಾರಣವಾದ ಫೇಸ್‌ಬುಕ್‌ ಪೋಸ್ಟ್ ಹಾಗೂ ನಿಜವಾದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುವ ಬದಲು, ಈ ಘಟನೆಯಲ್ಲಿ ಒಂದು ಸಮುದಾಯವನ್ನು ದೋಷಿಯನ್ನಾಗಿಸುವ, ಒಂಟಿಯಾಗಿಸುವ ಧಾವಂತ ನಡೆದಿದೆ’ ಎಂದು ಬೆಂಗಳೂರಿನ ನಾಗರಿಕ ಸಮಾಜ ಸಂಘಟನೆಗಳ ಸತ್ಯಶೋಧನಾ ತಂಡ ಅಭಿಪ್ರಾಯಪಟ್ಟಿದೆ.

ಪೊಲೀಸರ ಗುಂಡೇಟಿಗೆ ಬಲಿಯಾದವರು, ಗಾಯಗೊಂಡವರು, ಬಂಧನಕ್ಕೆ ಒಳಗಾದವರು ಮತ್ತು ಘಟನೆಯಲ್ಲಿ ಬಾಧಿತರಾದವರ ಕುಟುಂಬಗಳನ್ನು ಭೇಟಿ ಮಾಡಿ ತಂಡ ವರದಿ ಸಿದ್ಧಪಡಿಸಿದೆ.

‘ನವೀನ್‌ ಹಾಕಿದ್ದ ಅವಹೇಳನಕಾರಿ ಪೋಸ್ಟ್‌ನ ಉದ್ದೇಶ ಮತ್ತು ಪ್ರೇರಣೆ ಬಗ್ಗೆ ಪೊಲೀಸರು ತನಿಖೆ ನಡೆಸಿಲ್ಲ. ಆದರೆ, ಗಲಭೆಕೋರರ ಗುಂಪನ್ನು ಕಣ್ಣಿಗೆ ಕಾಣುವ ಯಾವ ನಾಯಕತ್ವವೂ ನಿರ್ದೇಶನ ಮಾಡಿದಂತೆ ಕಾಣುತ್ತಿಲ್ಲ. ಹೀಗಾಗಿ, ಹಿಂಸಾಚಾರಕ್ಕೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ, ಗುಪ್ತಚರ ವೈಫಲ್ಯ ಕಾರಣವಾಗಿದೆ. ಘಟನೆಗೆ ಅಮಾಯಕರು ಬೆಲೆ ತೆತ್ತಿದ್ದಾರೆ. ಆದರೆ, ಅವರ ಧ್ವನಿಗಳನ್ನು ಆಲಿಸದೆ, ಇಡೀ ಸಮುದಾಯವನ್ನು ಅಪರಾಧಿಗಳಂತೆ ಕಾಣುವ ಬೃಹತ್‌ ಕಾರ್ಯಸೂಚಿ ಇದರ ಹಿಂದೆ ಇದ್ದಂತೆ ಕಾಣುತ್ತದೆ’ ಎಂದೂ ವರದಿ ಹೇಳಿದೆ.

‘ಇದೊಂದು ಸ್ಥಳೀಯ ಘಟನೆ. ಮುಂಬರುವ ಪಾಲಿಕೆ ಚುನಾವಣೆ ಸೇರಿದಂತೆ ತಕ್ಷಣ ರಾಜಕೀಯ ಲಾಭಕ್ಕೆ ಬಳಸಿಕೊಂಡಂತೆ ಕಾಣುತ್ತಿದೆ. ಇದನ್ನು ಕೋಮುವಾದಿ ಅಥವಾ ಪೂರ್ವಯೋಜಿತ ದಾಳಿ ಎಂದು ಋಜುವಾತುಪಡಿಸಲು ಸಾಧ್ಯವಿಲ್ಲ. ಯುಎಪಿಎ ಕಾಯ್ದೆಯ ಅನಿಯಂತ್ರಿತ ಬಳಕೆ ಮತ್ತು ಪ್ರಕರಣವನ್ನು ಎನ್‌ಐಎಗೆ ಒಪ್ಪಿಸುವ ಪ್ರಸ್ತಾವವು ಇಡೀ ಮುಸ್ಲಿಂ ಸಮುದಾಯವನ್ನು ದೇಶದ್ರೋಹಿಗಳಂತೆ ಕಾಣಿಸುವ ರಾಜ್ಯ ಸರ್ಕಾರದ ಯತ್ನದ ಕೂಡ ಇಡೀ ಘಟನೆ ಹಿಂದೆ ಇದ್ದಂತಿದೆ ’ ಎಂದೂ ವರದಿ ವಿಶ್ಲೇಷಿಸಿದೆ.

ಪಿಯುಸಿಎಲ್‌ನ ರಾಜ್ಯ ಘಟಕದ ಅಧ್ಯಕ್ಷ ಪ್ರೊ. ವೈ.ಜೆ. ರಾಜೇಂದ್ರ,‌ ರಾಜ್ಯ ಮಕ್ಕಳ ಆಯೋಗದ ಮಾಜಿ ಅಧ್ಯಕ್ಷೆ ನೀನಾ ನಾಯಕ್‌, ಪತ್ರಕರ್ತ ಸಿಂಥಿಯಾ ಸ್ಟಿಫನ್‌, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ವಿ. ನಾಗರಾಜ್‌,ದಲಿತ ಸಂಘರ್ಷ ಸಮಿತಿಯ (ಭೀಮವಾದ) ಮೋಹನ್‌ ರಾಜ್‌, ಸ್ತ್ರೀ ಜಾಗೃತಿಯ ಗೀತಾ ಮೆನನ್, ಪರಿಸರ ನೆರವು ಸಮಿತಿಯ ಸಂಚಾಲಕ ಲಿಯೋ ಸಲ್ಡಾನ‌ ಮತ್ತಿತರರು ತಂಡದಲ್ಲಿದ್ದರು.

ರಾಜ್ಯ ಸರ್ಕಾರಕ್ಕೆ ಶಿಫಾರಸು

‘ಪೊಲೀಸರ ವೈಫಲ್ಯ, ಗುಪ್ತಚರ ಇಲಾಖೆಯ ಕಾರ್ಯವೈಖರಿಯನ್ನು ತನಿಖೆ ಒಳಪಡಿಸಬೇಕು. ಗಲಭೆ ನಡೆದ ಪ್ರದೇಶದವರಿಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು. ಸಾಚಾರ್‌ ಸಮಿತಿಯ ವರದಿ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಇರುವ 15 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಮುಸ್ಲಿಮರ ಬಗೆಗಿನ ದ್ವೇಷ ಮತ್ತು ಭೀತಿಯನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು. ಎಲ್ಲ ಸಮುದಾಯದವರನ್ನು ಒಳಗೊಂಡ ಶಾಂತಿ ಸಮಿತಿ ರಚಿಸಬೇಕು. ಯುಎಪಿಎ ಕಾಯ್ದೆಯಲ್ಲಿ ದಾಖಲಿಸಿದ ಪ್ರಕರಣಗಳನ್ನು ಕೈಬಿಡಬೇಕು. ತಪ್ಪಿತಸ್ಥರೆಂದು ಗುರುತಿಸಿದ ಬಳಿಕವಷ್ಟೆ ನಷ್ಟ ವಸೂಲಿ ಪ್ರಕ್ರಿಯೆ ನಡೆಸಬೇಕು. ದ್ವೇಷಪೂರಿತ ಹೇಳಿಕೆಗಳನ್ನು ನೀಡಿದ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಚುನಾಯಿತ 62 ಪ್ರತಿನಿಧಿಗಳ ವಿರುದ್ಧ ದಾಖಲಾಗಿದ್ದ ಅಪರಾಧ ಪ್ರಕರಣಗಳನ್ನು ಕೈಬಿಡುವ ನಿರ್ಧಾರವನ್ನು ವಾಪಸ್ ಪಡೆಯಬೇಕು’ ಎಂದೂ ತಂಡ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT