ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯದ ಅವಧಿಯಲ್ಲಿ ಕ್ರಿಕೆಟ್‌: ತಪ್ಪೊಪ್ಪಿಕೊಂಡ ಅಧಿಕಾರಿಗಳು, ನೌಕರರು

Published 23 ಜನವರಿ 2024, 22:12 IST
Last Updated 23 ಜನವರಿ 2024, 22:12 IST
ಅಕ್ಷರ ಗಾತ್ರ

ಬೆಂಗಳೂರು: ಕರ್ತವ್ಯದ ಅವಧಿಯಲ್ಲಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದ ಯಲಹಂಕ ತಾಲ್ಲೂಕು ಕಚೇರಿಯ 38 ಅಧಿಕಾರಿಗಳು, ಸಿಬ್ಬಂದಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಎದುರು ತಪ್ಪೊಪ್ಪಿಕೊಂಡಿದ್ದಾರೆ.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂಬತ್ತು ತಾಲ್ಲೂಕು ಕಚೇರಿಗಳಲ್ಲಿ ಲೋಕಾಯುಕ್ತದ ಪೊಲೀಸ್‌ ಹಾಗೂ ನ್ಯಾಯಾಂಗ ವಿಭಾಗಗಳ ಅಧಿಕಾರಿಗಳು ಶನಿವಾರ ದಿಢೀರ್‌ ತಪಾಸಣೆ ನಡೆಸಿದ್ದರು. ಯಲಹಂಕ ತಾಲ್ಲೂಕು ಕಚೇರಿಯ 54 ಅಧಿಕಾರಿಗಳು, ಸಿಬ್ಬಂದಿ ಪೈಕಿ 38 ಮಂದಿ ಕಚೇರಿಯಲ್ಲಿರಲಿಲ್ಲ.

ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಲು ಅನುಮತಿ ಕೋರಿ 38 ಜನರು ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿರುವ ಪಟ್ಟಿ ತನಿಖಾ ತಂಡಕ್ಕೆ ಸಿಕ್ಕಿತ್ತು. ಈ ಆಧಾರದಲ್ಲಿ ಸೋಮವಾರ ಲೋಕಾಯುಕ್ತರ ಎದುರು ವಿಚಾರಣೆಗೆ ಹಾಜರಾಗುವಂತೆ ಎಲ್ಲರಿಗೂ ಸೂಚಿಸಲಾಗಿತ್ತು.

‘ಕೆಲಸದ ಅವಧಿಯಲ್ಲಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಲು ತಹಶೀಲ್ದಾರ್‌ ಒಪ್ಪಿಗೆ ನೀಡಿದ್ದರು ಎಂಬುದಾಗಿ 38 ಮಂದಿ ಹೇಳಿದರು. ಆದರೆ, ತಹಶೀಲ್ದಾರ್‌ ಅದನ್ನು ನಿರಾಕರಿಸಿದರು. ಬಳಿಕ 38 ಮಂದಿಯೂ ತಪ್ಪೊಪ್ಪಿಕೊಂಡರು’ ಎಂದು ಲೋಕಾಯುಕ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

ವರದಿ ಸಲ್ಲಿಸಲು ಸೂಚನೆ: ಈ 38 ಅಧಿಕಾರಿಗಳು, ನೌಕರರು ಎರಡು ತಿಂಗಳ ಅವಧಿಯಲ್ಲಿ ವಿಲೇವಾರಿ ಮಾಡಿರುವ ಕಡತಗಳು, ಅರ್ಜಿಗಳು, ಸ್ಥಳ ತಪಾಸಣೆ ಸೇರಿದಂತೆ ಅವರ ಕೆಲಸದ ಕುರಿತು ವರದಿ ಸಲ್ಲಿಸುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ. ಕಡತಗಳನ್ನು ಬಾಕಿ ಇರಿಸಿಕೊಂಡಿರುವ ಕುರಿತೂ ಸಂಬಂಧಿಸಿದ ಅಧಿಕಾರಿ, ನೌಕರರು ವಿವರಣೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.

ತಹಶೀಲ್ದಾರ್‌ಗೆ ಎಚ್ಚರಿಕೆ

ಲೋಕಾಯಕ್ತದ ಅಧಿಕಾರಿಗಳ ತಂಡ ದಿಢೀರ್‌ ತಪಾಸಣೆ ನಡೆಸಿದಾಗ ಕಚೇರಿಯಿಂದ ದೂರವಿದ್ದ ಬೆಂಗಳೂರು ಉತ್ತರ ತಾಲ್ಲೂಕಿನ ತಹಶೀಲ್ದಾರ್‌ ವಿಜಯಕುಮಾರ್‌ ಕೂಡ ಸೋಮವಾರ ವಿಚಾರಣೆಗೆ ಹಾಜರಾಗಿದ್ದರು.

‘ಹೈಕೋರ್ಟ್‌ ಪ್ರಕರಣವೊಂದರ ಸಂಬಂಧ ಚರ್ಚಿಸಲು ವಕೀಲರ ಬಳಿ ಇದ್ದ ಕಾರಣ ದೂರವಾಣಿ ಕರೆ ಸ್ವೀಕರಿಸಿಲ್ಲ ಎಂದು ತಹಶೀಲ್ದಾರ್‌ ಸಮಜಾಯಿಷಿ ನೀಡಿದರು. ಎರಡು ತಿಂಗಳ ಅವಧಿಯ ಕೆಲಸಗಳ ಕುರಿತು ವರದಿ ಸಲ್ಲಿಸುವಂತೆ ಅವರಿಗೂ ಸೂಚಿಸಿದ್ದೇನೆ’ ಎಂದು ಲೋಕಾಯುಕ್ತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT