ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದೊಳಗಿನ ಅರಣ್ಯಪ್ರದೇಶಕ್ಕೆ ಭದ್ರತೆಯಿಲ್ಲ !

ಬೇಕಿದೆ ವೀಕ್ಷಣಾ ಗೋಪುರ, ಸಿಸಿಟಿವಿ ಕ್ಯಾಮೆರಾ ಕಣ್ಗಾವಲು, ಬೇಲಿಯ ರಕ್ಷಣೆ
Last Updated 22 ಜುಲೈ 2021, 20:25 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯೊಳಗೇ 2,400 ಎಕರೆಗೂ ಹೆಚ್ಚು ವಿಸ್ತಾರದ ಅರಣ್ಯಪ್ರದೇಶವಿದೆ. ಮಹಾನಗರಕ್ಕೆ ಹೊಂದಿಕೊಂಡಂತೆ ಇಷ್ಟು ವಿಶಾಲ ಪ್ರದೇಶದಲ್ಲಿ ಅರಣ್ಯ ಹರಡಿಕೊಂಡ ನಗರ ತೀರಾ ಅಪರೂಪ.‘ಆಮ್ಲಜನಕ ಉತ್ಪಾದನೆಯ ದೊಡ್ಡ ಕಾರ್ಖಾನೆ’ಯಂತಿರುವ ತುರಹಳ್ಳಿ ಹಾಗೂ ಬಿ.ಎಂ. ಕಾವಲ್‌ ಅರಣ್ಯಪ್ರದೇಶದ ರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳು ಯಾವುದಕ್ಕೂ ಸಾಲದು ಎನ್ನುತ್ತಾರೆ ಪರಿಸರ ಪ್ರೇಮಿಗಳು.

‘ಬಿ.ಎಂ. ಕಾವಲ್‌ ಮತ್ತು ತುರಹಳ್ಳಿ ಅರಣ್ಯಪ್ರದೇಶದಲ್ಲಿ ಬೇಸಿಗೆಯ ವೇಳೆ ಆಗಾಗ ಕಾಳ್ಗಿಚ್ಚು ಕಾಣಿಸಿಕೊಳ್ಳುತ್ತದೆ. ಒಮ್ಮೆ ಬೆಂಕಿ ಬಿದ್ದಾಗ ಕನಿಷ್ಠ ಐದಾರು ಎಕರೆಯಷ್ಟು ಪ್ರದೇಶಕ್ಕೆ ಅದು ವ್ಯಾಪಿಸಿಕೊಳ್ಳುತ್ತದೆ. ದೊಡ್ಡಪ್ರಾಣಿಗಳು ಹೇಗೋ ಓಡಿ ಹೋಗಿ ತಪ್ಪಿಸಿಕೊಳ್ಳುತ್ತವೆ. ಆದರೆ, ಸೂಕ್ಷ್ಮಜೀವಿಗಳು, ಕ್ರಿಮಿಕೀಟಗಳು, ಸರೀಸೃಪಗಳು, ಅಮೂಲ್ಯ ಸಸ್ಯಸಂಪತ್ತು ನಾಶವಾಗುತ್ತವೆ. ಇದಕ್ಕಾಗಿ ಅರಣ್ಯಪ್ರದೇಶದ ಒಂದೆರಡು ಕಡೆ ವೀಕ್ಷಣಾ ಗೋಪುರ (ವಾಚ್‌ ಟವರ್‌) ನಿರ್ಮಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ಚಂದ್ರಶೇಖರ್‌ ಹೇಳಿದರು.

16 ಅಡಿ ಎತ್ತರದ ಸಾಮಾನ್ಯ ವೀಕ್ಷಣಾ ಗೋಪುರಕ್ಕೆ ₹5 ಲಕ್ಷ, ಕಾಂಕ್ರೀಟ್‌ ಕಂಬದಿಂದ ಕಟ್ಟುವ ವೀಕ್ಷಣಾ ಗೋಪುರಕ್ಕೆ ₹11 ಲಕ್ಷ ಖರ್ಚಾಗುತ್ತದೆ. ಬೈನಾಕುಲರ್‌, ಟೆಲಿಸ್ಕೋಪ್‌ ಬಳಸಿಕೊಂಡು ಸುಮಾರು ಐದಾರು ಕಿ.ಮೀ. ವ್ಯಾಪ್ತಿಯವರೆಗಿನ ಅರಣ್ಯ ಪ್ರದೇಶದ ಮೇಲೆ ನಿಗಾ ಇಡಬಹುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಕಳೆದ ಒಂದೇ ವರ್ಷದಲ್ಲಿ ಎಂಟು ಬಾರಿ ಈ ರೀತಿಯ ಬೆಂಕಿ ಹತ್ತಿಕೊಂಡು ಸೂಕ್ಷ್ಮಜೀವಿಗಳು, ಔಷಧಿ ಸಸ್ಯಗಳು ನಾಶವಾಗಿವೆ.

‘ಜನವರಿಯಿಂದ–ಏಪ್ರಿಲ್‌ವರೆಗೆ ಹೆಚ್ಚು ಬಿಸಿಲು ಇದ್ದು, ಕಾಳ್ಗಿಚ್ಚು ಹಬ್ಬುವುದು ಸಾಮಾನ್ಯವಾಗಿರುತ್ತದೆ. ಈ ವೇಳೆ ನಿಗಾ ಇಡುವುದು ತೀರಾ ಅವಶ್ಯಕ. ಬೇರೆ ಸಂದರ್ಭಗಳಲ್ಲಿ ಕೆಲವು ಕಿಡಿಗೇಡಿಗಳು ಕೂಡ ಅರಣ್ಯಪ್ರದೇಶದಲ್ಲಿನ ಮರಗಳಿಗೆ ಬೆಂಕಿ ಇಟ್ಟಿದ್ದ ಉದಾಹರಣೆಗಳು ಇವೆ. ವೀಕ್ಷಣಾ ಗೋಪುರದಿಂದ ನಿಗಾ ವ್ಯವಸ್ಥೆ ಇದ್ದರೆ, ಹೊಗೆ ಕಂಡಕೂಡಲೇ ಕಾರ್ಯಪ್ರವೃತ್ತವಾಗಲು ಸಾಧ್ಯವಾಗುತ್ತದೆ. ಬೆಂಕಿ ಹೆಚ್ಚು ವ್ಯಾಪಿಸುವುದನ್ನು ತಪ್ಪಿಸಬಹುದು’ ಎಂದು ಚಂದ್ರಶೇಖರ್ ಹೇಳಿದರು.

‘ಚಿರತೆ, ಆನೆ, ನವಿಲು, ಮೊಲ, ಜಿಂಕೆ, ಮುಂಗುಸಿ, ನರಿ ಸೇರಿದಂತೆ ಅನೇಕ ಪ್ರಾಣಿಗಳು ಅರಣ್ಯದೊಳಗೆ ಇವೆ. ಮೊಲ, ಜಿಂಕೆಯನ್ನು ಬೇಟೆಯಾಡಿ ತೆಗೆದುಕೊಂಡು ಹೋಗುತ್ತಿರುವ ಪ್ರಕರಣಗಳೂ ವರದಿಯಾಗುತ್ತಿವೆ. ಅಲ್ಲದೆ, ಅರಣ್ಯ ಪ್ರದೇಶದ ಒತ್ತುವರಿ ಆಗುವುದನ್ನೂ ಪತ್ತೆ ಹಚ್ಚಲು ಸುಲಭವಾಗುತ್ತದೆ’ ಎಂದರು.

ತಂತಿಬೇಲಿ ಇರಲಿ:

‘ವೀಕ್ಷಣಾ ಗೋಪುರದ ಜೊತೆಗೆ, ಅರಣ್ಯದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ಕಚೇರಿಯಿಂದಲೇ ನಿಗಾ ಇಡುವ ಕಾರ್ಯವನ್ನು ಇಲಾಖೆ ಮಾಡಿದರೆ ಉತ್ತಮ’ ಎಂದು ತುರಹಳ್ಳಿ ನಿವಾಸಿ ಅರುಣ್‌ಕುಮಾರ್‌ ಹೇಳಿದರು.

‘ಅರಣ್ಯಪ್ರದೇಶದ ಹಲವು ಕಡೆ ಇನ್ನೂ ತಂತಿಬೇಲಿಯನ್ನು ಹಾಕಿಲ್ಲ. ಯಾರು ಬೇಕಾದರೂ ಅರಣ್ಯಪ್ರದೇಶದೊಳಗೆ ಸುಲಭವಾಗಿ ಹೋಗಿ ಬಂದರೂ ಕೇಳುವವರು ಯಾರೂ ಇಲ್ಲ. ತಂತಿಬೇಲಿ ಅಳವಡಿಕೆಗೂ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಅಂಕಿ–ಅಂಶ


1,382 ಎಕರೆ:ಬಿ.ಎಂ. ಕಾವಲ್‌ ಅರಣ್ಯ ಪ್ರದೇಶದ ವಿಸ್ತೀರ್ಣ

529 ಎಕರೆ: ತುರಹಳ್ಳಿ ಕಿರುಅರಣ್ಯ ಪ್ರದೇಶದ ವಿಸ್ತೀರ್ಣ

519 ಎಕರೆ: ತುರಹಳ್ಳಿ ರಾಜ್ಯಮೀಸಲು ಅರಣ್ಯಪ್ರದೇಶದ ವಿಸ್ತೀರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT