ಮಂಗಳವಾರ, ಮೇ 11, 2021
19 °C
ತುರಹಳ್ಳಿ ಅರಣ್ಯದಲ್ಲಿ ಪತ್ತೆಯಾಗಿದ್ದ ಮೃತದೇಹ *ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರ ಬಂಧನ

ಹಣಕ್ಕಾಗಿ ವ್ಯಕ್ತಿಯ ಕೊಲೆಗೈದು ಕಾರು ಮಾರಲು ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಾಲ ತೀರಿಸುವ ಉದ್ದೇಶದಿಂದ ಸಹೋದ್ಯೋಗಿಯನ್ನು ಕೊಲೆ ಮಾಡಿ, ಮೃತದೇಹವನ್ನು ಸುಟ್ಟು ಹಾಕಿ, ಅವರ ಕಾರನ್ನು ಬೇರೆ ರಾಜ್ಯಕ್ಕೆ ಮಾರುವ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ತಲಘಟ್ಟಪುರದ ಮಲ್ಲಸಂದ್ರ ಗ್ರಾಮದ ನಾಗರಾಜು ವೆಂಕಣ್ಣ ಗಾಣಿಗರ್ (29), ವಿಜಯಪುರದ ಅರುಣ್ ರಾಥೋಡ್ (26), ಎಚ್‌.ಗೊಲ್ಲಹಳ್ಳಿಯ ಮಂಜು (25), ಜೆ.ಪಿ.ನಗರದ ಪರಶುರಾಮ (25) ಬಂಧಿತರು.

ಮಾ.28ರಂದು ತುರಹಳ್ಳಿ ಅರಣ್ಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಮೃತದೇಹವೊಂದು ಪತ್ತೆಯಾಗಿತ್ತು. ಈ ವಿಚಾರವನ್ನು ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದರು. ಕೊಲೆ ಮಾಡಿದ ನಂತರ ಮೃತದೇಹವನ್ನು ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ಶಂಕಿಸಿದ್ದರು.

‘ತನಿಖೆ ಆರಂಭಿಸಿದಾಗ ಆ ಮೃತದೇಹ ತಲಘಟ್ಟಪುರದ ತಿಪ್ಪಸಂದ್ರದಲ್ಲಿ ವಾಸವಿದ್ದ ಹಾಗೂ ಶಶಿಕುಮಾರ್ ಎಂಬುವರ ಬಳಿ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದ ಎ.ಆರ್.ರಾಜಕುಮಾರ್ ಅವರದ್ದು ಎಂದು ತಿಳಿಯಿತು. ಆರೋಪಿ ನಾಗರಾಜು ಅದೇ ಜಾಗದಲ್ಲಿ ಟಿಪ್ಪರ್ ಚಾಲಕನಾಗಿದ್ದ. ಈತನೊಂದಿಗೆ ಬಾಲಕನೂ ಕ್ಲೀನರ್ ಕೆಲಸ ಮಾಡಿಕೊಂಡಿದ್ದ. ಮೃತ ವ್ಯಕ್ತಿ ಹಾಗೂ ಆರೋಪಿ ಇಬ್ಬರೂ ಶಶಿಕುಮಾರ್ ಅವರಿಗೆ ಸೇರಿದ್ದ ಜಮೀನಿನಲ್ಲಿ ನಿರ್ಮಿಸಿದ್ದ ಶೆಡ್‌ಗಳಲ್ಲಿ ವಾಸವಿದ್ದರು’ ಎಂದು ಪೊಲೀಸರು ತಿಳಿಸಿದರು.

ಕೊಲೆ ನಡೆದಿದ್ದು ಹೇಗೆ?: ‘ಆರೋಪಿ ನಾಗರಾಜ್, ಹಲವು ಕಡೆ ಸಾಲಗಳನ್ನು ಮಾಡಿಕೊಂಡಿದ್ದ. ಇದನ್ನು ತೀರಿಸಬೇಕೆಂಬ ಉದ್ದೇಶದಿಂದ ರಾಜಕುಮಾರ್ ಅವರನ್ನು ಕೊಲೆ ಮಾಡಿ, ಅವರ ಕಾರನ್ನು ಮಾರಾಟ ಮಾಡಿ ಹಣ ಪಡೆಯಲು ಯೋಜನೆ ರೂಪಿಸಿದ್ದ. ಅದರಂತೆ ಕ್ಲೀನರ್‌ ಬಾಲಕನ ನೆರವಿನಿಂದ ರಾಜಕುಮಾರ್ ಅವರನ್ನು ಕೋಣೆಯಲ್ಲಿ ಮಚ್ಚು ಹಾಗೂ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದರು. ಬಳಿಕ ಶವವನ್ನು ಮೃತರ ಕಾರಿನಲ್ಲೇ ತುರಹಳ್ಳಿ ಅರಣ್ಯಕ್ಕೆ ಸಾಗಿಸಿದ್ದರು. ಮೃತರ ಬಳಿ ಇದ್ದ ಚಿನ್ನಾಭರಣ, ಮೊಬೈಲ್‌ ತೆಗೆದುಕೊಂಡು, ಅರಣ್ಯದ ತಂತಿ ಬೇಲಿ ಬಳಿ ಇದ್ದ ಚರಂಡಿಯಲ್ಲಿ ಹಾಕಿ ಇಂಧನದೊಂದಿಗೆ ಸುಟ್ಟು ಹಾಕಿದ್ದರು’ ಎಂದು ವಿವರಿಸಿದರು.

‘ಮೃತರ ಮಾಹಿತಿ ಸಿಕ್ಕ ನಂತರ ಅವರ ಮೊಬೈಲ್‌ ಕರೆಗಳ ವಿವರ ಪಡೆಯಲಾಯಿತು. ಪೊಲೀಸರು ವಿಚಾರಣೆಗೆಂದು ತೆರಳಿದ್ದಾಗ ಆರೋಪಿ ನಾಗರಾಜು ವೆಂಕಣ್ಣ ಹಾಗೂ ಕ್ಲೀನರ್ ಬಾಲಕ ಅನುಮಾನ ಬರುವಂತೆ ವರ್ತಿಸಿದ್ದರು. ಬಳಿಕ ಬೆಂಗಳೂರಿನಿಂದ ಪರಾರಿಯಾಗಲು ಯತ್ನಿಸಿದ್ದರು. ಈ ಮಾಹಿತಿ ಆಧರಿಸಿ ಇಬ್ಬರನ್ನೂ ವಶಕ್ಕೆ ಪಡೆಯಲಾಯಿತು’ ಎಂದು ವಿವರಿಸಿದರು.

‘ಮತ್ತೊಬ್ಬ ಆರೋಪಿ ಅರುಣ್ ಹಾಗೂ ನಾಗರಾಜು ಸ್ನೇಹಿತರು. ಮೃತರ ಬಳಿ ಇದ್ದ ಕಾರನ್ನು ಮಾರುವ ಬಗ್ಗೆ ಮೊದಲೇ ಯೋಜನೆ ರೂಪಿಸಿದ್ದರು. ಕೊಲೆಗೂ ಮುನ್ನ ಕಾರಿನ ಫೊಟೊ ಕಳುಹಿಸಿದ್ದ. ಅರುಣ್‌ಗೆ ಪರಿಚಯವಿದ್ದ ಮಂಜು ಹಾಗೂ ಪರಶುರಾಮ ಕಾರಿನ ಸಂಖ್ಯೆಯನ್ನು ಗೋವಾ ನೋಂದಣಿಗೆ ಬದಲಾಯಿಸಿ, ಮಾರಲು ನೆರವಾಗಿದ್ದರು. ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ. ಕಾರನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು