ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧೀಕರಣ ಘಟಕಗಳಿಗೂ ನೀರಿನ ಕೊರತೆ

Last Updated 18 ಮಾರ್ಚ್ 2019, 20:11 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆಯಲ್ಲಿ ಕೊಳವೆಬಾವಿಗಳು ಬತ್ತುತ್ತಿರುವುದರಿಂದ ಕುಡಿಯುವ ನೀರಿಗಾಗಿ ನಿರ್ಮಾಣಗೊಂಡಿರುವ ನೀರು ಶುದ್ಧೀಕರಣ ಘಟಕಗಳಿಗೆ ನೀರಿನ ಕೊರತೆ ಎದುರಾಗಿದೆ. ಇದರಿಂದ ಜನರಿಗೆ ದಾಹ ನೀಗಿಸಲು ಅಗತ್ಯವಿರುವಷ್ಟು ಶುದ್ಧ ನೀರು ಸಿಗುತ್ತಿಲ್ಲ.

ಶಾಸಕರು ಮತ್ತುಬಹುತೇಕ ಪಾಲಿಕೆ ಸದಸ್ಯರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಾಣ ಮಾಡಿದ್ದಾರೆ. ಅವುಗಳಲ್ಲಿ ಬಹುತೇಕ ಘಟಕಗಳಿಗೆ ಕೊಳವೆಬಾವಿಗಳಿಂದ ನೀರನ್ನು ಪೂರೈಸಲಾಗುತ್ತಿದೆ. ಇಲ್ಲಿ ಶುದ್ಧೀಕರಣಗೊಂಡ ನೀರನ್ನು ಬೆಳಿಗ್ಗೆ ಹಾಗೂ ಸಂಜೆಯ ನಿಗದಿತ ಸಮಯದಲ್ಲಿ ಇಲ್ಲವೇ ದಿನದ 24 ಗಂಟೆಯೂ ಜನರು ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ನಗರದಲ್ಲಿ ಅಂತರ್ಜಲ ಕುಸಿದಿದೆ. ಅಲ್ಲದೆ, ಬೇಸಿಗೆ ಆರಂಭವಾದಾಗಿನಿಂದಲೂ ಪ್ರತಿನಿತ್ಯ ಒಂದಿಷ್ಟು ಕೊಳವೆಬಾವಿಗಳು ಬತ್ತುತ್ತಿವೆ. ಇದರಿಂದ ಬಹುತೇಕ ನೀರು ಶುದ್ಧೀಕರಣದ ಘಟಕಗಳಿಗೆ ನೀರಿನ ಕೊರತೆ ಎದುರಾಗಿದೆ.

ಸಾರ್ವಜನಿಕರು ನೀರಿಗಾಗಿ ಕ್ಯಾನ್‌, ಕೊಡಗಳನ್ನು ಹಿಡಿದುಕೊಂಡು ಘಟಕದ ವರೆಗೂ ಬಂದು, ಬರಿದಾದ ಕ್ಯಾನ್‌ಗಳನ್ನೆ ವಾಪಸ್ಸು ಒಯ್ಯುತ್ತಿರುವ ನೋಟಗಳು ಕೆಲವೆಡೆ ಕಾಣುತ್ತಿವೆ. ಹಲವೆಡೆ ನೀರಿಗಾಗಿ ಪಕ್ಕದ ವಾರ್ಡ್‌ಗೆ ಅಲೆಯುವ ಸ್ಥಿತಿ ಇದೆ.

ಕಾವೇರಿ ನೀರು ಪೂರೈಕೆಯಲ್ಲಿನ ಅನಿರೀಕ್ಷಿತ ವ್ಯತ್ಯಯ ಮತ್ತು ದುಬಾರಿ ಟ್ಯಾಂಕರ್‌ ನೀರಿನಿಂದಾಗಿ ಜನರು ಈ ಘಟಕಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈ ಘಟಕಗಳ ಮುಂದೆ ಬೆಳಿಗ್ಗೆ ಮತ್ತು ಸಂಜೆ ನೀರಿಗಾಗಿ ಜನರು ಹನುಮನ ಬಾಲದಂತೆ ಸಾಲುಗಟ್ಟಿ ನಿಲ್ಲುತ್ತಾರೆ. ₹ 5 ನಾಣ್ಯ ಹಾಕಿ 20 ಲೀ. ಪಡೆಯುತ್ತಾರೆ. ಒಂದೊಂದು ಮನೆಯವರು ಸರಾಸರಿ ಎರಡು ಕ್ಯಾನ್‌ ಹಾಗೂ ಅಂಗಡಿ, ಬೀದಿಬದಿ ತಿಂಡಿ ತಿನಿಸು ಮಾರುವವರು ಮೂರ್ನಾಲ್ಕು ಕ್ಯಾನ್‌ಗಳಲ್ಲಿ ನೀರನ್ನು ಒಯ್ಯುತ್ತಿದ್ದಾರೆ.

ಜನಪ್ರತಿನಿಧಿಗಳೇ ಈ ಘಟಕಗಳ ನಿರ್ವಹಣೆಗಾಗಿ ಮೇಲ್ವಿಚಾರಕರನ್ನು ನೇಮಿಸಿದ್ದಾರೆ. ಕೆಲವೊಮ್ಮೆ ವಿದ್ಯುತ್‌ ಕಡಿತವಾದಾಗಲೂ ಈ ಘಟಕಗಳಿಂದ ನೀರು ಕೊಡುಲ್ಲಿ ವ್ಯತ್ಯಯ ಆಗುತ್ತದೆ.

ನೀರಿಗೆ ಮಧ್ಯರಾತ್ರಿ ಬರುವ ಜನ

ನೀರಿಗಾಗಿ ಸಾಲಿನಲ್ಲಿ ನಿಲ್ಲಲು ಸಮಯವಿಲ್ಲದವರು ನೀರಿನ ಘಟಕಗಳಿಗೆ ಮಧ್ಯರಾತ್ರಿ ಬಂದು ನೀರು ತುಂಬಿಸಿಕೊಂಡು ಹೋಗುತ್ತಿದ್ದಾರೆ.

ಹಲವೆಡೆ ನಾಣ್ಯ ಹಾಕಿ ದಿನದ 24 ಗಂಟೆಯೂ ನೀರು ಪಡೆಯುವ ಸೌಕರ್ಯ ಇರುವುದರಿಂದ ತಡರಾತ್ರಿಯ ವರೆಗೂ ಜನ ಕುಡಿಯುವ ನೀರಿಗಾಗಿ ಘಟಕಗಳತ್ತ ಬರುತ್ತಾರೆ.

ನೀರಿನ ಘಟಕ ಸ್ಥಗಿತ : ರಾಜಾಜಿನಗರದ ರಾಜಕುಮಾರ್ ರಸ್ತೆಗೆ ಹೊಂದಿಕೊಂಡಿರುವ ನೀರು ಶುದ್ಧೀಕರಣ ಘಟಕ ಮೂರು ವಾರಗಳಿಂದ ಬಂದ್‌ ಆಗಿದೆ. ಸ್ಥಳೀಯರು ಶುದ್ಧ ನೀರಿಗಾಗಿ ಒಂದೂವರೆ ಕಿ.ಮೀ. ದೂರವಿರುವ ರಾಮಮಂದಿರದ ಬಳಿಯ ಘಟಕಕ್ಕೆ ಹೋಗುತ್ತಿದ್ದಾರೆ.

ನೀರಿನ ಸಾಕ್ಷ್ಯಚಿತ್ರ ಪ್ರದರ್ಶನ

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರವು ವಿಶ್ವ ಜಲ ದಿನದ ಪ್ರಯುಕ್ತ ಮಾರ್ಚ್‌ 22ರಂದು ‘ವಾಟರ್‌ ಆ್ಯಂಡ್‌ ಸಿಟಿ’ ಎಂಬ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಸಂಜೆ 6.30ಕ್ಕೆ ಆಯೋಜಿಸಿದೆ.

52 ನಿಮಿಷದ ಈ ಚಿತ್ರ ಪ್ರದರ್ಶನದ ಬಳಿಕ ನಿರ್ದೇಶಕರು ಮತ್ತು ಜಲತಜ್ಞರೊಂದಿಗೆ ಸಂವಾದ ಸಹ ಇರಲಿದೆ.

ಮಾಹಿತಿಗೆ: http://bangaloreinternationalcentre.org/

ನೀರಿನ ಅದಾಲತ್
ಜಲಮಂಡಳಿಯು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌(ಎಇಇ) ಪಶ್ಚಿಮ 3, ಆಗ್ನೆಯ 3, ನೈರುತ್ಯ 3 ಉಪವಿಭಾಗಗಳಲ್ಲಿ ಮಾರ್ಚ್‌ 19ರ ಬೆಳಿಗ್ಗೆ 9.30ರಿಂದ 11ರ ವರೆಗೆ ನೀರಿನ ಅದಾಲತ್‌ ಆಯೋಜಿಸಿದೆ.

ನೀರು ಪೂರೈಕೆಯಲ್ಲಿನ ವ್ಯತ್ಯಯ, ಒಳಚರಂಡಿ ವ್ಯವಸ್ಥೆ, ಬಿಲ್ಲಿಂಗ್‌, ಮೀಟರ್‌ ರೀಡಿಂಗ್‌ ಮತ್ತು ನೀರಿನ ಹೊಸ ಸಂಪರ್ಕ ಪಡೆಯುವ ಕುರಿತ ಕುಂದು ಕೊರತೆಗಳನ್ನು ಸಾರ್ವಜನಿಕರು ಅದಾಲತ್‌ನಲ್ಲಿ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ.

ಪಶ್ಚಿಮ 3: ಕೆಂಗೇರಿ ಐಡಿಯಲ್‌ ಹೋಮ್‌, ಬಿಇಎಂಎಲ್‌ ಬಡಾವಣೆ, ಆರ್‌.ಆರ್‌.ನಗರ; ಆಗ್ನೆಯ 3: ಕೋರಮಂಗಲ, ಬೆಳ್ಳಂದೂರು ; ನೈರುತ್ಯ 3: ಗಿರಿನಗರ, ಕತ್ರಿಗುಪ್ಪೆ, ಮೌಂಟ್‌ ಜಾಯ್‌, ಎಂ.ಎನ್‌.ಕೆ.ಪಾರ್ಕ್‌ ಸೇರಿದಂತೆ ಆಯಾ ಉಪವಿಭಾಗಗಳಲ್ಲಿ ಬರುವ ಪ್ರದೇಶಗಳ ನಿವಾಸಿಗಳು ಆಯಾ ವ್ಯಾಪ್ತಿಯ ಎಇಇ ಕಚೇರಿಯಲ್ಲಿ ನಡೆಯಲಿರುವ ನೀರಿನ ಅದಾಲತ್‌ನಲ್ಲಿ ಭಾಗವಹಿಸಬಹುದು ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೆರೆಯಂಗಳದಲ್ಲಿನ ಕೊಳವೆಬಾವಿಗಳ ಬಾಯಿ ಬಂದ್‌

ಆನೇಕಲ್: ಟ್ಯಾಂಕರ್ ಮೂಲಕ ನೀರು ಮಾರಾಟ ಮಾಡಲು ಮುತ್ತಾನಲ್ಲೂರು ಕೆರೆಯ ಬದಿಯ ಪ್ರದೇಶದಲ್ಲಿ ಕೊರೆಸಿದ್ದ 10ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ತಹಶೀಲ್ದಾರ್‌ ಸಿ.ಮಹಾದೇವಯ್ಯ ನೇತೃತ್ವದ ತಂಡ ಮುಚ್ಚಿದೆ.

ವ್ವವಸಾಯದ ಉದ್ದೇಶಕ್ಕಾಗಿ ಕೊಳವೆಬಾವಿ ಕೊರೆಯಿಸಿ, ಟ್ಯಾಂಕರ್‌ಗಳ ಮೂಲಕ ನೀರು ಮಾರಾಟ ಮಾಡಲಾಗುತ್ತಿದೆ ಎಂದು ಮಾಜಿ ಸೈನಿಕ‌ ಮೇಜರ್ ಸಂತೋಷ್ ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕ್ರಮ ಜರುಗಿಸಿದ್ದಾರೆ.

‘ಮುತ್ತಾನಲ್ಲೂರು ಅಮಾನಿ ಕೆರೆ ಸರ್ವೇ ನಂಬರ್ 67/4, 58/1, 49, 60/1, 60ರಲ್ಲಿದ್ದ ಹತ್ತಕ್ಕೂ ಹೆಚ್ಚು ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಲಾಗಿದೆ. ಕೊಳವೆಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ತಹಶೀಲ್ದಾರ್ ಸಿ.ಮಹಾದೇವಯ್ಯ ತಿಳಿಸಿದರು.

**

ಕೋಡಿಹಳ್ಳಿಯಲ್ಲಿನ ನೀರು ಶುದ್ಧೀಕರಣ ಘಟಕ ಕೆಟ್ಟುನಿಂತಿದೆ. ಹಾಗಾಗಿ ತಿಪ್ಪಸಂದ್ರದಲ್ಲಿನ ಘಟಕದಿಂದ ಪ್ರತಿದಿನ ನೀರು ತಂದು ಕುಡಿಯುತ್ತೇವೆ.
ಶಕ್ತಿವೇಲು, ಕೋಡಿಹಳ್ಳಿ

**

ಎರಡು ದಿನಗಳಿಗೆ ಒಮ್ಮೆ ಎರಡು ಗಂಟೆ ಹರಿಸುವ ಕಾವೇರಿ ನೀರು ಸಾಲುತ್ತಿಲ್ಲ. ನೀರಿಗಾಗಿ ನಿತ್ಯ ಶುದ್ಧೀಕರಣ ಘಟಕದ ಮುಂದೆ ಸಾಲುಗಟ್ಟಿ ನಿಲ್ಲುವುದು ಒಂದು ಕೆಲಸವಾಗಿದೆ.
- ಕಿರಣ್‌, ಹೊಸ ತಿಪ್ಪಸಂದ್ರ

**

ವಿಧಾನಸಭಾ ಕ್ಷೇತ್ರದಲ್ಲಿನ ಜನರಿಗೆ ನೀರಿನ ಕೊರತೆಯಾಗಬಾರದೆಂದು ನೀರಿನ 20 ಶುದ್ಧೀಕರಣ ಘಟಕಗಳನ್ನು ನಿರ್ಮಿಸಿದ್ದೇನೆ. - - ಅಖಂಡ ಶ್ರೀನಿವಾಸಮೂರ್ತಿ, ಶಾಸಕ,ಪುಲಿಕೇಶಿನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT