ಶುಕ್ರವಾರ, ಅಕ್ಟೋಬರ್ 30, 2020
19 °C
ಮಾಹಿತಿ ನೀಡದೆ ಜವಾಬ್ದಾರಿ ಹಸ್ತಾಂತರ: ಸದಸ್ಯರ ಆಕ್ಷೇಪ

ಜಿ.ಪಂ: ನರಸಿಂಹಮೂರ್ತಿ ಪ್ರಭಾರ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಂಗೇರಿ: ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷರಾಗಿ ತಾವರೆಕೆರೆ ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಜಿ.ನರಸಿಂಹಮೂರ್ತಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ಪ್ರಭಾರ ಅಧ್ಯಕ್ಷರಾಗಿ ನರಸಿಂಹಮೂರ್ತಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಈ ಬಗ್ಗೆ ನಮಗೆ ಮಾಹಿತಿಯೇ ಇರಲಿಲ್ಲ. ನಾನು ಅಧ್ಯಕ್ಷನಾಗಿದ್ದೇನೆ ಎಂದು ನರಸಿಂಹಮೂರ್ತಿಯವರು ಕರೆ ಮಾಡಿದ ನಂತರವೇ ನಮಗೆ ಗೊತ್ತಾಗಿದ್ದು. ಅಧಿಕಾರಿಗಳು ಕೂಡ ಈ ಕುರಿತು ಮಾಹಿತಿ ನೀಡಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಪ್ಪ ‘ಪ್ರಜಾವಾಣಿ’ಗೆ ಹೇಳಿದರು. 

‘ಜಿ. ಮರಿಸ್ವಾಮಿಯವರು ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿಯೇ ಈ ಬಗ್ಗೆ ಮಾತುಕತೆ ಆಗಿತ್ತು. ನರಸಿಂಹಮೂರ್ತಿಯವರಿಗೆ ಒಂದೆರಡು ತಿಂಗಳು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಅದರಂತೆ, ಈಗ ಈ ಜವಾಬ್ದಾರಿ ನೀಡಿರಬಹುದು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸದಸ್ಯರೊಬ್ಬರು ಹೇಳಿದರು. 

‘ಮರಿಸ್ವಾಮಿಯವರು ವೈಯಕ್ತಿಕ ಕೆಲಸಗಳಿರುವುದರಿಂದ ಬಿಡುವು ಬೇಕು ಎಂದು ಹೇಳಿದ್ದರು. ಅನಾರೋಗ್ಯದ ಕಾರಣ ವಿಶ್ರಾಂತಿ ಬೇಕು ಎಂದು ಉಪಾಧ್ಯಕ್ಷರಾದ ಪಾರ್ವತಿ ಚಂದ್ರಪ್ಪ ಅವರೂ ಪತ್ರ ನೀಡಿದ್ದಾರೆ. ಹುದ್ದೆ ಖಾಲಿ ಇರಬಾರದು ಎಂಬ ಕಾರಣಕ್ಕೆ ಟಿ.ಜಿ. ನರಸಿಂಹಮೂರ್ತಿ ಅವರನ್ನು ಪ್ರಭಾರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷರ ಅನುಪಸ್ಥಿತಿಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರು ಈ ಜವಾಬ್ದಾರಿ ನಿರ್ವಹಿಸಬಹುದು ಎಂದು ನಿಯಮದಲ್ಲಿದೆ’ ಎಂಬುದಾಗಿ ಜಿಲ್ಲಾ ಪಂಚಾಯಿತಿ ಸಿಇಒ ಶಿವರಾಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಅ.27, 28ಕ್ಕೆ ಮಗನ ಆರತಕ್ಷತೆ ಇರುವ ಕಾರಣ ಬಿಡುವು ತೆಗೆದುಕೊಂಡಿದ್ದೇನೆ. ನ.3ರಂದು ನನ್ನ ನೇತೃತ್ವದಲ್ಲಿಯೇ ಸಾಮಾನ್ಯ ಸಭೆ ನಡೆಯಲಿದೆ. ಉಪಾಧ್ಯಕ್ಷರಿಗೆ ಅನಾರೋಗ್ಯ ಇರುವ ಕಾರಣ, ನರಸಿಂಹಮೂರ್ತಿಯವರಿಗೆ ಜವಾಬ್ದಾರಿ ವಹಿಸಲಾಗಿದೆ’ ಎಂದು ಜಿ.ಮರಿಸ್ವಾಮಿ ಹೇಳಿದರು. 

‘ಆರತಕ್ಷತೆ ಇದೆ, ಅನಾರೋಗ್ಯ ಇದೆ ಎಂದು ಎಲ್ಲ ಸದಸ್ಯರಿಗೆ ಹೇಳಲು ಆಗದು. ಅಧ್ಯಕ್ಷ, ಉಪಾಧ್ಯಕ್ಷರು ಸಿಇಒ ಅವರಿಗೆ ಈ ಪತ್ರ ನೀಡಿದ್ದಾರೆ. ನಿಯಮದಂತೆ ನನ್ನನ್ನು ಪ್ರಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಒಂದೆರಡು ತಿಂಗಳು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ’ ಎಂದು ನರಸಿಂಹಮೂರ್ತಿ ತಿಳಿಸಿದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.