ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಮೋದಿ ಚಾಲನೆ

Last Updated 11 ನವೆಂಬರ್ 2022, 16:47 IST
ಅಕ್ಷರ ಗಾತ್ರ

ಬೆಂಗಳೂರು: ಮಹತ್ವಾಕಾಂಕ್ಷೆಯ ವಂದೇ ಭಾರತ್ ಎಕ್ಸ್‌ಪ್ರೆಸ್‌ ಮತ್ತು ಭಾರತ್ ಗೌರವ್ ಕಾಶಿ ದರ್ಶನ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದರು.

ಬುಧವಾರ ಹೊರತುಪಡಿಸಿ ವಾರದ ಏಳು ದಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸಂಚರಿಸಲಿದ್ದು, ಮೈಸೂರು–ಬೆಂಗಳೂರು–ಚೆನ್ನೈ ಸಂಪರ್ಕ ಕಲ್ಪಿಸುವ ಪ್ರಮುಖ ರೈಲು ಇದಾಗಿದೆ. ದೇಶೀಯವಾಗಿ ಸಿದ್ಧಗೊಂಡಿರುವ ಅತಿ ವೇಗದ ರೈಲು, ಗಂಟೆಗೆ 160 ಕಿಲೋ ಮೀಟರ್‌ ವೇಗದಲ್ಲಿ ಸಂಚರಿಸುವ ಸೆಮಿ–ಹೈಸ್ಪೀಡ್‌ ಎಂಜಿನ್ ಹೊಂದಿದೆ.

ರೈಲಿಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮ ಬೆಳಿಗ್ಗೆ 10.20ಕ್ಕೆ ನಿಗದಿಯಾಗಿತ್ತು. ಅದಕ್ಕೂ ಮುನ್ನವೇ ಕೆಎಸ್‌ಆರ್‌ ರೈಲು ನಿಲ್ದಾಣಕ್ಕೆ ಬಂದ ಪ್ರಧಾನಿ ಮೋದಿ, 10.05ಕ್ಕೆ ಹಸಿರು ನಿಶಾನೆ ತೋರಿಸಿದರು. ಅದಕ್ಕೂ ಮುನ್ನ ಪ್ಲಾಟ್‌ಫಾರ್ಮ್‌ ನಂಬರ್ 7ರಲ್ಲಿ ನಿಂತಿದ್ದ ಈ ರೈಲಿನ ಒಳಗೆ ಪ್ರವೇಶಿಸಿದ ಮೋದಿ, ಪರಿಶೀಲನೆ ನಡೆಸಿದರು. ರೈಲು ಚಾಲನೆ ಮಾಡಲು ಕುಳಿತಿದ್ದ ಲೋಕೊ ಪೈಲಟ್‌ಗಳನ್ನು ಮಾತನಾಡಿಸಿ ಶುಭ ಕೋರಿದರು.

ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹಾಜರಿದ್ದರು.

‘ವಂದೇ ಭಾರತ್ ರೈಲಿನಂತೆ ದೇಶ ಕೂಡ ವೇಗವಾಗಿ ತಡೆ ರಹಿತವಾಗಿ ಸಾಗಲಿದೆ. ಅಲ್ಲಲ್ಲೇ ನಿಲ್ಲುತ್ತಾ ಸಾಗುವ ಕಾಲ ಈಗಿಲ್ಲ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದೇಶದ ಅಭಿವೃದ್ಧಿಯ ವೇಗದ ಸಂಕೇತ’ ಎಂದು ದೇವನಹಳ್ಳಿ ಬಳಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ನರೇಂದ್ರ ಮೋದಿ ಹೇಳಿದರು.

ಕಾಶಿ ದರ್ಶನ ರೈಲಿಗೂ ಚಾಲನೆ

ಕರ್ನಾಟಕ–ಭಾರತ್ ಗೌರವ್ ಕಾಶಿ ದರ್ಶನ ವಿಶೇಷ ರೈಲಿಗೂ ಕೆಎಸ್‌ಆರ್‌ ರೈಲು ನಿಲ್ದಾಣದಲ್ಲಿ ಪ್ರಧಾನಿ ಚಾಲನೆ ನೀಡಿದರು.

ಎಂಟು ದಿನಗಳ ಕಾಶಿ ದರ್ಶನದ ಈ ರೈಲು ವಾರಾಣಸಿ, ಪ್ರಯಾಗರಾಜ್, ಅಯೋಧ್ಯೆ ಸೇರಿ ಹಲವು ಕ್ಷೇತ್ರಗಳಿಗೆ ಯಾತ್ರಿಕರನ್ನು ಕರೆದೊಯ್ಯಲಿದೆ. ಮುಜರಾಯಿ ಇಲಾಖೆ ಸಹಯೋಗದಲ್ಲಿ ಯಾತ್ರೆ ಆಯೋಜಿಸಲಾಗಿದೆ. ಯಾತ್ರೆಗೆ ಒಟ್ಟು ₹20 ಸಾವಿರ ವೆಚ್ಚವಾಗಲಿದ್ದು, ₹5 ಸಾವಿರ ಸಹಾಯಧನ ದೊರೆಯಲಿದೆ. ಪ್ರವಾಸದ ವೇಳೆ ಆಹಾರ, ವಸತಿ ಸೌಕರ್ಯವೂ ಈ ಪ್ಯಾಕೇಜ್‌ನಲ್ಲಿ ಒಳಗೊಂಡಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

14 ಬೋಗಿಗಳ ಈ ರೈಲು(06553), ಶುಕ್ರವಾರ ಬೆಳಿಗ್ಗೆ 10.33ಕ್ಕೆ ಕೆಎಸ್‌ಆರ್‌ನಿಂದ ಹೊರಟಿತು. ನ.13ರಂದು ಸಂಜೆ 4 ಗಂಟೆಗೆ ಬನಾರಸ್ ತಲುಪಲಿದೆ. ಬೀರೂರು, ದಾವಣಗೆರೆ, ಹುಬ್ಬಳ್ಳಿ, ಪುಣೆ, ಮೀರಜ್ ಮೂಲಕ ಇದು ಹಾದುಹೋಗಲಿದೆ. ಅಯೋಧ್ಯೆ ಮತ್ತು ಪ್ರಯಾಗರಾಜ್‌ನಲ್ಲೂ ನಿಲುಗಡೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT