ಪತಿ ಸಾವಿನ ಬೆನ್ನಲ್ಲೇ ಪತ್ನಿಯೂ ಆತ್ಮಹತ್ಯೆ

7
ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಹೂವಿನ ವ್ಯಾಪಾರಿ ವಿರುದ್ಧ ಎಫ್‌ಐಆರ್

ಪತಿ ಸಾವಿನ ಬೆನ್ನಲ್ಲೇ ಪತ್ನಿಯೂ ಆತ್ಮಹತ್ಯೆ

Published:
Updated:
Deccan Herald

ಬೆಂಗಳೂರು: ಪರಸ್ತ್ರೀ ಸಂಗದ ವಿವಾದಕ್ಕೆ ಸಿಲುಕಿ ಹರೀಶ್ (30) ಎಂಬುವರು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ಅವರ ಪತ್ನಿ ಶಿಲ್ಪಾ (28) ಕೂಡ ನೇಣಿಗೆ ಶರಣಾಗಿದ್ದಾರೆ.

ದಂಪತಿ, ಮೈಸೂರು ರಸ್ತೆಯ ಕಸ್ತೂರಬಾನಗರದಲ್ಲಿ ನೆಲೆಸಿದ್ದರು. ಅ.1ರ ಮಧ್ಯಾಹ್ನ ಕನಕಪುರ ರಸ್ತೆಯ ನೆಲ್ಲಿಕೆರೆಯಲ್ಲಿ ಕ್ರಿಮಿನಾಶಕ ಕುಡಿದು ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಗುರುವಾರ ಬೆಳಿಗ್ಗೆ ಮನೆಯಲ್ಲಿ ತಿಥಿ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿತ್ತು. ಈ ವೇಳೆ ಶಿಲ್ಪಾ, ಬಟ್ಟೆ ಬದಲಿಸಿ ಬರುವುದಾಗಿ ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರ್ಧ ತಾಸಿನ ಬಳಿಕ ಸಂಬಂಧಿಕರು ಕೋಣೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದ ಬ್ಯಾಟರಾಯನಪುರ ಪೊಲೀಸರು‌ ಹೇಳಿದ್ದಾರೆ.

ಕೆ.ಆರ್.ಮಾರುಕಟ್ಟೆಯ ಆಟೊಮೊಬೈಲ್ಸ್ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹರೀಶ್, ಎಂಟು ವರ್ಷಗಳ ಹಿಂದೆ ಶಿಲ್ಪಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಐದು ವರ್ಷದ ಮಗಳಿದ್ದಾಳೆ.

ಹರೀಶ್ ಅವರಿಗೆ ವರ್ಷದ ಹಿಂದೆ ರೇವಣ್ಣ ಎಂಬ ಹೂವಿನ ವ್ಯಾಪಾರಿಯ ಪರಿಚಯವಾಗಿತ್ತು. ಕ್ರಮೇಣ ಅವರಿಬ್ಬರು ಆಪ್ತ ಸ್ನೇಹಿತರಾದರು. ಆಗಾಗ್ಗೆ ಗೆಳೆಯನ ಮನೆಗೆ ಹೋಗಿ ಬರುತ್ತಿದ್ದ ಹರೀಶ್‌ಗೆ, ಅವರ ಪತ್ನಿ ಶಾಲಿನಿ ಜತೆ ಸಲುಗೆ ಬೆಳೆಯಿತು. ಈ ವಿಚಾರ ಎರಡೂ ಕುಟುಂಬದವರಿಗೆ ಗೊತ್ತಾಗಿ ಗಲಾಟೆಗಳು ಆಗಿದ್ದವು. ಆ ನಂತರ ಹರೀಶ್‌ ಹಾಗೂ ಶಾಲಿನಿ ಮನೆ ಬಿಟ್ಟು ಹೋಗಿದ್ದರು. ಆಗ ವಿವಾದ ಬ್ಯಾಟರಾಯನಪುರ ಠಾಣೆಯ ಮೆಟ್ಟಿಲೇರಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಮೊಬೈಲ್ ಕರೆ ವಿವರ ಆಧರಿಸಿ ಅವರನ್ನು ಪತ್ತೆ ಮಾಡಿದ್ದ ಪೊಲೀಸರು, ಇಬ್ಬರಿಗೂ ಬೈದು ಬುದ್ಧಿ ಹೇಳಿ ಕಳುಹಿಸಿದ್ದರು. ಈ ವೇಳೆ ಪೊಲೀಸರೆದುರೇ ಗೆಳೆಯನ ಮೇಲೆ ಹಲ್ಲೆ ನಡೆಸಿದ್ದ ರೇವಣ್ಣ, ‘ನನ್ನ ಬದುಕು ನಾಶ ಮಾಡಿದೆ. ನಿನ್ನನ್ನು ಜೀವಸಹಿತ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದರು. ಅದೇ ಭೀತಿಯಲ್ಲಿ ಮನೆ ತೊರೆದಿದ್ದ ಹರೀಶ್, ನೆಲ್ಲಿಕೆರೆಯ ಸೋದರಿ ಮನೆಯಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ.

‘ಠಾಣೆಯಲ್ಲಿ ಸಂಧಾನವಾದ ಬಳಿಕವೂ ರೇವಣ್ಣ ಪದೇ ಪದೇ ಮಾಮನಿಗೆ (ಹರೀಶ್) ಕರೆ ಮಾಡಿ ಧಮಕಿ ಹಾಕುತ್ತಿದ್ದ. ಆತ ಸುಮ್ಮನಿದ್ದಿದ್ದರೆ ಇಂದು ಎರಡು ಜೀವಗಳು ಉಳಿಯುತ್ತಿದ್ದವು. ದಂಪತಿ ಸಾವಿಗೆ ಕಾರಣನಾದ ರೇವಣ್ಣನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಹರೀಶ್ ಅಕ್ಕನ ಮಗ ಪ್ರತಾಪ್ ಆಗ್ರಹಿಸಿದರು. ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ರೇವಣ್ಣ, ಪತ್ನಿ ಜತೆ ನಗರ ತೊರೆದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 6

  Happy
 • 3

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !