ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾರ್ಟ್‌ಮೆಂಟ್‌, ಫ್ಲ್ಯಾಟ್‌ಗಳಿಗೆ ಪ‍್ರತ್ಯೇಕ ಮೀಟರ್‌: ಕಾಯ್ದೆ ತಿದ್ದುಪಡಿ?

ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್‌ ಮನೋಹರ್‌
Published 23 ಮಾರ್ಚ್ 2024, 23:30 IST
Last Updated 23 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅಪಾರ್ಟ್‌ಮೆಂಟ್‌ಗಳಲ್ಲಿ ಹಲವಾರು ಮನೆಗಳಿಗೆ (ಫ್ಲ್ಯಾಟ್‌) ಒಂದೇ ಮೀಟರ್ ಅಳವಡಿಸಲಾಗಿರುತ್ತದೆ. ಇದರಿಂದ ಒಂದು ಫ್ಲ್ಯಾಟ್‌ನವರು ಬಳಸುವ ನೀರಿನ ಪ್ರಮಾಣ ತಿಳಿಯುವುದು ಕಷ್ಟವಾಗಿದೆ. ಹೀಗಾಗಿ, ಪ್ರತಿಯೊಂದು ಫ್ಲ್ಯಾಟ್‌ಗೂ ಪ್ರತ್ಯೇಕ ಮೀಟರ್‌ ಅಳವಡಿಸಲು ಚಿಂತಿಸಲಾಗುತ್ತಿದೆ’ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್‌ ಮನೋಹರ್‌ ಹೇಳಿದರು.

ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನೀರು ಉಳಿತಾಯ ಕಾರ್ಯಕ್ರಮದಲ್ಲಿ ಅವರು ಶನಿವಾರ ಮಾತನಾಡಿದರು.

ಫ್ಲ್ಯಾಟ್‌ಗಳಿಗೆ ಪ್ರತ್ಯೇಕ ಮೀಟರ್ ಅಳವಡಿಸಲು ಅವಕಾಶ ಮಾಡಿಕೊಡುವಂತೆ ಬೆಂಗಳೂರು ಫೆಡರೇಷನ್ ಸದಸ್ಯರು ಮನವಿ ಮಾಡಿದರು. ‘ಇದನ್ನು ಜಾರಿಗೆ ತರಲು ಕಾಯ್ದೆಗಳಿಗೆ ತಿದ್ದುಪಡಿ ಅಗತ್ಯವಿದೆ. ಅಪಾರ್ಟ್‌ಮೆಂಟ್‌ ನಿರ್ಮಾಣವಾಗುತ್ತಿರುವಂತಹ ಸಂದರ್ಭದಲ್ಲೇ ಫ್ಲ್ಯಾಟ್‌ಗಳಿಗೆ ಪ್ರತ್ಯೇಕವಾಗಿ ಮೀಟರ್ ಅಳವಡಿಕೆಗೆ ಅವಕಾಶ ಮಾಡಿಕೊಡಬೇಕು. ಪ್ರತ್ಯೇಕ ಮೀಟರ್‌ ಅಳವಡಿಸಲು ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್ ಮನವಿ ನೀಡಿದರೆ, ಅದನ್ನು ಸರ್ಕಾರದ ಗಮನಕ್ಕೆ ತಂದು ನಿರ್ಧಾರ ಕೈಗೊಳ್ಳಲಾಗುವುದು’ ಎಂದು ರಾಮ್‌ಪ್ರಸಾತ್‌ ಭರವಸೆ ನೀಡಿದರು.

‘ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್‌ನಲ್ಲಿ 30 ಕ್ಲಸ್ಟರ್‌ಗಳಿದ್ದು ಸುಮಾರು 15 ಲಕ್ಷಕ್ಕೂ ಹೆಚ್ಚು ಜನರು ಇದ್ದಾರೆ. ಈ ಅಪಾರ್ಟ್‌ಮೆಂಟ್‌ಗಳು ಕಾವೇರಿ ನೀರು, ಕೊಳವೆಬಾವಿಗಳು ಹಾಗೂ ಟ್ಯಾಂಕರ್‌ಗಳ ಮೇಲೆ ಅವಲಂಬಿತವಾಗಿವೆ. ನೀರಿನ ಸಮರ್ಪಕ ನಿರ್ವಹಣೆ ಹಾಗೂ ಮಿತ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಲಮಂಡಳಿ ‘ಗ್ರೀನ್ ಸ್ಟಾರ್ ರೇಟಿಂಗ್ ಚಾಲೆಂಜ್’ ಪ್ರಾರಂಭಿಸಿದೆ. ಇದನ್ನು ಅಪಾರ್ಟ್‌ಮೆಂಟ್‌ನವರು ಒಪ್ಪಿಕೊಂಡಿರುವುದು ಶ್ಲಾಘನಾರ್ಹ’ ಎಂದರು.

ಮಾಹಿತಿ ಸಂಗ್ರಹ: ಅಪಾರ್ಟ್‌ಮೆಂಟ್‌ಗಳಲ್ಲಿ ನೀರಿನ ಬಳಕೆ ಪ್ರಮಾಣವನ್ನು ಸಂಗ್ರಹಿಸಲು ಜಲಮಂಡಳಿ ಮುಂದಾಗಿದೆ. ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್ ಮೂಲಕ, ಯಾವ ಮೂಲಗಳಿಂದ ನೀರು ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ಕೇಳಲಾಗಿದೆ. ಈ  ಮಾಹಿತಿ ಆಧಾರದಲ್ಲಿ, ಮುಂದಿನ 15 ದಿನದಿಂದ 30 ದಿನಗಳಲ್ಲಿ ಅಪಾರ್ಟ್‌ಮೆಂಟ್‌ಗಳಿಗೆ ಕನಿಷ್ಠ ಅಗತ್ಯ ನೀರು ಪೂರೈಸಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT