ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ 21 ಐಟಿ ಪಾರ್ಕ್‌ಗಳಿಗೆ ಶೀಘ್ರ ಕಾವೇರಿ ನೀರು: ಜಲಮಂಡಳಿ

ಒಆರ್‌ಸಿಎ ಪದಾಧಿಕಾರಿಗಳೊಂದಿಗೆ ಬಿಡಬ್ಲ್ಯುಎಸ್‌ಎಸ್‌ಬಿ ಅಧಕ್ಷ್ಯರ ಸಭೆ
Published 18 ಏಪ್ರಿಲ್ 2024, 0:20 IST
Last Updated 18 ಏಪ್ರಿಲ್ 2024, 0:20 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹದೇವಪುರ ವಲಯದಲ್ಲಿರುವ 21 ಐಟಿ ಪಾರ್ಕ್‌ಗಳಿಗೆ ಅಗತ್ಯವಿರುವಷ್ಟು ಕಾವೇರಿ ನೀರನ್ನು ಸರಬರಾಜು ಮಾಡಲು ಜಲಮಂಡಳಿ ಸಿದ್ಧವಿದೆ. ಕಾವೇರಿ ನೀರಿಗಾಗಿ ಬೇಡಿಕೆ ಸಲ್ಲಿಸಿರುವ ಕಂಪನಿಗಳಿಗೆ ಕಾವೇರಿ ನಾಲ್ಕನೇ ಹಂತದ ನೀರನ್ನು ಪೈಪ್‌ಲೈನ್‌ ಮೂಲಕ ಸರಬರಾಜು ಮಾಡಲಾಗುವುದು‘ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ಪ್ರಸಾತ್‌ ಮನೋಹರ್‌ ಹೇಳಿದರು.

ಔಟರ್‌ ರಿಂಗ್‌ ರೋಡ್‌ ಕಂಪನೀಸ್‌ ಅಸೋಸಿಯೇಷನ್‌ (ಒಆರ್‌ಸಿಎ) ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಅವರು ಮಾತನಾಡಿದರು.

ಹೆಚ್ಚು ಐಟಿ ಪಾರ್ಕ್‌ಗಳು ಕೊಳವೆಬಾವಿಗಳ ಮೇಲೆ ಅವಲಂಬಿತವಾಗಿವೆ. ಈ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಿದ್ದು, ಜಲಮಂಡಳಿ ಅಗತ್ಯ ವ್ಯವಸ್ಥೆ ಮಾಡುವ ಮೂಲಕ ಸರಿಪಡಿಸಿದೆ. ಎಲ್ಲ ಉದ್ಯಮಗಳ ಬಳಕೆಗೆ ಸುಮಾರು 12 ಎಂ.ಎಲ್‌.ಡಿಯಷ್ಟು ಕಾವೇರಿ ನೀರಿನ ಅವಶ್ಯಕತೆ ಇದೆ. ಸದ್ಯ ಲಭ್ಯವಿರುವ ಕಾವೇರಿ 4ನೇ ಹಂತದ ಯೋಜನೆಯಲ್ಲೇ 5 ಎಂ.ಎಲ್‌.ಡಿ ನೀರು ಒದಗಿಸಬಹುದು. ಇದಕ್ಕೆ ತಗಲುವ ವೆಚ್ಚವನ್ನು ಕಂಪನಿಗಳೇ ಭರಿಸಬೇಕು. ಶುಲ್ಕ ಭರಿಸಿದರೆ 30 ದಿನಗಳಲ್ಲಿ ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಕಾವೇರಿ 5ನೇ ಹಂತದ ಯೋಜನೆ ಜಾರಿಗೊಂಡ ನಂತರ ಹೆಚ್ಚಿನ ಪ್ರಮಾಣದ ನೀರು ಒದಗಿಸಬಹುದು. ಇನ್ನುಳಿದ ಬೇಡಿಕೆಯನ್ನು ಸಂಸ್ಕರಿಸಿದ ನೀರು ಸರಬರಾಜು ಮಾಡುವ ಮೂಲಕ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಐಟಿ ಪಾರ್ಕ್‌ನಲ್ಲಿರುವ ಕಚೇರಿಗಳಲ್ಲಿ ನಿತ್ಯ ಬಳಕೆಗೆ ಸಂಸ್ಕರಿಸಿದ ನೀರು ಬಳಸಬೇಕು. ಮನೆಗಳ ಹಾಗೂ ಕಚೇರಿಗಳ ಶೌಚಾಲಯದ ನೀರು ಹೊರತಪಡಿಸಿ ಬೇರೆ ಕಾರ್ಯಗಳಿಗೆ ಬಳಕೆಯಾದ ನೀರನ್ನು ‘ಗ್ರೇ ವಾಟರ್‌’ ಎಂದು ಕರೆಯಲಾಗುತ್ತದೆ. ಇದನ್ನು ಸಂಸ್ಕರಿಸುವುದು ಬಹಳ ಸುಲಭ ಎಂದು ಸಲಹೆ ನೀಡಿದರು.

ಬಹಳಷ್ಟು ಐಟಿ ಪಾರ್ಕ್‌ಗಳು ಈಗಾಗಲೇ ಮಳೆ ನೀರು ಸಂಗ್ರಹ ಪದ್ದತಿಯನ್ನು ಅಳವಡಿಸಿಕೊಂಡಿವೆ. ಹೊರ ಪ್ರದೇಶದಲ್ಲಿ ಬೀಳುವ ಮಳೆ ನೀರನ್ನ ಶೇಖರಿಸಿ ಹತ್ತಿರದ ಕೆರೆಗಳು ಅಥವಾ ಜಲಮೂಲಗಳಿಗೆ ಹರಿಯಬಿಡಬಹುದು ಎಂದರು.

ಔಟರ್‌ ರಿಂಗ್‌ ರೋಡ್‌ ಕಂಪನೀಸ್‌ ಅಸೋಸಿಯೇಷನ್‌ ಉಪಾಧ್ಯಕ್ಷೆ ಅರ್ಚನಾ ತಯಾದೇ, ಕಾರ್ಯದರ್ಶಿ ರಮೇಶ್‌ ವೆಂಕಟರಾಮು, ಜನೆರಲ್‌ ಮ್ಯಾನೇಜರ್‌ ಕೃಷ್ಣ ಕುಮಾರ್‌ ಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT