ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ರಸ್ತೆ ಫ್ಲೈ ಓವರ್: 45 ದಿನಗಳಾದರೂ ಮುಗಿಯದ ದುರಸ್ತಿ ಕಾಮಗಾರಿ!

45 ದಿನಗಳಾದರೂ ಮುಗಿಯದ ದುರಸ್ತಿ ಕಾಮಗಾರಿ: ಸವಾರರ ಆಕ್ರೋಶ
Last Updated 8 ಫೆಬ್ರುವರಿ 2022, 1:13 IST
ಅಕ್ಷರ ಗಾತ್ರ

ಬೆಂಗಳೂರು: ದುರಸ್ತಿ ಕಾರ್ಯ ನಡೆಯುತ್ತಿರುವ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯಲ್ಲಿ ಸಾಮರ್ಥ್ಯ ಪರೀಕ್ಷೆ (ಲೋಡ್‌ ಟೆಸ್ಟಿಂಗ್‌) ನಡೆಸಲಾಗಿದೆ.

ಭಾನುವಾರ ಮತ್ತು ಸೋಮವಾರ ಈ ಪರೀಕ್ಷೆ ಕೈಗೊಳ್ಳಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್ಸಿ) ತಜ್ಞರು ಈಗಾಗಲೇ ಮೇಲ್ಸೇತುವೆ ದುರಸ್ತಿ ಕಾಮಗಾರಿ ಪರಿಶೀಲಿಸಿದ್ದಾರೆ. ತಜ್ಞರು ಅನುಮೋದನೆ ನೀಡಿದ ಬಳಿಕ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆ ಇದೆ. ಬಹುತೇಕ ಈ ವಾರಾಂತ್ಯಕ್ಕೆ ವಾಹನ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕೊನೆಗೂ ಸಾಮರ್ಥ್ಯ ಪರೀಕ್ಷೆ ಪ್ರಕ್ರಿಯೆ ಆರಂಭವಾಗಿದೆ’ ಎಂದು ಡಿಸಿಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಅವರು ಟ್ವೀಟ್‌ ಮಾಡಿದ್ದಾರೆ.

ಈ ಮೇಲ್ಸೇತುವೆಯ 102 ಮತ್ತು 103ನೇ ಕಂಬಗಳನ್ನು ಸಂಪರ್ಕಿಸುವ ಕೇಬಲ್‌ಗಳಲ್ಲಿ ದೋಷ ಕಂಡು ಬಂದಿದ್ದರಿಂದ ಡಿಸೆಂಬರ್‌ 25ರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ಎಐ) ವಾಹನ ಸಂಚಾರ ನಿರ್ಬಂಧಿಸಿ ದುರಸ್ತಿ ಕಾಮಗಾರಿ ಕೈಗೊಂಡಿತ್ತು.

ಈ ಮೇಲ್ಸೇತುವೆಯ ಎರಡು ಪಥಗಳಲ್ಲಿ ಪ್ರತಿ ದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದವು. ಸಂಚಾರಕ್ಕೆ ನಿರ್ಬಂಧ ವಿಧಿಸಿದ ಬಳಿಕ ಸರ್ವಿಸ್‌ ರಸ್ತೆಯಲ್ಲಿ ಪ್ರತಿ ನಿತ್ಯ ದಟ್ಟಣೆಯಾಗಿ ವಾಹನ ಚಾಲಕರು ಪರದಾಡುವಂತಾಗಿದೆ.

ಮೇಲ್ಸೇತುವೆಯ ದುರಸ್ತಿ ವಿಳಂಬಕ್ಕೆ ವಾಹನ ಸವಾರರು ಪ್ರತಿನಿತ್ಯ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘45 ದಿನಗಳಾದರೂ ದುರಸ್ತಿ ಕಾರ್ಯ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಾಧ್ಯವಾಗಿಲ್ಲ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಈ ಮಾರ್ಗದಲ್ಲಿ ಸಂಚರಿಸಲು ಹರಸಾಹಸ ಮಾಡಬೇಕಾಗಿದೆ. ಎನ್‌ಎಚ್‌ಎಐ ವಾಹನ ಸವಾರರ ತಾಳ್ಮೆ ಪರೀಕ್ಷಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.

‘ಕೇವಲ ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಸಂಚಾರ ಪೊಲೀಸರಿಗೆ ಎನ್‌ಎಚ್‌ಎಐ ತಿಳಿಸಿತ್ತು. ಆದರೆ, ಇದುವರೆಗೂ ಸಾಧ್ಯವಾಗಿಲ್ಲ’ ಎಂದು ದೂರಿದ್ದಾರೆ.

‘ಪೀಣ್ಯ ಮೇಲ್ಸೇತುವೆಯಲ್ಲಿನ ದುರಸ್ತಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಮೇಲ್ಸೇತುವೆಯಲ್ಲಿ ಸಂಚಾರ ನಿರ್ಬಂಧ ವಿಧಿಸಿರುವುದರಿಂದ ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಮಾರ್ಗದಲ್ಲಿ ಸಂಚಾರ ನಿರ್ಬಂಧ ತೆರವುಗೊಳಿಸುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯೂ ಇಲ್ಲ’ ಎಂದು ಸಂಸದ ಡಿ.ವಿ. ಸದಾನಂದಗೌಡ ಹಾಗೂ ಶಾಸಕ ಆರ್‌.ಮಂಜುನಾಥ್‌ ಅವರು ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT