ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡದ ವಾತಾವರಣ: ಮಳೆ ಸಿಂಚನ

Last Updated 26 ಡಿಸೆಂಬರ್ 2022, 6:21 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಭಾನುವಾರ ಸಂಜೆ ಸಾಧಾರಣ ಮಳೆ ಸುರಿಯಿತು.

ನಗರದ ಬಹುತೇಕ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಕಂಡುಬಂತು. ಸಂಜೆ 6 ಗಂಟೆ ನಂತರ ತುಂತುರು ಮಳೆ ಆರಂಭವಾಯಿತು. ನಂತರ, ಮಳೆ ಜೋರಾಯಿತು. ಸಂಪಂಗಿರಾಮನಗರ, ಶಿವಾಜಿನಗರ, ಎಂ.ಜಿ.ರಸ್ತೆ, ಅಶೋಕನಗರ, ಕೋರಮಂಗಲ, ಮಡಿವಾಳ, ಜಯನಗರ, ಜೆ.ಪಿ.ನಗರ, ಹನುಮಂತನಗರ, ಗಿರಿನಗರ, ದೀಪಾಂಜಲಿನಗರ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಕೆಂಗೇರಿ, ನಾಯಂಡನಹಳ್ಳಿ, ಬನಶಂಕರಿ, ಮಡಿವಾಳ, ಕೋರಮಂಗಲ, ಶಾಂತಿ ನಗರ, ವಿಲ್ಸನ್ ಗಾರ್ಡನ್, ಶಾಂತಿನಗರ, ಗಾಂಧಿನಗರ ಹಾಗೂ ಸುತ್ತಮುತ್ತ ಮಳೆ ಆಯಿತು.

ವಿಜಯನಗರ, ರಾಜಾಜಿನಗರ, ಯಶವಂತಪುರ, ಪೀಣ್ಯ, ಜಾಲಹಳ್ಳಿ, ಮಲ್ಲೇಶ್ವರ, ಶೇಷಾದ್ರಿಪುರ, ಹೆಬ್ಬಾಳ, ಆರ್‌.ಟಿ.ನಗರ ಹಾಗೂ ಸುತ್ತಮುತ್ತಲೂ ಮಳೆ ಸುರಿಯಿತು. ಭಾನುವಾರ ರಜೆ ಇದ್ದಿದ್ದರಿಂದ ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾರುಕಟ್ಟೆಗಳತ್ತ ಮುಖ ಮಾಡಿದ್ದರು.

ಕ್ರಿಸ್‌ಮಸ್‌ ಹಬ್ಬದ ನಿಮಿತ್ತವೂ ಮಾರುಕಟ್ಟೆಯಲ್ಲಿ ಸಂದಣಿ ಕಂಡು ಬಂತು. ಮಳೆ ಆರಂಭವಾಗಿದ್ದರಿಂದ ಹಲವರು, ಅಂಗಡಿ ಹಾಗೂ ಮಳಿಗೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದರು.

ಕೆಲ ಸವಾರರು, ತಮ್ಮ ದ್ವಿಚಕ್ರ ವಾಹನಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಸುರಕ್ಷಿತ ಸ್ಥಳಗಳಲ್ಲಿ ನಿಂತುಕೊಂಡಿದ್ದರು. ಬಹುತೇಕರು, ಸುರಿಯುವ ಮಳೆಯಲ್ಲಿ ಓಡಾಡಿದರು. ತುಂತುರು ಮಳೆಯಿಂದಾಗಿ ಹಲವೆಡೆ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. ದಟ್ಟಣೆಯೂ ಕಂಡುಬಂತು.

ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್ ಹಾಗೂ ಸುತ್ತಮುತ್ತ ರಸ್ತೆಗಳಲ್ಲೂ ಜನಸಂದಣಿ ಹೆಚ್ಚಿತ್ತು. ಯುವಕ–ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸುರಿಯುವ ಮಳೆಯಲ್ಲೇ ಹಲವರು ಕೊಡೆ ಹಿಡಿದು ಹೆಜ್ಜೆ ಹಾಕಿದರು. ಕೆಲವರು, ಬಟ್ಟೆ ಹಾಗೂ ಬ್ಯಾಗ್‌ಗಳನ್ನು ತಲೆ ಮೇಲಿಟ್ಟುಕೊಂಡು ಓಡಾಡಿದರು.

‘ಭಾನುವಾರ ಇಡೀ ದಿನ ಮೋಡ ಕವಿದ ವಾತಾವರಣವೇ ಹೆಚ್ಚಿತ್ತು. ಸಂಜೆ ಹಲವಡೆಗೆ ಉತ್ತಮ ಮಳೆಯಾಗಿದೆ. ಹಾನಿ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT