ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಿಸಿಇ ನವೀಕರಣ: ವಾಸ್ತುಶಾಸ್ತ್ರಜ್ಞರ ಅಪಸ್ವರ

Last Updated 8 ಆಗಸ್ಟ್ 2018, 19:19 IST
ಅಕ್ಷರ ಗಾತ್ರ

ಬೆಂಗಳೂರು:ನೂರರ ಹರೆಯದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿನ (ಯುವಿಸಿಇ) ನವೀಕರಣ ಕೆಲಸವನ್ನುಲೋಕೋಪಯೋಗಿ ಇಲಾಖೆಯು ಕೈಗೆತ್ತಿಕೊಂಡಿದೆ. ಆದರೆ, ಕಟ್ಟಡದ ಪಾರಂಪರಿಕ ಮೌಲ್ಯ ತಿಳಿಯದ ಇಲಾಖೆ ಬೇಕಾಬಿಟ್ಟಿಯಾಗಿ ಕಾಮಗಾರಿಯನ್ನು ನಡೆಸುತ್ತಿದೆ ಎಂದು ವಾಸ್ತುಶಾಸ್ತ್ರಜ್ಞರಿಂದ ಆಕ್ರೋಶ ವ್ಯಕ್ತವಾಗಿದೆ.

ಈಗಾಗಲೇ ಶೇ 70ರಷ್ಟು ಕಟ್ಟಡ ನವೀಕರಣ ಕೆಲಸ ಪೂರ್ಣಗೊಂಡಿದೆ. ಶತಮಾನಗಳ ಕಟ್ಟಡ ಎಂದು ಅನೇಕ ಬಾರಿ ಪ್ರಸ್ತಾಪವಾಗಿದ್ದರೂ ತಜ್ಞರ ಅಭಿಪ್ರಾಯಗಳನ್ನು ಪಡೆಯದೇ ಇಲಾಖೆ ಕಾಮಗಾರಿ ನಡೆಸಿದೆ ಎಂದು ಅವರು ದೂರಿದ್ದಾರೆ.

‘ಕಟ್ಟಡದ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ನವೀಕರಣ ಕೆಲಸ ಮಾಡಬೇಕು. ಇಲ್ಲದಿದ್ದರೆ ಆ ಕಟ್ಟಡ ಪಾರಂಪರಿಕ ಮೌಲ್ಯವನ್ನೇ ಕಳೆದುಕೊಳ್ಳುತ್ತದೆ’ ಎಂದು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವಾಸ್ತುಶಾಸ್ತ್ರಜ್ಞ ನರೇಶ ನರಸಿಂಹನ್‌, ಪುರಾತತ್ವ ಇಲಾಖೆ ಆಯುಕ್ತ ಟಿ.ವೆಂಕಟೇಶ್‌, ಅಲ್ಲದೆ ಇನ್‌ಟ್ಯಾಕ್ಟ್‌ನ ಹಲವು ಸದಸ್ಯರು ಸಹ ಆತಂಕ ವ್ಯಕ್ತಪಡಿಸಿದರು.

‘ಪಾರಂಪರಿಕ ಕಟ್ಟಡಗಳ ನವೀಕರಣಕ್ಕೆ ಸಿಮೆಂಟ್‌ ಮತ್ತು ಸುಣ್ಣದ ಗಾರೆ ಬಳಸಿದ್ದು, ಇದರಿಂದ ಕಟ್ಟಡದ ಅನನ್ಯತೆ ಹಾಳಾಗುತ್ತದೆ. ಪಾರಂಪರಿಕ ಕಟ್ಟಡಗಳ ವಿಶಿಷ್ಟತೆಯನ್ನು ಬಲಿಕೊಟ್ಟು, ಅವುಗಳನ್ನು ನವೀಕರಿಸುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

‘ಹಳೆಯ ವಿಧಾನವಾದ ಬೆಲ್ಲ, ಸುಣ್ಣ, ಇಟ್ಟಿಗೆ ಪುಡಿ, ಜಾಯಿಕಾಯಿಗಳನ್ನು ತೊಟ್ಟಿಯಲ್ಲಿ ಹಾಕಿ 15 ದಿನ ಕಳಿಯಲು ಬಿಟ್ಟು ನಂತರ ಅದನ್ನು ಪ್ಲಾಸ್ಟರಿಂಗ್‌ಗೆ ಬಳಸುವುದರಿಂದ ಬಾಳಿಕೆ ಹೆಚ್ಚಾಗುತ್ತದೆ. ಆದರೆ, ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ’ ಎಂದು ವಿವರಿಸಿದರು.

‘ಕಟ್ಟಡದ ಮೂಲಸ್ವರೂಪಕ್ಕೆ ಧಕ್ಕೆ’:‘ಪಾರಂಪರಿಕ ಕಟ್ಟಡಗಳನ್ನು ಉಳಿಸಬೇಕು ಎನ್ನುವ ದೃಷ್ಟಿಯಿಂದ ಹೆಚ್ಚು ಬಾಳಿಕೆ ಬರುವ ರೀತಿಯಲ್ಲಿ ಅವುಗಳ ದುರಸ್ತಿ ಕೆಲಸ ಮಾಡಲಾಗುತ್ತದೆ. ಸಿಮೆಂಟ್‌ನಿಂದ ಕಟ್ಟಡ ನವೀಕರಿಸಿದರೆ, ಆಕಾರಗಳನ್ನು ಸರಿಯಾಗಿ ರೂಪಿಸಲು ಸಾಧ್ಯವಾಗುವುದಿಲ್ಲ. ಇದು ಮೂಲ ಕಟ್ಟಡಕ್ಕೂ ಅಪಾಯ ತಂದೊಡ್ಡುತ್ತದೆ’ ಎಂದು ವೆಂಕಟೇಶ್‌ ತಿಳಿಸಿದರು.

‘ಇನ್‌ಟ್ಯಾಕ್ಟ್‌ ಸಂಸ್ಥೆ ನಗರದ 42 ಕಟ್ಟಡಗಳನ್ನು ಪಾರಂಪರಿಕ ಮೌಲ್ಯ ಹೊಂದಿದ ತಾಣಗಳು ಎಂದು ಗುರುತಿಸಿ ವರದಿ ನೀಡಿದೆ. ಆ ಕಟ್ಟಡಗಳ ಬಗ್ಗೆ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದೇವೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೇಗೆಂದರೆ ಹಾಗೆ ಕಟ್ಟಡ ನವೀಕರಿಸುತ್ತಿರುವ ಘಟನೆಗಳು ಹೆಚ್ಚುತ್ತಿರುವುದರಿಂದ, ಇನ್ನುಮುಂದೆ ಪಾರಂಪರಿಕ ಎಂದು ಘೋಷಣೆಯಾಗದ ಕಟ್ಟಡಗಳ ಬಗ್ಗೆಯೂ ಗಮನ ಹರಿಸುತ್ತೇವೆ’ ಎಂದು ಹೇಳಿದರು.

‘ಅಧಿಕಾರಿಗಳಿಗೇಕೆ ಈ ವಿಷಯ ತಿಳಿಯುತ್ತಿಲ್ಲ. ಕೋಟೆ ಶಾಲೆ ಮತ್ತು ಬೌರಿಂಗ್‌ ಆಸ್ಪತ್ರೆ ಕಟ್ಟಡಗಳು ನೂರು ವರ್ಷಗಳನ್ನು ಕಂಡಿವೆ. ಅವುಗಳ ಪಾರಂಪರಿಕ ಮೌಲ್ಯವನ್ನು ಉಳಿಸಿಕೊಂಡೇ ನವೀಕರಣ ಮಾಡಲಾಗಿತ್ತು. ಅದೇ ವಿಧಾನವನ್ನು ಇಲ್ಲಿಯೂ ಅನುಸರಿಬಹುದಿತ್ತು’ ಎಂದು ನರೇಶ ನರಸಿಂಹನ್‌ ಅಭಿಪ್ರಾಯಪಟ್ಟರು.

‘ಕಾಮಗಾರಿ ವಿಳಂಬವಾಗಲಿದೆ’:ಡಿಸೆಂಬರ್‌ನಲ್ಲಿ ಇದರ ನವೀಕರಣ ಕಾಮಗಾರಿ ಮುಗಿಯಬೇಕಿದೆ. ಆದರೆ, ಇದೊಂದು ಪಾರಂಪರಿಕ ಕಟ್ಟಡವಾಗಿರುವುದರಿಂದ ಕಾಮಗಾರಿ ವಿಳಂಬವಾಗುವ ಸಾಧ್ಯತೆ ಇದೆ. ತಮಿಳುನಾಡಿನಿಂದ ಕೆಲಸಗಾರರನ್ನು ಕರೆಸಲಾಗಿದೆ. ಕಟ್ಟಡ ಮೂಲಸ್ವರೂಪವನ್ನು ಉಳಿಸಿಕೊಳ್ಳಲು ಅವರು ನೆರವು ನೀಡುತ್ತಿದ್ದಾರೆ’ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದರು.

‘ಕಟ್ಟಡದ ಛಾಯಚಿತ್ರ ಮತ್ತು ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಅದರ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ನವೀಕರಣ ಕೆಲಸ ಮಾಡುತ್ತಿದ್ದೇವೆ. ಕಟ್ಟಡ ಕೆತ್ತನೆ ಮತ್ತು ಮರದ ರಚನೆಗಳನ್ನು ಹಾಗೆ ಉಳಿಸಿಕೊಳ್ಳುತ್ತೇವೆ.ಕಟ್ಟಡವನ್ನು ಕೆಟ್ಟದಾಗಿ ನಿರ್ವಹಣೆ ಮಾಡಲಾಗಿದೆ. ಕಳೆದ ವರ್ಷ ಮೆಕ್ಯಾನಿಕಲ್‌ ವಿಭಾಗದ ಕಟ್ಟಡದ ಮೇಲ್ಚಾವಣಿ ಕುಸಿದು ಬಿದ್ದಿತ್ತು. ಆಗಸ್ಟ್‌ ಮೊದಲ ವಾರದೊಳಗೆ 18 ಕೊಠಡಿಗಳು ಸಿದ್ಧವಾಗಿರುತ್ತವೆ’ ಎಂದು ಹೇಳಿದರು.

ವಸ್ತುಸಂಗ್ರಹಾಲಯ

‘ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದಲ್ಲಿ 100 ವರ್ಷಗಳ ಹಳೆ ಯಂತ್ರಗಳಿವೆ. ಅವುಗಳನ್ನು ಪ್ರದರ್ಶನಕ್ಕೆ ಇಡಲು ಮೆಕ್ಯಾನಿಕಲ್‌ ಬ್ಲಾಕ್‌ನಲ್ಲಿಯೇ ವಸ್ತು ಸಂಗ್ರಹಾಲಯವೊಂದನ್ನು ನಿರ್ಮಿಸಲು ಯೋಜಿಸಲಾಗಿದೆ’ ಎಂದು ಲೋಕೋಪಯೋಗಿ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT