ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಕೆಲಸದಿಂದ ತೆಗೆಸಿದ್ದಕ್ಕೆ ಸಹೋದ್ಯೋಗಿ ಹತ್ಯೆ!

Published 18 ಮೇ 2024, 15:54 IST
Last Updated 18 ಮೇ 2024, 15:54 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ನ್ಯೂ ಟೌನ್ ಬಳಿಯ ಡೇರಿ ವೃತ್ತದಲ್ಲಿ ನಡೆದಿದ್ದ ಗಜೇಂದ್ರ ಸೌದ್ (32) ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಕೃತ್ಯ ಎಸಗಿರುವ ಆರೋಪಿ ಸಂತೋಷ್ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದಾರೆ.

‘ನೇಪಾಳದ ಗಜೇಂದ್ರ, ಚಿಕ್ಕಬೊಮ್ಮಸಂದ್ರ ಬಳಿಯ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಹೋಟೆಲ್‌ನಲ್ಲಿ ಸಂತೋಷ್ ಕೆಲಸಕ್ಕಿದ್ದ. ಆತನೇ ಗಜೇಂದ್ರ ಅವರನ್ನು ಶುಕ್ರವಾರ ರಾತ್ರಿ ಕೊಲೆ ಮಾಡಿ ಪರಾರಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಡೇರಿ ವೃತ್ತದಲ್ಲಿ ಮೃತದೇಹವಿದ್ದ ಬಗ್ಗೆ ಸ್ಥಳೀಯರು ಶುಕ್ರವಾರ ರಾತ್ರಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ, ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ. ಮೃತದೇಹದ ಫೋಟೊ ಆಧರಿಸಿ ತನಿಖೆ ಮುಂದುವರಿಸಲಾಗಿತ್ತು. ಗಜೇಂದ್ರ ಅವರ ಪತ್ನಿ ಶನಿವಾರ ಠಾಣೆಗೆ ಬಂದು, ‘ಸಂತೋಷ್ ಎಂಬಾತನೇ ಕೊಲೆ ಮಾಡಿದ್ದಾನೆ’ ಎಂಬುದಾಗಿ ದೂರು ನೀಡಿದ್ದಾರೆ’ ಎಂದು ತಿಳಿಸಿದರು.

‘ಗಜೇಂದ್ರ ಹಾಗೂ ಸಂತೋಷ್, ಒಂದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಚೆನ್ನಾಗಿ ಕೆಲಸ ಮಾಡುತ್ತಿದ್ದ ಗಜೇಂದ್ರ ಮಾಲೀಕರ ಮೆಚ್ಚುಗೆ ಗಳಿಸಿದ್ದರು. ಕ್ಷುಲ್ಲಕ ಕಾರಣಕ್ಕಾಗಿ ಆರೋಪಿ ಸಂತೋಷ್, ಗಜೇಂದ್ರ ಜೊತೆ ಪದೇ ಪದೇ ಜಗಳ ಮಾಡುತ್ತಿದ್ದ. ಹಲ್ಲೆಗೂ ಯತ್ನಿಸಿದ್ದ. ಆರೋಪಿ ವರ್ತನೆ ಮಿತಿಮೀರಿದಾಗ ಮಾಲೀಕರು, ಆತನನ್ನು ಕೆಲಸದಿಂದ ತೆಗೆದಿದ್ದರು’.

‘ಗಜೇಂದ್ರ ಅವರಿಂದಲೇ ಕೆಲಸ ಹೋಯಿತೆಂದು ತಿಳಿದಿದ್ದ ಸಂತೋಷ್, ಕೊಲೆ ಮಾಡಲು ಸಂಚು ರೂಪಿಸಿದ್ದ. ಗಜೇಂದ್ರ ಅವರ ಮನೆಗೆ ಹೋಗಿದ್ದ ಆರೋಪಿ, ಅವರನ್ನು ಕರೆದುಕೊಂಡು ಬಾರ್‌ಗೆ ತೆರಳಿದ್ದ. ಇಬ್ಬರು ಸೇರಿ ಮದ್ಯ ಕುಡಿದಿದ್ದರು. ನಂತರ, ಅವರಿಬ್ಬರು ಬಾರ್‌ನಿಂದ ಹೊರಗೆ ಬಂದಿದ್ದರು. ಜಗಳ ತೆಗೆದಿದ್ದ ಸಂತೋಷ್, ಗಜೇಂದ್ರ ಮೇಲೆ ಹಲ್ಲೆ ಮಾಡಿ ತಳ್ಳಿದ್ದ. ನಂತರ, ತಲೆ ಮೇಲೆ ಹಾಲೋಬ್ರಿಕ್ಸ್‌ ಎತ್ತಿ ಹಾಕಿದ್ದ. ತೀವ್ರ ಗಾಯಗೊಂಡು ಗಜೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದರು. ನಂತರ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT