ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದಿಂದ ವಿದ್ಯುತ್‌ಗೆ ಪ್ರತ್ಯೇಕ ನೀತಿ

ಸಚಿವ ಪರಮೇಶ್ವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ
Last Updated 20 ಜೂನ್ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ಕಸದಿಂದ ವಿದ್ಯುತ್‌ ಉತ್ಪಾದಿಸುವ ಯೋಜನೆಗಳಿಗೆ ಬಂಡವಾಳ ಹೂಡಲು ಅನೇಕ ಕಂಪನಿಗಳು ಮುಂದೆ ಬಂದಿದ್ದು, ವಿಭಿನ್ನ ರೀತಿಯ ಪ್ರಸ್ತಾವಗಳನ್ನು ಸರ್ಕಾರದ ಮುಂದಿಟ್ಟಿವೆ. ಯಾವ ಪ್ರಸ್ತಾವಗಳಿಗೆ ಮಂಜೂರಾತಿ ನೀಡಬೇಕು ಎಂಬ ಬಗ್ಗೆ ಗೊಂದಲದಲ್ಲಿರುವ ಸರ್ಕಾರವು ಈ ಕುರಿತು ಪ್ರತ್ಯೇಕ ನೀತಿ ರೂಪಿಸಲು ಮುಂದಾಗಿದೆ.

ಕಸದಿಂದ ವಿದ್ಯುತ್‌ ಉತ್ಪಾದಿಸುವ ಕುರಿತು ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.

ಕೆಲವು ಕಂಪನಿಗಳು ಮಿಶ್ರಕಸದಿಂದ ಸಾಂದ್ರೀಕೃತ ನೈಸರ್ಗಿಕ ಅನಿಲ ತಯಾರಿಸುವ ಪ್ರಸ್ತಾಪ ಸಲ್ಲಿಸಿದ್ದರೆ, ಇನ್ನು ಕೆಲವು ಕಂಪನಿಗಳು ಮಿಶ್ರಕಸ ಅಥವಾ ಪುನರ್ಬಳಕೆ ಸಾಧ್ಯವಿಲ್ಲದ ಕಸ (ಆರ್‌ಡಿಎಫ್‌) ಸುಟ್ಟು ಅದರಿಂದ ವಿದ್ಯುತ್‌ ಉತ್ಪಾದಿಸುವುದಾಗಿ ಹೇಳುತ್ತಿವೆ. ಏಕರೂಪ ನೀತಿ ಇಲ್ಲದ ಕಾರಣ ಇಂತಹ ಪ್ರಸ್ತಾವಗಳಿಗೆ ಸ್ಥಳೀಯ ನಗರಾಡಳಿತಗಳು, ವಿದ್ಯುತ್‌ ಸರಬರಾಜು ಕಂಪನಿಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳಿಂದ ಮಂಜೂರಾತಿ ಸಿಗುವಾಗಲೂ ವಿಳಂಬವಾಗುತ್ತಿದೆ.

ಎಷ್ಟು ಸಾಮರ್ಥ್ಯದ ಘಟಕಕ್ಕೆ ಅನುಮತಿ ನೀಡಬಹುದು, ಕೇವಲ ವಿದ್ಯುತ್‌ ಉತ್ಪಾದನೆಗೆ ಮಾತ್ರ ಅನುಮತಿ ನೀಡಬೇಕೇ ಅಥವಾ ಸಾಂದ್ರೀಕೃತ ಅನಿಲವನ್ನು ಉತ್ಪಾದಿಸುವ ಪ್ರಸ್ತಾವವನ್ನೂ ಒಪ್ಪಬಹುದೇ. ಇವುಗಳಿಗೆ ಯಾವ ರೀತಿಯ ಷರತ್ತು ವಿಧಿಸಬೇಕು. ಕಂಪನಿಗಳಿಗೆ ನೀಡುವ ಕಸಕ್ಕೆ ಶುಲ್ಕ ವಸೂಲಿ ಮಾಡಬೇಕೇ? ಅವುಗಳಿಗೆ ಉಚಿತವಾಗಿ ಜಮೀನು ನೀಡಬೇಕೇ, ಅವುಗಳು ನೀಡುವ ವಿದ್ಯುತ್‌ಗೆ ಎಷ್ಟು ದರ ನಿಗದಿಪಡಿಸಬೇಕು ಮುಂತಾದ ಗೊಂದಲಗಳು ಸರ್ಕಾರವನ್ನು ಕಾಡುತ್ತಿವೆ.

‘ಕಸದಿಂದ ವಿದ್ಯುತ್‌ ಉತ್ಪಾದಿಸುವ ಕುರಿತು ಪ್ರತ್ಯೇಕ ನೀತಿ ರೂಪಿಸಿದರೆ ಈ ಎಲ್ಲ ಗೊಂದಲಗಳೂ ಬಗೆಹರಿಯಲಿವೆ. ಇದಕ್ಕೆ ಸಂಬಂಧಪಟ್ಟ ರೂಪರೇಷೆ ತಯಾರಿಸಿ ಸಚಿವ ಸಂಪುಟದ ಮುಂದಿಡಬೇಕು. ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿ ಸೇರಿ ಕರಡು ನೀತಿಯನ್ನು ಸಿದ್ಧಪಡಿಸಬೇಕು’ ಎಂದು ಸಚಿವ ಪರಮೇಶ್ವರಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯೂರೋಪ್, ಬ್ರೆಜಿಲ್‌ನ ನಗರಗಳೂ ಸೇರಿದಂತೆ ಒಟ್ಟು 14 ಕಡೆ ಕಸದಿಂದ ವಿದ್ಯುತ್‌ ಉತ್ಪಾದಿಸುವ ಘಟಕಗಳನ್ನು ಹೊಂದಿರುವ ಸತಾರೆಂ ಕಂಪನಿ ನಗರದಲ್ಲೂ ಘಟಕ ಸ್ಥಾಪಿಸಲು ಎರಡು ವರ್ಷಗಳ ಹಿಂದೆಯೇ ಆಸಕ್ತಿ ತೋರಿತ್ತು. ಸೀಗೆಹಳ್ಳಿ ಹಾಗೂ ಕನ್ನಹಳ್ಳಿಗಳಲ್ಲಿರುವ ಕಸ ವಿಲೇವಾರಿ ಘಟಕಗಳ ಬಳಿಯೇ ಪ್ರಾಯೋಗಿಕವಾಗಿ ಘಟಕಗಳನ್ನು ಸ್ಥಾಪಿಸುವುದಕ್ಕೆ ಸರ್ಕಾರ ತಾತ್ವಿಕ ಒಪ್ಪಿಗೆಯನ್ನೂ ನೀಡಿತ್ತು. ಆದರೂ ವಿವಿಧ ಮಂಜೂರಾತಿ ಪಡೆಯುವುದು ವಿಳಂಬವಾಗಿರುವ ಕಾರಣ ಇನ್ನೂ ಘಟಕ ಸ್ಥಾಪಿಸಲು ಕಂಪನಿಗೆ ಸಾಧ್ಯವಾಗಿಲ್ಲ.

ಮಿಶ್ರ ಕಸ ಬೇರ್ಪಡಿಸಿ ವಿದ್ಯುತ್‌ ಉತ್ಪಾದಿಸುವ ತ್ರೀವೇಸ್ಟ್‌ ಕಂಪನಿ ಕೂಡಾ ಪಾಲಿಕೆ ವ್ಯಾಪ್ತಿಯಲ್ಲಿ ವಿದ್ಯುತ್‌ ಉತ್ಪಾದಿಸಲುಮುಂದೆ ಬಂದಿತ್ತು.ಸಂಪತ್‌ರಾಜ್‌ ಅವರು ಮೇಯರ್‌ ಆಗಿದ್ದಾಗಲೇ ಈ ಕಂಪನಿ ಜೊತೆ ಪಾಲಿಕೆ ಈ ಕುರಿತು ಒಪ್ಪಂದ ಮಾಡಿಕೊಂಡಿತ್ತು. ಇದಕ್ಕೆ ಸಚಿವ ಸಂಪುಟದ ಅನುಮತಿಯೂ ಸಿಕ್ಕಿತ್ತು. ಈ ಕಂಪನಿಗೆ ಚಿಕ್ಕನಾಗಮಂಗಲದ ಕಸ ವಿಲೇವಾರಿ ಘಟಕದ ಬಳಿ ಪಾಲಿಕೆ 10 ಎಕರೆ ಜಾಗ ನೀಡಲು ನಿರ್ಧರಿಸಿತ್ತು.

ನಿತ್ಯ 300 ಟನ್‌ ಮಿಶ್ರ ಕಸ ಬಳಸಿ ವಿದ್ಯುತ್‌ ಉತ್ಪಾದಿಸುವ ಈ ಯೋಜನೆಯೂ ಇನ್ನೂಅನುಷ್ಠಾನವಾಗಿಲ್ಲ.

ಆರ್‌ಡಿಎಫ್‌ ಬಳಸಿ ವಿದ್ಯುತ್‌ ಉತ್ಪಾದನೆ
ಕೆಪಿಸಿಎಲ್‌ ಕೂಡ ಬಿಡದಿ ಬಳಿ 15 ಎಕರೆ ಜಾಗದಲ್ಲಿ ಆರ್‌ಡಿಎಫ್‌ ಬಳಸಿ ವಿದ್ಯುತ್‌ ಉತ್ಪಾದನೆ ಎರಡು ಘಟಕಗಳನ್ನು ಸ್ಥಾಪಿಸುವ ಪ್ರಸ್ತಾವ ಹೊಂದಿದೆ. ಈ ಘಟಕಗಳು ನಿತ್ಯ ತಲಾ 200 ಟನ್‌ ಆರ್‌ಡಿಎಫ್‌ನಿಂದ ತಲಾ 5 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿವೆ.

ಈ ಪೈಕಿ ಒಂದು ಘಟಕ ಆರಂಭಿಸಲು ಕೆಪಿಸಿಎಲ್‌ ಟೆಂಡರ್‌ ಆಹ್ವಾನಿಸಿದ್ದು, ಜೂನ್‌ 15ರಂದು ತಾಂತ್ರಿಕ ಬಿಡ್‌ಗಳನ್ನು ತೆರೆಯಲಾಗಿದೆ. ಹಣಕಾಸು ಬಿಡ್‌ಗಳನ್ನು ಜೂನ್‌ 26ರಂದು ತೆರೆಯಲಿದೆ. ಮೊದಲ ಘಟಕ ಆರಂಭವಾದ ಬಳಿಕ ಇನ್ನೊಂದು ಘಟಕವನ್ನು ಆರಂಭಿಸಲಾಗುತ್ತದೆ.

ಅಂಕಿ ಅಂಶ
52 ಮೆಗಾವಾಟ್‌:
ಕಸದಿಂದ ವಿದ್ಯುತ್‌ ಉತ್ಪಾದನೆ ಗುರಿ (ದಿನವೊಂದಕ್ಕೆ)‌
4,500 ಟನ್‌:ವಿದ್ಯುತ್‌ ಉತ್ಪಾದಿಸಲು ನಿತ್ಯ ಬೇಕಾಗುವ ಕಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT