ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಕಾರು ಹಿಂಬಾಲಿಸಿ ಯುವತಿಗೆ ಕಿರುಕುಳ: ಇಬ್ಬರು ವಶಕ್ಕೆ

*ಆಸ್ಪತ್ರೆಯಿಂದ ಮನೆಗೆ ಹೊರಟಿದ್ದ ಪತಿ– ಪತ್ನಿ * ಅಪಘಾತ ಮಾಡಿದ್ದಕ್ಕೆ ಬೆನ್ನಟ್ಟಿದ್ದ ಆರೋಪಿಗಳು
Published 1 ಏಪ್ರಿಲ್ 2024, 10:44 IST
Last Updated 1 ಏಪ್ರಿಲ್ 2024, 10:44 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ಪತ್ರೆಯಿಂದ ಮನೆಗೆ ಹೊರಟಿದ್ದ ದಂಪತಿಯ ಕಾರು ಹಿಂಬಾಲಿಸಿ ಕಿರುಕುಳ ನೀಡಿದ್ದ ಆರೋಪದಡಿ ಇಬ್ಬರನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಭಾನುವಾರ ರಾತ್ರಿ ನಡೆದಿದ್ದ ಘಟನೆ ಸಂಬಂಧ ಸಂತ್ರಸ್ತ ಮಹಿಳೆಯಿಂದ ವಿಡಿಯೊ ಸಮೇತ ದೂರು ಪಡೆಯಲಾಗಿದೆ. ಕೃತ್ಯ ಎಸಗಿದ್ದ ಆರೋಪದಡಿ ಶೇಷಾದ್ರಿಪುರದ ಕಾಲ್‌ ಸೆಂಟರ್ ಉದ್ಯೋಗಿ ಜಗನ್ನಾಥ್ (28) ಮತ್ತು ಪದವಿ ವಿದ್ಯಾರ್ಥಿ ತೇಜಸ್ (21) ಎಂಬುವವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದೂರುದಾರ ಮಹಿಳೆ ಹಾಗೂ ಅವರ ಪತಿ, ಸೇಂಟ್‌ ಜಾನ್ಸ್ ಆಸ್ಪತ್ರೆಗೆ ಭಾನುವಾರ ಹೋಗಿದ್ದರು. ಅಲ್ಲಿಂದ ರಾತ್ರಿ 8 ಗಂಟೆಗೆ ತಮ್ಮ ಕಾರಿನಲ್ಲಿ ಮನೆಯತ್ತ ಹೊರಟಿದ್ದರು. ಮಹಿಳೆಯ ಪತಿಯೇ ಕಾರು ಚಲಾಯಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಆರೋಪಿಗಳು, ಬೈಕ್‌ನಲ್ಲಿ ಹೊಸೂರಿನಿಂದ ನಗರಕ್ಕೆ ಬರುತ್ತಿದ್ದರು. ಮಹಿಳೆಯ ಪತಿ ಯಾವುದೇ ಇಂಡಿಕೇಟರ್ ಹಾಕದೇ ಎಡಕ್ಕೆ ಕಾರು ಚಲಾಯಿಸಿದ್ದರು. ಇದರಿಂದಾಗಿ ಆರೋಪಿಗಳ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿತ್ತು’ ಎಂದು ತಿಳಿಸಿವೆ.

‘ಅಪಘಾತ ಮಾಡಿದ್ದಕ್ಕೆ ಸಿಟ್ಟಾಗಿದ್ದ ಆರೋಪಿಗಳು, ಮಹಿಳೆ ಹಾಗೂ ಅವರ ಪತಿಯನ್ನು ಪ್ರಶ್ನಿಸಲು ಮುಂದಾಗಿದ್ದರು. ಅಷ್ಟರಲ್ಲೇ ಮಹಿಳೆಯ ಪತಿ, ಆರೋಪಿಗಳಿಗೆ ಮಧ್ಯದ ಬೆರಳು ತೋರಿಸಿ ಕಾರು ಚಲಾಯಿಸಿಕೊಂಡು ಸ್ಥಳದಿಂದ ಹೊರಟಿದ್ದರು. ಮತ್ತಷ್ಟು ಕೋಪಗೊಂಡ ಆರೋಪಿಗಳು, ಬೈಕ್‌ಗಳಲ್ಲಿ ಕಾರು ಬೆನ್ನಟ್ಟಿದ್ದರು’ ಎಂದು ಮೂಲಗಳು ಹೇಳಿವೆ.

‘ಕಾರಿನ ಬಾಗಿಲು ಗಾಜು ತಟ್ಟಿದ್ದ ಆರೋಪಿಗಳು, ಅನುಚಿತವಾಗಿ ವರ್ತಿಸಿದ್ದರು. ಕಾರಿನ ಅಕ್ಕ–ಪಕ್ಕದಲ್ಲಿ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿದ್ದರು. ಆರೋಪಿಗಳ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ ಮಹಿಳೆ, ಸ್ನೇಹಿತರಿಗೆ ಕಳುಹಿಸಿದ್ದರು. ಅದೇ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದ ಸ್ನೇಹಿತರು, ‘ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿದ್ದರು. ವಿಡಿಯೊ ಗಮನಕ್ಕೆ ಬರುತ್ತಿದ್ದಂತೆ ಮಹಿಳೆಯನ್ನು ಸಂಪರ್ಕಿಸಿ ದೂರು ಪಡೆದು ಕ್ರಮ ಕೈಗೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT