ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸರಳ ಸೂತ್ರಗಳು ಏನು?

Published 15 ಅಕ್ಟೋಬರ್ 2023, 20:28 IST
Last Updated 15 ಅಕ್ಟೋಬರ್ 2023, 20:28 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಕಡಿವಾಣ ಹಾಕಲು ಸಾಧ್ಯವೇ ? ಹೀಗೊಂದು ಪ್ರಶ್ನೆಯನ್ನು ತಜ್ಞರು, ಸಾರ್ವಜನಿಕರ ಎದುರು ಇಟ್ಟಾಗ, ‘ಒಮ್ಮೆಲೆ ಕಡಿಮೆ ಮಾಡುವುದು ಕಷ್ಟವಾದರೂ, ವೈಜ್ಞಾನಿಕ ಕ್ರಮಗಳನ್ನು ಹಂತ ಹಂತವಾಗಿ ಕೈಗೊಳ್ಳುವ ಮೂಲಕ ದಟ್ಟಣೆ ನಿಯಂತ್ರಿಸಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾತ್ರವಲ್ಲ, ದಟ್ಟಣೆ ಶುಲ್ಕ, ವೈಯಕ್ತಿಕ ವಾಹನ ಬಿಟ್ಟು ಸಾರ್ವಜನಿಕ ವಾಹನಗಳನ್ನು ಬಳಸುವುದೂ ಸೇರಿದಂತೆ ಅನೇಕ ಸಲಹೆಗಳನ್ನು ನೀಡಿದ್ದಾರೆ.   

ದಟ್ಟಣೆ ಶುಲ್ಕ

ದಟ್ಟಣೆ ಇರುವ ರಸ್ತೆಗಳಿಗೆ ಹೊಂದಿಕೊಂಡು ದಟ್ಟಣೆ ಮುಕ್ತ ರಸ್ತೆಗಳಿರಬೇಕು. ದಟ್ಟಣೆ ರಹಿತವಾಗಿ ಸಂಚರಿಸಲು ಬಯಸುವವರು ಶುಲ್ಕ ಪಾವತಿಸಿ ದಟ್ಟಣೆ ಮುಕ್ತ ರಸ್ತೆಯಲ್ಲಿ ಸಂಚರಿಸಬಹುದು. ಈ ರೀತಿ ಮಾಡಿದಾಗ ವೈಯಕ್ತಿಕ ವಾಹನ ಬಳಸುವವರ ಸಂಖ್ಯೆ ಕಡಿಮೆಯಾಗುತ್ತದೆ. ಸಾರ್ವಜನಿಕ ವಾಹನದಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚುತ್ತದೆ. ಲಂಡನ್‌ನಲ್ಲಿ ಈ ಪ್ರಯೋಗ ಮಾಡಿದ ಬಳಿಕ ಅಲ್ಲಿ ಶೇ 33ರಷ್ಟು ದಟ್ಟಣೆ ಕಡಿಮೆಯಾಗಿದೆ. ಬಸ್‌ ಪ್ರಯಾಣಿಕರ ಪ್ರಮಾಣ ಶೇ 38ರಷ್ಟು ಹೆಚ್ಚಾಗಿದೆ ಎಂದು ‘ಬ್ರ್ಯಾಂಡ್ ಬೆಂಗಳೂರು’ ಅಭಿಯಾನದ ‘ಮೊಬಿಲಿಟಿ ವರ್ಟಿಕಲ್’ ಅಡಿಯಲ್ಲಿ ‘ಎಜಿಲ್ ಆ್ಯಂಡ್‌ ಸಸ್ಟೈನಬಲ್ ಮೊಬಿಲಿಟಿ ಫಾರ್ ಆಲ್’ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.

‘ಸ್ವಂತ 2 ಸಾರ್ವಜನಿಕ ಸಾರಿಗೆ’

ಕನಿಷ್ಠ ವಾರಕ್ಕೆ ಎರಡು ದಿನ ಸ್ವಂತ ವಾಹನವನ್ನು ಬಿಟ್ಟು ಸಾರ್ವಜನಿಕ ವಾಹನಗಳಲ್ಲಿ ಸಂಚರಿಸುವಂತೆ ಮಾಡಲು ‘ಬಿ’ ಪ್ಯಾಕ್‌ ‘ಸ್ವಂತ 2 ಸಾರ್ವಜನಿಕ ಸಾರಿಗೆ’ ಅಭಿಯಾನ ನಡೆಸುತ್ತಿದೆ. ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ ಸುತ್ತಮುತ್ತಲಿನಲ್ಲಿ ಈ ಬಗ್ಗೆ 27 ಸಂಘಟನೆಗಳು ಸೇರಿ ಸಮೀಕ್ಷೆಗಳನ್ನು ಮಾಡಿದಾಗ, ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳದ ಉತ್ತಮ ಸಾರ್ವಜನಿಕ ಸಾರಿಗೆ ಬಳಸಲು ತಯಾರಿರುವುದಾಗಿ ಶೇ 95ಷ್ಟು ಉದ್ಯೋಗಿಗಳು, ಸಾರ್ವಜನಿಕರು ಹೇಳಿಕೊಂಡಿದ್ದರು. ಈ ಸಮೀಕ್ಷೆ ಮೆಟ್ರೊ ನೇರಳೆ ಮಾರ್ಗದ ವಿಸ್ತರಿತ ಪ್ರದೇಶದಲ್ಲಿ ಮೆಟ್ರೊ ರೈಲು ಆರಂಭವಾಗುವುದಕ್ಕಿಂತ ಮುಂಚೆ ನಡೆದಿತ್ತು. 

ಒಆರ್‌ಆರ್‌ಸಿಎ ಸಲಹೆಗಳು

ಹೊರವರ್ತುಲ ರಸ್ತೆಗಳಲ್ಲಿ ದಟ್ಟಣೆ ಪ್ರಮಾಣ ಕಡಿಮೆ ಮಾಡಲು ಹೊರವರ್ತುಲ ರಸ್ತೆ ಕಂಪನಿ ಅಸೋಸಿಯೇಶನ್‌ (ಒಆರ್‌ಆರ್‌ಸಿಎ) ಕೆಲವು ಸಲಹೆಗಳನ್ನು ನೀಡಿದೆ. ಅವುಗಳು ಹೀಗಿವೆ; ಸುಸಜ್ಜಿತ ಪಾದಚಾರಿ ಮಾರ್ಗ ನಿರ್ಮಿಸಬೇಕು. ಸೈಕಲ್‌ ಬಳಕೆ ಪ್ರೋತ್ಸಾಹಿಸಬೇಕು. ವೈಯಕ್ತಿಕ ವಾಹನ ಬಿಟ್ಟು ಸಾರ್ವಜನಿಕ ವಾಹನ ಬಳಸಬೇಕು‌. ಪರ್ಯಾಯ ರಸ್ತೆ ಸಂಪರ್ಕ ಹೆಚ್ಚಿಸಬೇಕು. ರಸ್ತೆಗಳ ಒತ್ತುವರಿಗಳನ್ನು ತೆರವುಗೊಳಿಸಬೇಕು. ಒಳ ರಸ್ತೆಗಳನ್ನು ವಿಸ್ತರಿಸಬೇಕು. ಶಾಲಾ, ಕಾಲೇಜು, ಕಚೇರಿ ಆರಂಭವಾಗುವ ಸಮಯದಲ್ಲಿ ಕಾಮಗಾರಿಗಳನ್ನು ನಡೆಸಬಾರದು. ಬ್ಯಾರಿಕೇಡ್‌ ಮತ್ತು ಸಿಗ್ನಲ್‌ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಜನರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು.

ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್

ಇನ್ನಷ್ಟು ಪರಿಹಾರೋಪಾಯಗಳು

* ಎಲ್ಲ ಕಂಪನಿಗಳ ಉದ್ಯೋಗಿಗಳು ಸ್ವಂತ ವಾಹನಗಳಲ್ಲಿ ಒಬ್ಬೊಬ್ಬರೇ ಬರುವುದನ್ನು ನಿಲ್ಲಿಸಬೇಕು. ಬಿಎಂಟಿಸಿ ಅಥವಾ ತಮ್ಮ ಕಂಪನಿಯ ಬಸ್‌ಗಳಲ್ಲಿ ಬರಬೇಕು. ಒಂದು ಸಾವಿರ ಜನರು ಒಂದೊಂದು ಕಾರುಗಳಲ್ಲಿ ಹೋಗುವ ಬದಲು 20 ಬಸ್‌ಗಳಲ್ಲಿ ಅಷ್ಟು ಮಂದಿ ಪ್ರಯಾಣಿಸಲು ಸಾಧ್ಯ.

* ಕಂಪನಿಗಳಲ್ಲಿ ಒಂದೇ ಸಮಯಕ್ಕೆ ಕೆಲಸದ ಅವಧಿ ಶುರುವಾಗುವುದನ್ನು ತಪ್ಪಿಸಬೇಕು. ಬೆಳಿಗ್ಗೆ 9ಕ್ಕೆ 10ಕ್ಕೆ 11ಕ್ಕೆ ಹೀಗೆ ಬೇರೆ ಬೇರೆ ಸಮಯದಲ್ಲಿ ಕೆಲಸ ಆರಂಭಿಸಬೇಕು. ಆಗ ಕೆಲಸ ಮುಗಿಯುವ ಸಮಯವೂ ಬೇರೆ ಬೇರೆ ಆಗುವುದರಿಂದ ಸಂಚಾರ ದಟ್ಟಣೆ ತಪ್ಪಲಿದೆ.

* ವಾರಕ್ಕೆ ಎರಡು ದಿನ ಕಚೇರಿಗೆ ಬರಬೇಕು ಎಂದು ಕೆಲವು ಕಂಪನಿಗಳು ಮಾಡಿರುವ ನಿಯಮವನ್ನು ಕೂಡ ಬೇರೆ ಬೇರೆ ದಿನಗಳಿಗೆ ಅನ್ವಯಿಸಬೇಕು.

* ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಪ್ರತ್ಯೇಕ ರಸ್ತೆ ಮಾಡಲಾಗಿತ್ತು. ಮೆಟ್ರೊ ಕಾಮಗಾರಿಯಿಂದಾಗಿ ಆ ವ್ಯವಸ್ಥೆ ನಿಂತಿತು. ಈಗ ಮತ್ತೆ ಪ್ರತ್ಯೇಕ ಮಾರ್ಗ ಮಾಡಬೇಕು.

* ರಸ್ತೆಯ ಬದಿಯಲ್ಲಿ ವಾಹನಗಳ ಪಾರ್ಕಿಂಗ್‌ ತಡೆ ಹಿಡಿಯಬೇಕು. ರಸ್ತೆಯಿಂದ ಹೊರಗೆ ಅಲ್ಲಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು.

* ಅವೈಜ್ಞಾನಿಕ ಹಂಪ್ಸ್‌ಗಳನ್ನು ತೆಗೆಯಬೇಕು. ಗುಂಡಿಗಳನ್ನು ಮುಚ್ಚಬೇಕು.

* ಹೊರವರ್ತುಲ ರಸ್ತೆಯಲ್ಲಿ ಭಾರಿ ವಾಹನಗಳನ್ನು ಬೆಳಿಗ್ಗೆ 7 ರಿಂದ ರಾತ್ರಿ 10ವರೆಗೆ ನಿರ್ಬಂಧಿಸಬೇಕು.

* ವರ್ತೂರು ಪಣತ್ತೂರು ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸಲು ಕಾರ್ಯಪಡೆ ರಚಿಸಬೇಕು.

* ಮೆಟ್ರೊ ಹಸಿರು ಮತ್ತು ನೇರಳೆ ಮಾರ್ಗಗಳಷ್ಟೇ ಕಾರ್ಯಾಚರಿಸುತ್ತಿವೆ. ಮೆಟ್ರೊ ನೀಲಿ ಗುಲಾಬಿ ಹಳದಿ ಜಾಲವನ್ನು ಶೀಘ್ರ ಕಲ್ಪಿಸಬೇಕು. ಮೆಟ್ರೊ ಫೀಡರ್‌ ಸೇವೆ ಒದಗಿಸಬೇಕು.

ಅಂಕಿ ಅಂಶ

1.12 ಕೋಟಿ ಬೆಂಗಳೂರಿನಲ್ಲಿ ನಿತ್ಯ ಸಂಚರಿಸುವ ವಾಹನಗಳ ಪ್ರಮಾಣ

9  ದಟ್ಟಣೆ ಶುಲ್ಕ ವಿಧಿಸಲು ಪ್ರಸ್ತಾಪಿಸಲಾಗಿರುವ ಬೆಂಗಳೂರು ಪ್ರವೇಶಿಸುವ ರಸ್ತೆಗಳ ಸಂಖ್ಯೆ

ಸಂಚಾರ ಸಮಸ್ಯೆ ಪರಿಹಾರಕ್ಕೆ ಕ್ರಮ

ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ. ಸಂಚಾರಕ್ಕೆ ಇರುವ ಸಮಸ್ಯೆಗಳನ್ನು ಮೊದಲು ನಿವಾರಿಸಲಾಗುವುದು. ದಟ್ಟಣೆಗೆ ಕಾರಣವಾಗಿರುವ ಅನಧಿಕೃತ ಅಂಗಡಿಗಳನ್ನು ಗುರುತಿಸಿ ಮೂರು ತಿಂಗಳಲ್ಲಿ ತೆರವುಗೊಳಿಸಲಾಗುವುದು. ಮಹದೇವಪುರ ವಲಯ ಹೊರ ವರ್ತುಲ ರಸ್ತೆಯಿಂದ ಹೊಸ ಪಿ.ಆರ್.ಆರ್. ರಸ್ತೆಗೆ ಸಂಪರ್ಕ ಕಲ್ಪಿಸಲು 5.6 ಕಿ.ಮೀ. ಉದ್ದದ 45 ಮೀಟರ್ ಅಗಲದ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಅದರಲ್ಲಿ 4 ಕಿ.ಮೀ. ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಉಳಿದಿರುವ 1.6 ಕಿ.ಮೀ.ಯಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ನಗರದ ಎಲ್ಲ ರಸ್ತೆಗಳಲ್ಲಿ ಉಂಟಾಗುವ ದಟ್ಟಣೆ ತಪ್ಪಿಸಲು 100 ದಿನಗಳಲ್ಲಿ ಪರಿಹಾರೋಪಾಯಗಳ ನೀಲನಕ್ಷೆ ತಯಾರಿಸಲಾಗುವುದು. ಡಿ.ಕೆ. ಶಿವಕುಮಾರ್ ಬೆಂಗಳೂರು ನಗರಾಭಿವೃದ್ದಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT