ಸೋಮವಾರ, ಫೆಬ್ರವರಿ 24, 2020
19 °C
5ನೇ ಆವೃತ್ತಿಯ ಮಿತ್ಸುಬಿಷಿ ಎಲೆಕ್ಟ್ರಿಕ್ ಕಪ್‌ಗೆ ಚಾಲನೆ l ಭವಿಷ್ಯದ ತಂತ್ರಜ್ಞಾನ ಅನಾವರಣ

ಸಂದೇಶ ರವಾನಿಸುವ ಗಾಲಿ ಕುರ್ಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಾರ್ಶ್ವವಾಯು ಪೀಡಿತರು, ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಸುಲಭವಾಗಿ ಬಳಸುವಂತಹ ಗಾಲಿ ಕುರ್ಚಿಯನ್ನು  (ವೀಲ್ ಚೇರ್‌) ತಮಿಳುನಾಡಿನ ಡಾ.ಮಹಾಲಿಂಗಮ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ

ಗಾಲಿ ಕುರ್ಚಿಯಲ್ಲಿ ಕುಳಿತವರ ದೇಹದ ವಿವಿಧ ಭಾಗ ಎದುರಿಸುತ್ತಿರುವ ಒತ್ತಡವೂ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಕುಟುಂಬದ ಸದಸ್ಯರಿಗೆ ಸಂದೇಶ ತನ್ನಿಂದ ತಾನೆ ರವಾನೆಯಾಗುವುದು ಇದರ ವಿಶೇಷ.

ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಹಾಗೂ ಮಿತ್ಸುಬಿಷಿ ಎಲೆಕ್ಟ್ರಿಕ್ ಆಶ್ರಯದಲ್ಲಿ ನಗರದಲ್ಲಿ ಆಯೋಜಿಸಿರುವ ಎರಡು ದಿನಗಳ 5ನೇ ‘ಮಿತ್ಸುಬಿಷಿ ಎಲೆಕ್ಟ್ರಿಕ್ ಕಪ್’ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಈ ‘ಜೀವ ಉಳಿಸುವ ಚಲನೆ’ (ಲೈಫ್‌ ಸೇವಿಂಗ್ ಮೊಬಿಲಿಟಿ) ಪ್ರಾಜೆಕ್ಟ್‌ ಗಮನ ಸೆಳೆಯಿತು.

ನಾಲ್ವರು ವಿದ್ಯಾರ್ಥಿಗಳು, ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಗಾಲಿ ಕುರ್ಚಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿರುವ ಸಾಧನ ಬಳಸಿ, ರೋಗಿಯು ಗಾಲಿ ಕುರ್ಚಿ ಸ್ವಯಂ ಚಲಿಸುವಂತೆ ಮಾಡಬಹುದು. ಬೆನ್ನಿನ ಭಾಗದಲ್ಲಿ ಬಹು ಸಂವೇದಕಗಳನ್ನು ಅಳವಡಿಸಲಾಗಿದೆ. ಕುಳಿತವರು ಕಿರಿಕಿರಿ ಅನುಭವಿಸಿದರೆ ನಿರ್ದಿಷ್ಟ ವ್ಯಕ್ತಿಗೆ ಸಂದೇಶ ‌ರವಾನೆಯಾಗಲಿದೆ. ದೇಹದ ಉಷ್ಣಾಂಶ, ಹೃದಯ ಬಡಿತವನ್ನೂ ಗ್ರಹಿಸಲಿದೆ. ಕುರ್ಚಿಯ ಬಲ ಹಿಡಿಕೆಯಲ್ಲಿ ಎಲ್‌ಇಡಿ ಪರದೆ ಬಳಸಿ ತುರ್ತು ಕರೆ ಮಾಡುವುದು ಸೇರಿದಂತೆ ವಿವಿಧ ಆಯ್ಕೆಗಳಿವೆ. ಸೈರನ್, ಬೆಳಕಿನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಹಾಸಿಗೆಯಂತೆ ತೆರೆದು ಕೊಳ್ಳಬಲ್ಲ ಈ ಕುರ್ಚಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದವರು ಮಲಗಬಹುದು. 

‘ಇದಕ್ಕೆ ₹50 ಸಾವಿರ ವೆಚ್ಚವಾಗಿದೆ. ಇದನ್ನು ಇನ್ನಷ್ಟು ಸುಧಾರಣೆ ಮಾಡಲಿದ್ದೇವೆ. ಆಸನದ ಮೇಲ್ಭಾಗ ಸೌರ ಫಲಕವನ್ನು ಅಳವಡಿಸುತ್ತೇವೆ’ ಎಂದು ತಂಡದ ಸದಸ್ಯರಾದ ಕೆ.ಸರವಣಕುಮಾರ್ ತಿಳಿಸಿದರು.

35 ತಂಡ ಭಾಗಿ: ಶುಕ್ರವಾರ ಆರಂಭವಾದ ಈ ಸ್ಪರ್ಧೆಯಲ್ಲಿ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ 9 ರಾಜ್ಯಗಳ 35 ತಂಡಗಳು ಪಾಲ್ಗೊಂಡಿವೆ. ಸಾಧನಗಳ ನಡುವೆ ಸಂಪರ್ಕ (ಐಒಟಿ), ರೋಬೋಟ್, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧರಿತ ಮಾದರಿಗಳು ಸ್ಪರ್ಧೆಯಲ್ಲಿದ್ದವು. 

‘ವಿದ್ಯಾರ್ಥಿಗಳು ತಂತ್ರಜ್ಞಾನದ ಮಹತ್ವ ಹಾಗೂ ಆವಿಷ್ಕಾರಗಳ ಬಗ್ಗೆ ತಿಳಿದುಕೊಂಡು ಭವಿಷ್ಯ ರೂಪಿಸಲು ಈ ಸ್ಪರ್ಧೆ ನೆರವಾಗಲಿದೆ. ಪ್ರಥಮ ಬಹುಮಾನ ₹1 ಲಕ್ಷ, ದ್ವಿತೀಯ ಬಹುಮಾನ ₹75 ಸಾವಿರ ಹಾಗೂ ತೃತೀಯ ಬಹುಮಾನ ₹50 ಸಾವಿರ ನಿಗದಿಪಡಿಸಲಾಗಿದೆ’ ಎಂದು ಮಿತ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾದ ಕಾರ್ಪೊರೇಟ್ ಸೇವೆ ಹಾಗೂ ಕಾರ್ಯತಂತ್ರ ವಿಭಾಗದ ಮುಖ್ಯಸ್ಥ ರಾಜೀವ್ ಶರ್ಮ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು