ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ ಅಂಗಳಕೆ ಹರಿವಳೇ ವೃಷಭಾವತಿ?

ಬಿಬಿಎಂಪಿ ಶೈತ್ಯಾಗಾರದಲ್ಲಿ ತ್ಯಾಜ್ಯ ನೀರಿನ ಮರುಬಳಕೆ ಯೋಜನೆ * ಜಲಮಂಡಳಿಗೆ ಹೊಸ ಪ್ರಸ್ತಾವ
Last Updated 17 ಸೆಪ್ಟೆಂಬರ್ 2018, 20:06 IST
ಅಕ್ಷರ ಗಾತ್ರ

ಬೆಂಗಳೂರು: ವೃಷಭಾವತಿ ಕಣಿವೆಯಲ್ಲಿ ಹರಿಯುತ್ತಿರುವ ಕೊಳಚೆ ನೀರು ಮರುಬಳಕೆ ಕುರಿತು ಬೆಂಗಳೂರು ವಿಶ್ವವಿದ್ಯಾಲಯ ನೀಡಿದ ಪ್ರಸ್ತಾವ ಬಿಬಿಎಂಪಿಯಲ್ಲಿ ನನೆಗುದಿಗೆ ಬಿದ್ದಿದೆ.

2008ರಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಈ ಬಗ್ಗೆ ವಿವರವಾದ ಯೋಜನಾ ವರದಿ ಸಲ್ಲಿಸಿದ್ದರು. ಆರಂಭದಲ್ಲಿ ಸಮ್ಮತಿಸಿದ್ದ ಬಿಬಿಎಂಪಿ, ವೃಷಭಾವತಿ ಹರಿವಿನ ಪ್ರದೇಶದಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ 12 ಘಟಕಗಳನ್ನು ಅರೆಬರೆಯಾಗಿ ನಿರ್ಮಿಸಿತು. ಅತ್ತ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳೂ ಅಪೂರ್ಣವಾಗಿದ್ದು, ಇತ್ತ ನೀರು ಶುದ್ಧೀಕರಣವೂ ಅಸಾಧ್ಯಎಂಬಂತಾಗಿದೆ ಎಂದು ಪ್ರಾಧ್ಯಾಪಕರೊಬ್ಬರು ಹೇಳಿದರು.

ಶುದ್ಧೀಕರಣ ಹೇಗೆ?

ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಣಗೊಳಿಸಬೇಕು. ಆದರೂ ಇದು ಕುಡಿಯಲು ಯೋಗ್ಯವಾಗಿರುವುದಿಲ್ಲ. ಈ ನೀರನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಿಸಲಾದ ಇನ್ನೊಂದು ಶುದ್ಧೀಕರಣ ಘಟಕಕ್ಕೆ ಒಯ್ಯಲಾಗುತ್ತದೆ. ಇದೇ ಘಟಕಕ್ಕೆ ಜ್ಞಾನಭಾರತಿ ಆವರಣದ ತ್ಯಾಜ್ಯ ನೀರನ್ನು (ಮೂರು ಹಂತಗಳ ಸಂಸ್ಕರಣೆಗೆ ಒಳಪಡಿಸಿ) ಬಿಡಲಾಗುತ್ತದೆ.

ಬಹುಹಂತಗಳ ಶುದ್ಧೀಕರಣ ಘಟಕದೊಳಗೆ ಆನೀರನ್ನು ಹರಿಸಲಾಗುತ್ತದೆ. ಇಲ್ಲಿ ಆಲಂ, ಸಕ್ರಿಯ ಇಂಗಾಲ (activated carbon) ಮತ್ತು ಸುಣ್ಣ ಬಳಸಿ ಶುದ್ಧೀಕರಿಸಲಾಗುತ್ತದೆ. ನಂತರ ಮರಳು ಹಾಸಿನಲ್ಲಿ ಹಾಯಿಸಲಾಗುತ್ತದೆ. ಅಲ್ಲಿಂದ ಮುಂದೆ ತೇವಾಂಶದ ಭೂಮಿಯಲ್ಲಿ ಹರಿಸಲಾಗುತ್ತದೆ. ಈ ಹಂತದ ಬಳಿಕ ಶುದ್ಧೀಕೃತ ನೀರನ್ನು ಅಲ್ಲಲ್ಲಿ ನಿರ್ಮಿಸಲಾದ ಇಂಗುಗುಂಡಿಗಳ ಮೂಲಕ ಇಂಗಿಸಲಾಗುತ್ತದೆ. ಉಳಿದ ಶುದ್ಧ ನೀರನ್ನು ಬೃಹತ್‌ ಸಂಗ್ರಹಾಗಾರದಲ್ಲಿ ಸಂಗ್ರಹಿಸಲಾಗುತ್ತದೆ.

ಸಂಗ್ರಹಾಗಾರದಲ್ಲಿ ಜಲಚರಗಳು, ಆಮ್ಲಜನಕ ಹೆಚ್ಚು ಬಿಡುಗಡೆ ಮಾಡುವ ಜಲಸಸ್ಯಗಳನ್ನು ಬೆಳೆಸಬಹುದು. ಮೀನು, ಏಡಿ ಸಾಕಣೆಗೂ ಬಳಸಬಹುದು. ಅಥವಾ ಈ ನೀರನ್ನು ವಿಶ್ವವಿದ್ಯಾಲಯ ಆವರಣದ ಜೈವಿಕ ಉದ್ಯಾನಕ್ಕೆ, ಕುಡಿಯಲು ಹೊರತಾದ ಉದ್ದೇಶಕ್ಕೆ ಬಳಸಬಹುದು. ಇನ್ನೂ ಹೆಚ್ಚುವರಿಯಾಗುವ ಶುದ್ಧ ನೀರನ್ನು ವೃಷಭಾವತಿಗೆ ಬಿಡಬಹುದು ಎಂದು ಈ ಯೋಜನೆಯ ರೂವಾರಿ ಪ್ರೊ.ರೇಣುಕಾ ಪ್ರಸಾದ್‌ ಹೇಳಿದರು.

ಈ ಯೋಜನೆಯಲ್ಲಿ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗ ವಿಶೇಷ ಪಾತ್ರ ವಹಿಸಿದೆ. ನ್ಯಾನೊ ತಂತ್ರಜ್ಞಾನ ಒಳಗೊಂಡ ಶುದ್ಧೀಕರಣ ವ್ಯವಸ್ಥೆಯನ್ನು ನೀಡಿದೆ. ತಂತ್ರಜ್ಞಾನವನ್ನು ಪ್ರಯೋಗಾಲಯದಿಂದ ಅನುಷ್ಠಾನಕ್ಕೆ ತರುವಲ್ಲಿ ಈ ಯೋಜನೆ ಮುಂದಾಗಿತ್ತು.

ಒಟ್ಟು ₹ 8 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿತ್ತು. ಇದನ್ನು ಮಾದರಿಯಾಗಿ ರೂಪಿಸಬೇಕು. ಉಳಿದ ಕಡೆಗಳಲ್ಲೂ ಇದೇ ರೀತಿಯ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಬಹುದು ಎಂಬುದು ನಮ್ಮ ಯೋಜನೆಯ ಉದ್ದೇಶವಾಗಿತ್ತು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT