ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜುಲೈ 8ರಿಂದ ಕಾಮಗಾರಿ ಸ್ಥಗಿತ: ಬಿಬಿಎಂಪಿ ಗುತ್ತಿಗೆದಾರರ ಸಂಘ

Published 2 ಜುಲೈ 2024, 19:51 IST
Last Updated 2 ಜುಲೈ 2024, 19:51 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಗುತ್ತಿಗೆದಾರರ ಬೇಡಿಕೆಗಳನ್ನು ಈಡೇರಿಸದಿರುವುದರಿಂದ ಜುಲೈ 8ರಿಂದ ನಗರದಾದ್ಯಂತ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘ ತಿಳಿಸಿದೆ.

‘ಗುತ್ತಿಗೆದಾರರ ಒಂಬತ್ತು ಬೇಡಿಕೆಗಳನ್ನು ಈಡೇರಿಸುವಂತೆ ಎರಡು ತಿಂಗಳಿಂದ ಐದಾರು ಬಾರಿ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ನಡೆದ ಸಭೆಯಲ್ಲೂ ಬೇಡಿಕೆ ಈಡೇರಿಸಲು ಸೂಚಿಸಲಾಗಿತ್ತು. ಆದರೂ ಮುಖ್ಯ ಆಯುಕ್ತರು ಗುತ್ತಿಗೆದಾರರನ್ನು ಕಡೆಗಣಿಸಿದ್ದಾರೆ. ಬೇಡಿಕೆಗಳನ್ನು ಈಡೇರಿಸಿಲ್ಲ. ಹೀಗಾಗಿ, ಸೋಮವಾರದಿಂದ ಎಲ್ಲ ರೀತಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಂಗಳವಾರ ನಿರ್ಧರಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್ ತಿಳಿಸಿದರು.

‘ವಾರ್ಡ್‌ ಕಾಮಗಾರಿ, ಮಳೆನೀರುಗಾಲುವೆ, ರಸ್ತೆಗಳು, ವೈಟ್‌ ಟಾಪಿಂಗ್‌, ಕೆರೆ, ಯೋಜನೆ, ತೋಟಗಾರಿಕೆ ವಿಭಾಗ ಸೇರಿದಂತೆ ಎಲ್ಲ ರೀತಿಯ ಕಾಮಗಾರಿಗಳನ್ನೂ ಸ್ಥಗಿತಗೊಳಿಸಲು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಮ್ಮತಿಸಿದ್ದಾರೆ’ ಎಂದು ಹೇಳಿದರು.

ಬೇಡಿಕೆಗಳೇನು?: ಗುತ್ತಿಗೆದಾರರಿಗೆ ಕಾಮಗಾರಿಗಳ ಬಿಲ್ಲುಗಳನ್ನು ಪಾವತಿ ಮಾಡುವ ಸಮಯದಲ್ಲಿ ತಡೆಹಿಡಿದಿರುವ ಶೇ 25 ಬಾಕಿ ಹಣ ಬಿಡುಗಡೆ ಮಾಡಬೇಕು. 24 ತಿಂಗಳಿಂದ ಕೈಗೊಂಡ ಕಾಮಗಾರಿಗಳಿಗೆ ಸುಮಾರು ₹1,600 ಕೋಟಿ ಪಾವತಿಸಬೇಕಾಗಿದ್ದು, ಅದರಲ್ಲಿ ಕನಿಷ್ಠ 12 ತಿಂಗಳ ಎಲ್‌ಒಸಿ ಬಿಡುಗಡೆ ಮಾಡಬೇಕು. ಗುತ್ತಿಗೆದಾರರಿಗೆ ಬಿಲ್ ಸಲ್ಲಿಸಲು ಸರಳ ಮಾದರಿ ಹಾಗೂ ಟಿವಿಸಿಸಿ ರ‍್ಯಾಂಡಮೈಸೇಷನ್‌ ತನಿಖೆ ಕೈಬಿಡಬೇಕು. ಕೇಂದ್ರ ಕಚೇರಿಯ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಿಂದ ಬಿಲ್‌ ಪಾವತಿಸಬೇಕು.. ಕಟ್ಟಡ ಕಾಮಗಾರಿಗಳ ಬಿಲ್‌ಗಳನ್ನು ‘ಎಸೆನ್ಷಿಯಲ್‌’ ಎಂದು ಪರಿಗಣಿಸಿ ತ್ವರಿತವಾಗಿ ಪಾವತಿಸಬೇಕು. ಹಿಂದಿನ ಪದ್ಧತಿಯಂತೆ ಟೆಂಡರ್ ಪ್ರೀಮಿಯಂ ಅಧಿಕಾರವನ್ನು ಮುಖ್ಯ ಎಂಜಿನಿಯರ್‌ಗೆ ನೀಡಬೇಕು. ಕೆಆರ್‌ಐಡಿಎಲ್‌ ಸಂಸ್ಥೆಯ ಬಾಕಿ ಬಿಲ್ಲುಗಳನ್ನು ಪಾವತಿಸಬೇಕು ಎಂಬ ಬೇಡಿಕೆಗಳನ್ನು ಗುತ್ತಿಗೆದಾರರ ಸಂಘ ಮುಂದಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT