ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಹಂಕ: ವಾಹನಗಳ ದಟ್ಟಣೆಗೆ ಹೈರಾಣ

ಪ್ರಮುಖ ವೃತ್ತಗಳಲ್ಲಿ ಪ್ರತಿನಿತ್ಯ ರಸ್ತೆ ದಾಟಲು ಆತಂಕಕಾರಿ ಸ್ಥಿತಿ
Last Updated 2 ಜುಲೈ 2019, 20:30 IST
ಅಕ್ಷರ ಗಾತ್ರ

ಯಲಹಂಕ: ಇಲ್ಲಿನ ಸಂತೆವೃತ್ತ ಸೇರಿದಂತೆ ಹಲವು ಪ್ರಮುಖ ವೃತ್ತಗಳಲ್ಲಿ ಉಂಟಾಗುತ್ತಿರುವ ಸಂಚಾರದ ಒತ್ತಡದಿಂದ ಸಾರ್ವಜನಿಕರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಕೋಗಿಲು ವೃತ್ತ, ಪೊಲೀಸ್‌ ಠಾಣೆ ವೃತ್ತ, ರೈತರಸಂತೆ ಮುಂಭಾಗದ ರಸ್ತೆ ಹಾಗೂ ಸೇತುವೆ ಬಳಿ ಪ್ರತಿನಿತ್ಯ ಉಂಟಾಗುವ ಸಂಚಾರದ ದಟ್ಟಣೆಯಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಹೈರಾಣಾಗಿದ್ದಾರೆ. ಈ ಸ್ಥಳಗಳಲ್ಲಿ ಬಸ್ ನಿಲ್ದಾಣಗಳೂ ಇರುವುದರಿಂದ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಹಾಗೂ ನೌಕರರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಆತಂಕದಿಂದ ರಸ್ತೆ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಬಗೆಹರಿಸಬೇಕೆಂದು ಸಂಚಾರ ಪೊಲೀಸರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ದೂರು.

ಸಂಚಾರದ ದಟ್ಟಣೆ ಹೆಚ್ಚಾಗಿರುವ ವೇಳೆಯಲ್ಲಿ ಸಿಗ್ನಲ್‌ಗಳ ಬಳಿ ಒಂದೆರಡು ಗಂಟೆಗಳು ಕಾರ್ಯನಿರ್ವಹಿಸುವ ಪೊಲೀಸರು ನಂತರ ಕಾಣುವುದಿಲ್ಲ. ಇದರಿಂದ ವಾಹನ ಸವಾರರು ಸಂಚಾರದ ನಿಯಮಗಳನ್ನು ಉಲ್ಲಂಘಿ
ಸುವ ಮೂಲಕ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಚಲಾಯಿಸುವುದರಿಂದ ಅಪಘಾತಗಳೂ ನಡೆಯುತ್ತಿವೆ ಎಂದು ಯಲಹಂಕ ನಿವಾಸಿ ಗೋವಿಂದರಾಜ್ ತಿಳಿಸಿದರು.

ಆಸ್ಪತ್ರೆ ರಸ್ತೆ, ಬಿ.ಬಿ ರಸ್ತೆ ಮತ್ತಿತರ ಕಡೆಗಳಲ್ಲಿ ಸಮರ್ಪಕವಾದ ಪಾದಚಾರಿ ಮಾರ್ಗವಿಲ್ಲದೆ ಜನರು ಇಕ್ಕಟ್ಟಾದ ರಸ್ತೆಗಳಲ್ಲೇ ಸಾಗಬೇಕಿದೆ. ಪೊಲೀಸರು ಸರಿಯಾಗಿ ಸಂಚಾರ ವ್ಯವಸ್ಥೆ ನಿರ್ವಹಿಸದೆ, ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸುವ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ. ಇದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಮಂದಗತಿಯಲ್ಲಿ ಸಾಗುವುದರಿಂದ ಒಂದೊಂದು ಸಿಗ್ನಲ್ ಬಳಿ ಐದಾರು ನಿಮಿಷ ಕಾಯಬೇಕಿದೆ ಎಂದು ಅವರು ದೂರಿದರು.

ಯಲಹಂಕ-ಜಕ್ಕೂರು ಮುಖ್ಯರಸ್ತೆಯ ರೈತರಸಂತೆ ಬಳಿ ರಸ್ತೆಯಲ್ಲೇ ವಾಹನಗಳಿಂದ ತರಕಾರಿ ವಿಲೇವಾರಿ ಮಾಡುವುದರ ಜೊತೆಗೆ ಮಾರಾಟಗಾರರ ತಳ್ಳುಗಾಡಿಗಳು ಮತ್ತು ಗ್ರಾಹಕರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ದಟ್ಟಣೆ ಉಂಟಾಗುತ್ತಿದೆ. ಸಂತೆಯಿಂದ ಯಲಹಂಕದ ಕಡೆಗೆ ಸಂಚರಿಸುವ ಮಾರ್ಗದಲ್ಲಿ ಸೇತುವೆ ಬಳಿ ಕಿರಿದಾದ ರಸ್ತೆಯಲ್ಲಿ ಎಲ್ಲ ಕಡೆಗಳಿಂದಲೂ ವಾಹನಗಳು ಸಂಧಿಸುತ್ತವೆ. ಇದರ ಜೊತೆಗೆ ಬಿಎಂಟಿಸಿ ಬಸ್‌ಗಳೂ ಸೇತುವೆ ಕೆಳಗೆ ತಿರುವು ಪಡೆಯುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಿದೆ ಎಂದು ದ್ವಿಚಕ್ರ ವಾಹನ ಸವಾರ ಸಯ್ಯದ್‌ ತಿಳಿಸಿದರು.

ಯಲಹಂಕ ಹಳೇನಗರದ ಬಸ್‌ ನಿಲ್ದಾಣದಿಂದ ಹೊರಡುವ ಬಿಎಂಟಿಸಿ ಬಸ್‌ಗಳನ್ನು ಸಂತೆವೃತ್ತದ ಸಿಗ್ನಲ್ ಬಳಿ ನಿಲ್ಲಿಸುವುದರಿಂದ ಪ್ರಯಾಣಿಕರು ಸಾಲುಗಟ್ಟಿ ನಿಲ್ಲುತ್ತಾರೆ. ಇದು ಸಂಚಾರದಟ್ಟಣೆಗೆ ಪ್ರಮುಖ ಕಾರಣವಾಗಿದ್ದು, ಈ ಬಗ್ಗೆ ಬಿಎಂಟಿಸಿ ಡಿಪೊ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿದೆ. ಪಾದಚಾರಿ ಮಾರ್ಗದಲ್ಲಿದ್ದ ವರ್ತಕರನ್ನು ಎತ್ತಂಗಡಿ ಮಾಡಲಾಗಿದೆ. ಹೆಲ್ಮೆಟ್‌ ರಹಿತ, ತ್ರಿಬಲ್ ರೈಡಿಂಗ್ ಹಾಗೂ ವೀಲಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರ ಮೇಲೆ ಹಲವಾರು ದೂರುಗಳನ್ನು ದಾಖಲಿಸಲಾಗಿದೆ ಎಂದು ಯಲಹಂಕ ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್‌ ಮೆಹಬೂಬ್ ಬಾದ್ಶ ಗೊರವನಹಳ್ಳಿ ತಿಳಿಸಿದರು.

7ರಂದು ಪ್ರಜಾವಾಣಿ ‘ಜನಸ್ಪಂದನ’

ನೀವು ಯಲಹಂಕ ಕ್ಷೇತ್ರದ ನಿವಾಸಿಗಳೇ, ನಿಮ್ಮ ಬಡಾವಣೆಯಲ್ಲಿ ಬೀದಿ ದೀಪಗಳು ಬೆಳಗುವುದಿಲ್ಲವೆ? ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲವೆ? ನೀರು ಪೂರೈಕೆ ಅಸಮರ್ಪಕವಾಗಿದೆಯೆ?

ಹಾಗಾದರೆ, ಜುಲೈ 7ರಂದು ಬೆಳಿಗ್ಗೆ ಯಲಹಂಕ ಉಪನಗರದ ಬಿಬಿಎಂಪಿ ಕಚೇರಿಯ ಆವರಣಕ್ಕೆ ಬನ್ನಿ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ಜನಸ್ಪಂದನ ಕಾರ್ಯಕ್ರಮ (ಸಿಟಿಜನ್‌ ಫಾರ್‌ ಚೇಂಜ್‌) ನಡೆಯಲಿದೆ. ನಿಮ್ಮ ದೂರುಗಳನ್ನು ನೇರವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹೇಳಿಕೊಂಡು ಸ್ಥಳದಲ್ಲೇ ಪರಿಹಾರ ಪಡೆಯಬಹುದು.

ಕ್ಷೇತ್ರದ ಶಾಸಕ ಎಸ್‌.ಆರ್‌.ವಿಶ್ವನಾಥ್‌, ವಾರ್ಡ್‌ಗಳ ಪಾಲಿಕೆ ಸದಸ್ಯರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಬೆಸ್ಕಾಂ, ಜಲಮಂಡಳಿ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕ್ಷೇತ್ರದ ಕುಂದುಕೊರತೆಗಳ ಬಗ್ಗೆ ಗಮನ ಸೆಳೆದು ಸ್ಥಳದಲ್ಲೇ ಪರಿಹಾರ ಪಡೆಯಲು ಸ್ಥಳೀಯರು ಈ ಅವಕಾಶ ಬಳಸಿಕೊಳ್ಳಬಹುದು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜುಲೈ 7ರಂದು ಬೆಳಿಗ್ಗೆ 9ರಿಂದ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು.ಕುಂದು ಕೊರತೆಗಳನ್ನು ಮುಂಚಿತವಾಗಿ janaspandana@printersmysore.co.inಗೆ ಇ–ಮೇಲ್‌ ಕೂಡ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT