ಸೋಮವಾರ, ಮೇ 16, 2022
24 °C
ಸರ್ಕಾರದ ನಿಲುವುಗಳಿಗೆ ಪಿಯುಸಿಎಲ್‌ ಖಂಡನೆ

‘ದಲಿತರು, ಮಹಿಳೆ ಮೇಲಿನ ದೌರ್ಜನ್ಯ ಹೆಚ್ಚಳ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಜೆಪಿ ಸರ್ಕಾರವು ಆಡಳಿತಕ್ಕೆ ಬಂದ ಬಳಿಕ ದಲಿತರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ದುಪ್ಪಟ್ಟಾಗಿವೆ. ಕೊಳೆಗೇರಿ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಹೊಸ ತಂತ್ರ ಕಂಡುಕೊಂಡು ಅವರ ಬದುಕುವ ಹಕ್ಕನ್ನೇ ಕಸಿದುಕೊಳ್ಳಲಾಗುತ್ತಿದೆ’ ಎಂದು ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ (ಪಿಯುಸಿಎಲ್‌) ಸಂಘಟನೆಯು ಆರೋಪಿಸಿದೆ.

ಹಸನ್‌ ಮನ್ಸೂರ್‌ ಅವರ ಏಳನೇ ವರ್ಷದ ಸಂಸ್ಮರಣೆ ಹಿನ್ನೆಲೆಯಲ್ಲಿ ‘ಪ್ರಸ್ತುತ ಸಂದರ್ಭದಲ್ಲಿ ಮಾನವ ಹಕ್ಕುಗಳು ಮತ್ತು ಸವಾಲುಗಳು’ ಎಂಬ ವಿಷಯದ ಕುರಿತು ಭಾನುವಾರ ವರ್ಚುವಲ್‌ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಸಂಘಟನೆಯ ಸದಸ್ಯರು ಆಡಳಿತಾರೂಢ ಸರ್ಕಾರದ ನಿಲುವುಗಳನ್ನು ಖಂಡಿಸಿದರು.

‘ಆಡಳಿತಾರೂಢ ಸರ್ಕಾರವು ಪೌರತ್ವ ತಿದ್ದುಪಡಿ, ಕೃಷಿ, ಗೋ ಹತ್ಯೆ ನಿಷೇಧ ಹೀಗೆ ಹಲವು ರೈತ ಹಾಗೂ ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಸರ್ಕಾರವೇ ಕೋಮುವಾದ ಮತ್ತು ಭಯೋತ್ಪಾದನೆಗೆ ಇಳಿದಿದೆ. ಇದು ನಿಲ್ಲಬೇಕು. ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ 16 ಮಂದಿಯನ್ನು ಬಂಧಿಸಲಾಗಿದೆ. ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ಜೈಲಿಗೆ ಅಟ್ಟಲಾಗಿದೆ. ಅವರಿಗೆ ಜಾಮೀನು ನೀಡಲು ನಿರಾಕರಿಸಲಾಗುತ್ತಿದೆ. ಇದು ಖಂಡನೀಯ’ ಎಂದು ಸದಸ್ಯರು ಕಿಡಿಕಾರಿದರು.

‘ಸತ್ಯ ಶೋಧನೆಗಳನ್ನು ನಡೆಸಿ, ಜನಸಾಮಾನ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಮಾನವ ಹಕ್ಕುಗಳ ಆಯೋಗದ ಗಮನ ಸೆಳೆಯುವ, ಈ ಸಂಬಂಧ ದೂರು ದಾಖಲಿಸುವ ನಿರ್ಣಯ ಕೈಗೊಂಡಿದ್ದೇವೆ. ನೂತನ ಕಾಯ್ದೆಗಳಿಂದ ಆಗುವ ಅನಾಹುತಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತೇವೆ’ ಎಂದು ಪಿಯುಸಿಎಲ್‌ನ ರಾಜ್ಯ ಘಟಕದ ಅಧ್ಯಕ್ಷ ವೈ.ಜೆ.ರಾಜೇಂದ್ರ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು