ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುಟಿಎಸ್‌ ಆ್ಯಪ್‌ ಬಳಕೆ: ಒಂದೇ ತಿಂಗಳಲ್ಲಿ ಶೇ 25 ಹೆಚ್ಚಳ

Published 3 ಜೂನ್ 2024, 23:43 IST
Last Updated 3 ಜೂನ್ 2024, 23:43 IST
ಅಕ್ಷರ ಗಾತ್ರ

ಬೆಂಗಳೂರು: ರೈಲು ಪ್ರಯಾಣಿಕರು ಟಿಕೆಟ್ ಖರೀದಿಸಲು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಮೊಬೈಲ್‌ ಆ್ಯಪ್‌ಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಮೇ ಒಂದೇ ತಿಂಗಳಲ್ಲಿ ಯುಟಿಎಸ್‌ (ಅನ್‌ರಿಸರ್ವ್‌ಡ್‌ ಟಿಕೆಟ್‌ ಸಿಸ್ಟಂ) ಮೊಬೈಲ್ ಆ್ಯಪ್‌ನಲ್ಲಿ ಟಿಕೆಟ್‌ ಖರೀದಿಸಿದವರ ಪ್ರಮಾಣ ಶೇ 25ರಷ್ಟು ಹೆಚ್ಚಿದೆ.

ಯುಟಿಎಸ್‌ ಮೊಬೈಲ್‌ ಆ್ಯಪ್‌ ಬಳಕೆಯಿಂದ ಸಮಯ ಉಳಿತಾಯ, ಸರದಿಯಲ್ಲಿ ನಿಲ್ಲುವುದಕ್ಕೆ ಮುಕ್ತಿ, ರೈಲು ತಪ್ಪಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ ಇರುವುದರಿಂದ ಆ್ಯಪ್‌ ಬಳಕೆ ಹೆಚ್ಚಾಗಿದೆ.

ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ ಈ ವರ್ಷ ಆರಂಭದಲ್ಲಿ ತಿಂಗಳಿಗೆ ಸರಾಸರಿ 15 ಸಾವಿರ ಪ್ರಯಾಣಿಕರು ಯುಟಿಎಸ್‌ ಮೊಬೈಲ್‌ ಆ್ಯಪ್‌ ಬಳಸಿದ್ದರು. ಪ್ರತಿ ತಿಂಗಳು ಏರಿಕೆ ಕಂಡಿದ್ದು, ಮೇ ತಿಂಗಳಲ್ಲಿ ಅತಿ ಹೆಚ್ಚು ಅಂದರೆ 27 ಸಾವಿರ ಜನರು ಆ್ಯಪ್‌ ಬಳಸಿದ್ದಾರೆ. 

‘ರೈಲು ನಿಲ್ದಾಣಕ್ಕೆ ಬಂದು ಟಿಕೆಟ್‌ ಖರೀದಿಗೆ ಸರದಿಯಲ್ಲಿ ನಿಲ್ಲಬೇಕಿತ್ತು. ಟಿಕೆಟ್‌ ಖರೀದಿಸುವಷ್ಟರಲ್ಲಿ ಕೆಲವು ಬಾರಿ ರೈಲು ಹೋಗಿರುತ್ತಿತ್ತು. ಮುಂದಿನ ರೈಲಿಗಾಗಿ ಕಾಯಬೇಕಿತ್ತು. ರಜಾದಿನಗಳಲ್ಲಿ, ಹಬ್ಬಗಳ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಭಾರಿ ಹೆಚ್ಚಿರುತ್ತದೆ. ಅಂಥ ಸಮಯದಲ್ಲಿ ಸರದಿಯಲ್ಲಿ ನಿಂತು ಟಿಕೆಟ್‌ ಖರೀದಿಸುವುದೇ ದುಸ್ಸಾಹಸವಾಗಿತ್ತು. ಈಗ ಮೊಬೈಲ್‌ ಆ್ಯಪ್‌ನಲ್ಲಿ ಟಿಕೆಟ್‌ ಖರೀದಿ ಮಾಡುತ್ತಿರುವುದರಿಂದ ಎಲ್ಲವೂ ತಪ್ಪಿದೆ’ ಎಂದು ರೈಲು ಪ್ರಯಾಣಿಕ ಎಂ. ಕರಿಬಸಪ್ಪ, ಅನುಭವ ಹಂಚಿಕೊಂಡರು.

ರೈಲು ನಿಲ್ದಾಣಗಳು, ಇಲಾಖೆಯ ವೆಬ್‌ಸೈಟ್‌ ಸೇರಿ ಹಲವೆಡೆ ಯುಟಿಎಸ್‌ ಮೊಬೈಲ್‌ ಆ್ಯಪ್‌ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಈಗ ಸ್ಮಾರ್ಟ್‌ಫೋನ್‌ ಬಳಸುವುದು ಸಾಮಾನ್ಯವಾಗಿದೆ. ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡು ಬಳಸುವ ಪ್ರಯಾಣಿಕರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ತ್ರಿನೇತ್ರ ಕೆ.ಆರ್‌. ತಿಳಿಸಿದರು.

ಹಿಂದೆ ನಿಗದಿತ ದೂರದವರೆಗೆ ಮಾತ್ರ ಆ್ಯಪ್‌ನಲ್ಲಿ ಟಿಕೆಟ್‌ ಖರೀದಿಸಬಹುದಿತ್ತು. ಈಗ ಈ ಮಿತಿಯನ್ನು ತೆಗೆದು ಹಾಕಿರುವುದರಿಂದ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಇ–ಟಿಕೆಟ್‌ ಖರೀದಿ ಇನ್ನು ಮುಂದೆ ಇನ್ನಷ್ಟು ಹೆಚ್ಚಳವಾಗಲಿದೆ. ಪ್ರಯಾಣಿಕರ ಅನುಕೂಲಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ರೈಲ್ವೆ ತೆಗೆದುಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.

ರೈಲು ನಿಲ್ದಾಣಕ್ಕೆ ಬರುವ ಮೊದಲು ಇ–ಟಿಕೆಟ್‌ ಖರೀದಿಸಬೇಕು. ನಿಲ್ದಾಣಕ್ಕೆ ಬಂದ ಮೇಲೆ ಅಥವಾ ರೈಲು ಹತ್ತಿದ ಮೇಲೆ ಖರೀದಿ ಮಾಡಲು ಇದರಲ್ಲಿ ಅವಕಾಶವಿಲ್ಲ ಎಂದು ವಿವರಿಸಿದರು.

ರೈಲು
ರೈಲು
ಸುಧಾರಣೆಗೆ ತಂತ್ರಜ್ಞಾನ ಬಳಕೆ
ರೈಲಿನಲ್ಲಿ ಪ್ರಯಾಣಿಕರ ಸುಖಕರ ಪ್ರಯಾಣಕ್ಕಾಗಿ ರೈಲ್ವೆಯು ಆಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿದೆ. ಅನೇಕ ಸುಧಾರಣೆಗಳಿಗೆ ಡಿಜಿಟಲ್‌ ವ್ಯವಸ್ಥೆ ಇದೆ. ಅದರಲ್ಲಿ ಯುಟಿಎಸ್‌ ಮೊಬೈಲ್‌ ಆ್ಯಪ್‌ ಕೂಡ ಒಂದು. ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಬಗ್ಗೆ ನಿರಂತರ ಜಾಗೃತಿ ಮೂಡಿಸುತ್ತಿರುವುದರಿಂದ ಬಳಕೆದಾರರ ಸಂಖ್ಯೆ ಹೆಚ್ಚಿದೆ. ತ್ರಿನೇತ್ರ ಕೆ.ಆರ್‌. ಸಾರ್ವಜನಿಕ ಸಂಪರ್ಕಾಧಿಕಾರಿ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗ
ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಅಂಕಿ ಅಂಶ
17652 ಮಾರ್ಚ್‌ನಲ್ಲಿ ಯುಟಿಎಸ್‌ ಬಳಸಿದವರು 21777 ಏಪ್ರಿಲ್‌ನಲ್ಲಿ ಯುಟಿಎಸ್‌ ಬಳಕೆ ಮಾಡಿದವರು 27135 ಮೇ ನಲ್ಲಿ ಯುಟಿಎಸ್ ಬಳಕೆ ಮಾಡಿದವರು
ಆಟೊಮೆಟಿಕ್‌ ಮಷಿನ್ ಬಳಕೆ ಸರಿಯಾಗಲಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಸಾಮಾನ್ಯ ಬೋಗಿಯ ಪ್ರಯಾಣಿಕರು ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ಮೊಬೈಲ್‌ ಆಧಾರಿತ ಪಾವತಿ ಆ್ಯಪ್‌ಗಳಿಂದ ಹಣ ಪಾವತಿಸಿ ಆಟೊಮೆಟಿಕ್‌ ಮಷಿನ್‌ ಮೂಲಕ ಟಿಕೆಟ್‌ ಖರೀದಿಸುವ ವ್ಯವಸ್ಥೆ ಮಾಡಲಾಗಿದೆ. ಆದರೆ ಅದನ್ನು ಪ್ರಯಾಣಿಕರು ನೇರವಾಗಿ ಬಳಸದಂತೆ ಅಲ್ಲಿ ರೈಲ್ವೆಗೆ ಸಂಬಂಧಿಸಿದವರು ಕುಳಿತಿರುತ್ತಾರೆ. ಅವರಿಗೆ ₹ 5 ನೀಡಿ ಆ ಮಷಿನ್‌ ಮೂಲಕ ಟಿಕೆಟ್‌ ಖರೀದಿಸಬೇಕಿದೆ. ಈಗ ಮೊಬೈಲ್‌ನಲ್ಲಿಯೇ ಆ್ಯಪ್‌ ಬಳಸಬಹುದು. ಆದರೆ ಸಾಮಾನ್ಯ ಜನರು ಮೊಬೈಲ್‌ ಆ್ಯಪ್‌ನಲ್ಲಿ ಟಿಕೆಟ್ ಖರೀದಿಸುವುದು ಕಷ್ಟ. ರೈಲು ನಿಲ್ದಾಣಗಳಲ್ಲಿರುವ ಆಟೊಮೆಟಿಕ್‌ ಟಿಕೆಟ್‌ ಮಷಿನ್‌ ಪ್ರಯಾಣಿಕರಿಗೆ ಉಪಯೋಗವಾಗುವಂತೆ ಅಧಿಕಾರಿಗಳು ಮಾಡಬೇಕು ಎಂದು ರೈಲು ಪ್ರಯಾಣಿಕ ಯೋಗೀಶ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT