ಬುಧವಾರ, ಆಗಸ್ಟ್ 10, 2022
21 °C

ವಿಶ್ವನಾಥ್‌ ಹಿರೇಮಠ್‌ ಪ್ರಕರಣ: ರಾಜ್ಯಪಾಲರಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಎಎಸ್‌ ಅಧಿಕಾರಿ ಪಿ.ವಿಶ್ವನಾಥ್‌ ಹಿರೇಮಠ್‌ ಅವರಿಗೆ ಅಕ್ರಮವಾಗಿ ‘ಎ’ ಶ್ರೇಣಿಯ ಹುದ್ದೆ ನೀಡಲಾಗಿದೆ ಎಂದು ಆರೋಪಿಸಿರುವ ಜನಾಧಿಕಾರ ಸಂಘರ್ಷ ಪರಿಷತ್‌, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ದೂರು ನೀಡಿದೆ.

‘ವಿಶ್ವನಾಥ್‌ ಹಿರೇಮಠ್‌ ಅವರು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪ್ರಾಥಮಿಕ ಪರೀಕ್ಷೆಯನ್ನೇ ಎದುರಿಸಿರಲಿಲ್ಲ. ಆದರೂ ಅವರಿಗೆ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಆರಂಭಿಕ ಹಂತದ ನೇಮಕಾತಿಯಲ್ಲೇ ಅಕ್ರಮ ನಡೆದಿತ್ತು. ಆ ಬಳಿಕ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶ ನೆಪವಾಗಿಸಿಕೊಂಡು ಅವರಿಗೆ ‘ಎ’ ಶ್ರೇಣಿಯ ಹುದ್ದೆ ನೀಡಲಾಗಿದೆ’ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷರಾದ ಆದರ್ಶ್‌ ಆರ್‌. ಅಯ್ಯರ್‌, ಪ್ರಕಾಶ್‌ ಬಾಬು ಬಿ.ಕೆ. ಮತ್ತು ಕಾರ್ಯಕಾರಿ ಸದಸ್ಯ ವಿಶ್ವನಾಥ್‌ ಬಿ.ಎಂ. ಆಗಸ್ಟ್ 27ರಂದು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದ ವಿಶ್ವನಾಥ್‌ ಹಿರೇಮಠ್‌ ಅವರು ತಮ್ಮ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸದಂತೆ ತಡೆದಿದ್ದರು. ಪ್ರಾಥಮಿಕ ಪರೀಕ್ಷೆ ಬರೆಯದೇ ಹುದ್ದೆ ಪಡೆದಿರುವ ವಿಶ್ವನಾಥ ಹಿರೇಮಠ್‌ ಮತ್ತು ಶಂಕರೇಗೌಡ ದೊಡ್ಡಮನಿ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ 2010ರಿಂದ 2020ರ ಅವಧಿಯಲ್ಲಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಹಿರೇಮಠ್‌ ಅವರಿಗೆ ‘ಎ’ ಶ್ರೇಣಿಯ ಹುದ್ದೆ ನೀಡಿ ಜುಲೈ 13ರಂದು ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.

ಇದೇ ವಿಷಯ ಕುರಿತಂತೆ ಮುಖ್ಯಮಂತ್ರಿ ಹಾಗೂ ಮುಖ್ಯಕಾರ್ಯದರ್ಶಿಗೆ ಪ್ರತ್ಯೇಕ ಮನವಿ ಸಲ್ಲಿಸಿರುವ ಕರ್ನಾಟಕ ರಾಷ್ಟ್ರಸಮಿತಿಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ, ‘ಎ’ ಶ್ರೇಣಿಗೆ ನೀಡಿರುವ ನೇಮಕಾತಿ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಪ್ರತಿಪಾದಿಸಿದ್ದಾರೆ.

ಈ ಕುರಿತು ವಿಶ್ವನಾಥ್‌ ಹಿರೇಮಠ್‌ ಅವರನ್ನು ಸಂಪರ್ಕಿಸಿದಾಗ, ‘ನ್ಯಾಯಾಲಯದ ಆದೇಶದಂತೆ ನನಗೆ ‘ಎ’ ಶ್ರೇಣಿಯ ಹುದ್ದೆ ನೀಡಲಾಗಿದೆ. ಯಾವುದೇ ಅಕ್ರಮವೂ ನಡೆದಿಲ್ಲ. ಕೆಲವರು ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.