ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳದಾರಿ ಬಳಸಿ ಸ್ಥಾಪಿಸಿದ್ದ ಹೋರ್ಡಿಂಗ್‌ಗಳ ಸಕ್ರಮ?

ಅನುಮಾನ ಮೂಡಿಸಿದೆ ‘ಬಿಬಿಎಂ‍ಪಿ ಜಾಹೀರಾತು ನಿಯಮ 2019’
Last Updated 3 ಆಗಸ್ಟ್ 2021, 22:25 IST
ಅಕ್ಷರ ಗಾತ್ರ

ಬೆಂಗಳೂರು: ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳ್ಳದಾರಿ ಹಿಡಿದು ಸ್ಥಾಪಿಸಿದ್ದ ಹೋರ್ಡಿಂಗ್‌ಗಳ ಮರುಸ್ಥಾಪನೆಗೆರಾಜ್ಯ ಸರ್ಕಾರವು ಇತ್ತೀಚೆಗೆ ಅನುಷ್ಠಾನಗೊಳಿಸಿರುವ ‘ಬಿಬಿಎಂಪಿ ಜಾಹೀರಾತು ನಿಯಮಗಳು 2019’ ಅವಕಾಶ ಮಾಡಿಕೊಡಲಿದೆಯೇ? ಈ ನಿಯಮಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಇಂತಹ ಅನುಮಾನ ಮೂಡುತ್ತದೆ.

ಬಿಬಿಎಂಪಿ ಜಾಹೀರಾತು ನಿಯಮ 6 (7)ರ ಪ್ರಕಾರ, ಲೆಗಸಿ ಜಾಹೀರಾತು ಬಿಲ್‌ಬೋರ್ಡ್‌ಗಳನ್ನೂ ಸೇರಿದಂತೆ ಹೋರ್ಡಿಂಗ್‌ಗಳನ್ನು ನಿಗದಿತ ಶುಲ್ಕ ಕಟ್ಟಿಸಿಕೊಂಡು ಒಮ್ಮೆ ಮಾತ್ರ ಸ್ಥಳಾಂತರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಪರ್ಯಾಯ ಜಾಗವು ಜಾಹೀರಾತು ನಿಯಮಗಳಿಗೆ ಪೂರಕವಾಗಿರಬೇಕು ಎಂಬ ಷರತ್ತು ವಿಧಿಸಲಾಗಿದೆ.

‘ಇಂತಹದ್ದೊಂದು ನಿಯಮದ ಅಗತ್ಯವೇ ಇರಲಿಲ್ಲ. ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಅಂಗೀಕರಿಸಿದ್ದ, ‘ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ -2018’ರಲ್ಲೂ ನಿರ್ದಿಷ್ಟ ಸ್ಥಳದಲ್ಲಿ ಜಾಹೀರಾತು ಅಳವಡಿಸಲು ಪಡೆದ ಪರವಾನಗಿ ಬಳಸಿಕೊಂಡು ಬೇರೆ ಸ್ಥಳದಲ್ಲಿ ಜಾಹೀರಾತು ಅಳವಡಿಸುವುದಕ್ಕೆ ಅವಕಾಶ ಇರಲಿಲ್ಲ. ಈ ಹಿಂದೆ ಕಳ್ಳದಾರಿಯ ಮೂಲಕ ಸ್ಥಾಪಿಸಿದ್ದ ಹೋರ್ಡಿಂಗ್‌ಗಳನ್ನು ಮುಂದುವರಿಸುವುದಕ್ಕೆ ಇದು ಅವಕಾಶ ಕಲ್ಪಿಸಲಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

‘ನಗರದಲ್ಲಿ ಹೋರ್ಡಿಂಗ್‌ಗಳನ್ನು ಎಲ್ಲೆಂದರಲ್ಲಿ ಸ್ಥಾಪಿಸುವುದನ್ನು ತಡೆಯಲು ಹೈಕೋರ್ಟ್‌ ಚಾಟಿ ಬೀಸಿತ್ತು. ಆ ಬಳಿಕವೇ ಬಿಬಿಎಂಪಿ ಜಾಹೀರಾತುಗಳಿಗೆ ಸಂಬಂಧಿಸಿ ನೀತಿ ಹಾಗೂ ಬೈಲಾಗಳನ್ನು ರೂಪಿಸಿತ್ತು. ಆದರೆ, ಈಗ ಸರ್ಕಾರ ರೂಪಿಸಿರುವ ಜಾಹೀರಾತು ನಿಯಮಗಳು ಹೈಕೋರ್ಟ್‌ ಆದೇಶದ ಆಶಯಗಳ ಉಲ್ಲಂಘನೆ’ ಎಂದು ಅವರು ಅಭಿಪ್ರಾಯಪಟ್ಟರು.

ಜಾಹೀರಾತು ನಿಯಮ 6(8)ರ ಪ್ರಕಾರ ಒಂದು ಏಜೆನ್ಸಿಯು ಹೋರ್ಡಿಂಗ್‌/ ಬಿಲ್‌ಬೋರ್ಡ್‌ ಅಳವಡಿಕೆಗೆ ಪಡೆದ ಪರವಾನಗಿಯನ್ನು ಇನ್ನೊಂದು ಏಜೆನ್ಸಿ ಹೆಸರಿಗೆ ವರ್ಗಾಯಿಸಬಹುದು. ಇದಕ್ಕೆ ಹೋರ್ಡಿಂಗ್‌ ಅಳವಡಿಸುವ ಏಜೆನ್ಸಿಯು ಮೂಲದಲ್ಲಿ ಪರವಾನಗಿ ಪಡೆದ ಏಜೆನ್ಸಿಯ ನಿರಾಕ್ಷೇಪಣಾ ಪತ್ರ ಹಾಜರುಪಡಿಸಬೇಕು. ಒಂದು ಬಾರಿ ₹ 10 ಸಾವಿರ ಶುಲ್ಕವನ್ನು ಡಿಮಾಂಡ್‌ ಡ್ರಾಫ್ಟ್‌ ರೂಪದಲ್ಲಿ ಪಾವತಿಸಬೇಕು. ಪರವಾನಗಿಯನ್ನು ಖರೀದಿಸುವ ಏಜೆನ್ಸಿಯು ಈ ವಿಚಾರವನ್ನು ನಮೂನೆ 6 ಎ ಮೂಲಕ ಬಿಬಿಎಂಪಿ ಮುಖ್ಯ ಆಯುಕ್ತರ ಗಮನಕ್ಕೆ ತರಬೇಕು. ಬಿಬಿಎಂಪಿ ಜಾಹೀರಾತು ನಿಯಮಗಳ ಜಾರಿಗಾಗಿ ಹೊರಡಿಸಿದ್ದ ಕರಡು ಅಧಿಸೂಚನೆಯಲ್ಲಿ ಈ ಅಂಶಗಳು ಇರಲಿಲ್ಲ. ಈ ಅಂಶ ಸೇರ್ಪಡೆ ಹಿಂದೆ ಭಾರಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

‘ಈ ಹೊಸ ಅಂಶವನ್ನೇ ಬಳಸಿಕೊಂಡು ಈಗ ಹೋರ್ಡಿಂಗ್‌ ಅಳವಡಿಕೆಗೆ ಹೊಂದಿರುವ ಪರವಾನಗಿಯನ್ನು ಬೇನಾಮಿ ಹೆಸರುಗಳಿಗೆ ವರ್ಗಾಯಿಸುವ ಸಾಧ್ಯತೆ ಇದೆ. ಹೊಸ ಜಾಹೀರಾತು ನಿಯಮಗಳ ಜಾರಿಗೆ ಮೂರು ವರ್ಷಗಳಿಂದ ಹಗ್ಗಜಗ್ಗಾಟ ನಡೆಯುತ್ತಿತ್ತು. ಜಾಹೀರಾತು ಬೈಲಾದಲ್ಲಿ ಇಲ್ಲದ ಈ ಅಂಶವನ್ನು ಕೊನೆಯ ಕ್ಷಣದಲ್ಲಿ ನಿಯಮಗಳಲ್ಲಿ ಸೇರಿಸಲಾಗಿದೆ. ಅಚ್ಚರಿ ಎಂದರೆ ಈ ಬಗ್ಗೆ ಯಾವುದೇ ಜಾಹೀರಾತು ಸಂಸ್ಥೆಯೂ ಮನವಿ ಸಲ್ಲಿಸಿರಲಿಲ್ಲ. ಹೊಸ ನಿಯಮಗಳ ಜಾರಿಯ ಹಿಂದೆ ಅವ್ಯವಹಾರ ನಡೆದಿರುವುದಕ್ಕೆ ಈ ಅಂಶವೇ ಸಾಕ್ಷಿ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನಗರದಲ್ಲಿ ಹೋರ್ಡಿಂಗ್‌ ಅಳವಡಿಸಲು ಅವಕಾಶ ಇಲ್ಲದ ಸಂದರ್ಭದಲ್ಲೂ ಹೆಬ್ಬಾಳ ಮೇಲ್ಸೇತುವೆ ಬಳಿ ಹೋರ್ಡಿಂಗ್‌ ಅಳವಡಿಸಲಾಗಿತ್ತು. ಈ ಮೇಲ್ಸೇತುವೆಯ ನಿರ್ವಹಣೆಯ ಹೊಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಿಬಿಎಂಪಿಗೆ ಹಸ್ತಾಂತರಿಸಿದೆ. ಆದರೂ ಬಿಡಿಎಯಿಂದ ಅನುಮತಿ ನೀಡಲಾಗಿತ್ತು. ಇಂತಹ ಅಕ್ರಮವನ್ನು‘ಬಿಬಿಎಂಪಿ ಜಾಹೀರಾತು ನಿಯಮಗಳು 2019’ರ ಮೂಲಕ ಸಕ್ರಮಗೊಳಿಸುವ ಪ್ರಯತ್ನ ನಡೆದಿದೆ. ನಿಯಮ 16 (3)ರಲ್ಲಿ ಇದಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಏನಿದು ಲೆಗಸಿ ಬಿಲ್‌ಬೋರ್ಡ್‌?

ಖಾಸಗಿ ಸಂಸ್ಥೆಗಳ ಜಮೀನಿನಲ್ಲಿ ನೋಂದಾಯಿತ ಜಾಹೀರಾತು ಸಂಸ್ಥೆಗಳು ಬಿಬಿಎಂಪಿ ಜಾಹೀರಾತು ಬೈಲಾ 2006ರ ಅಡಿ ಪರವಾನಗಿ ಪಡೆದು ಸ್ಥಾಪಿಸಲಾದ ಬಿಲ್‌ಬೋರ್ಡ್‌ಗಳನ್ನು ಲೆಗಸಿ ಬಿಲ್‌ಬೋರ್ಡ್‌ಗಳು ಎಂದು ‘ಬಿಬಿಬಿಂಪಿ ಜಾಹೀರಾತುನಿಯಮಗಳು 2019’ರಲ್ಲಿ ವ್ಯಾಖ್ಯಾನಿಸಲಾಗಿದೆ.

ಲೆಗಸಿ ಜಾಹೀರತುಗಳಿಗೇಕೆ ವಿಶೇಷ ಅವಕಾಶ?

ಹೊಸ ನಿಯಮಗಳ ಪ್ರಕಾರ, ಎಲ್ಲ ಮಾದರಿಯ ಜಾಹೀರಾತುಗಳಿಗೆ ಪರವಾನಗಿಯನ್ನು ಆನ್‌ಲೈನ್ ವ್ಯವಸ್ಥೆಯ ಮೂಲಕವೇ ಪಡೆಯಬೇಕು. ಆದರೆ, ಲೆಗಸಿ ಜಾಹೀರಾತುಗಳಿಗೆ ಮಾತ್ರ ಬಿಬಿಎಂಪಿಯು ಆನ್‌ಲೈನ್‌ ಪರವಾನಗಿ ನೀಡುವ ವ್ಯವಸ್ಥೆ ಜಾರಿಗೊಳಿಸುವವರೆಗೆ ಮ್ಯಾನುವಲ್‌ ಆಗಿಯೂ ಪರವಾನಗಿ ನೀಡಬಹುದು ಎಂಬ ಅಂಶವನ್ನು ಹೊಸ ನಿಯಮಗಳಲ್ಲಿ ಸೇರಿಸಲಾಗಿದೆ. ಆನ್‌ಲೈನ್‌ ಪರವಾನಗಿ ವ್ಯವಸ್ಥೆ ಜಾರಿಯಾಗುವವರೆಗೆ ಲೆಗಸಿ ಜಾಹೀರಾತುಗಳ ಅಳವಡಿಕೆಗೆ ಅವಕಾಶ ಕಲ್ಪಿಸುವ ಹುನ್ನಾರ ಇದು ಎಂಬ ಟೀಕೆ ವ್ಯಕ್ತವಾಗಿದೆ.

ಅನಧಿಕೃತ ಜಾಹೀರಾತು–ಕಣ್ಮುಚ್ಚಿ ಕುಳಿತ ಬಿಬಿಎಂಪಿ

ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಬ್ಯಾನರ್‌ಗಳ ಹಾವಳಿ ತುಸು ಕಡಿಮೆಯಾಗಿತ್ತು. ಬಿಬಿಎಂಪಿ ಅಧಿಕಾರಿಗಳ ನಿಷ್ಕ್ರಿಯತೆಯಿಂದಾಗಿ ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ಹಾವಳಿ ಇತ್ತೀಚೆಗೆ ಮತ್ತೆ ಕಾಣಿಸಿಕೊಂಡಿದೆ.

ರಾಜಕಾರಣಿಗಳ ಹುಟ್ಟುಹಬ್ಬಕ್ಕೆ ಶುಭಕೋರಿ ಫ್ಲೆಕ್ಸ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುವ ಪರಿಪಾಠ ಮತ್ತೆ ಅಲ್ಲಲ್ಲಿ ಆರಂಭವಾಗಿದೆ. ಹಬ್ಬ–ಹರಿದಿನಗಳ ಪ್ರಯುಕ್ತ ಹಾಗೂ ಕಾರ್ಯಕ್ರಮಗಳ ಪ್ರಯುಕ್ತ ಕೆಲವು ಸಂಘ–ಸಂಸ್ಥೆಗಳು ಬ್ಯಾನರ್ಅಳವಡಿಸುತ್ತಿವೆ. ಆದರೆ, ಕಾರ್ಯಕ್ರಮಗಳು ಮುಗಿದ ಬಳಿಕವೂ ಇವುಗಳನ್ನು ತೆರವುಗೊಳಿಸುವ ಗೋಜಿಗೇ ಹೋಗುತ್ತಿಲ್ಲ. ಬಿಬಿಎಂ‍ಪಿ ಪರವಾನಗಿ ಪಡೆಯದೆ ಅಳವಡಿಸುವ ಬ್ಯಾನರ್‌ಗಳನ್ನು ತೆರವುಗೊಳಿಸಲು ಹಾಗೂ ಅಕ್ರಮವಾಗಿ ಜಾಹೀರಾತುಗಳನ್ನು ಅಳವಡಿಸಿದವರಗೆ ದಂಡ ವಿಧಿಸಲು ಪಾಲಿಕೆ ಅಧಿಕಾರಿಗಳೂ ಕ್ರಮ ಕೈಗೊಳ್ಳುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT