ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣವೇ ಇಲ್ಲ

Last Updated 5 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ಸಂಖ್ಯೆ ಕೇವಲ ಒಂದೆರೆಡಲ್ಲ. ಶೇ 95ರಷ್ಟು ಕಟ್ಟಡಗಳನ್ನು ಒಂದಲ್ಲಾ ಒಂದು ರೀತಿ ನಿಯಮ ಉಲ್ಲಂಘಿಸಿಯೇ ನಿರ್ಮಿಸಲಾಗಿದೆ. ಇಂತಹ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವುದು ಬಿಬಿಎಂಪಿಗೂ ಸವಾಲಿನ ಕೆಲಸ. ಇದನ್ನು ಪಾಲಿಕೆ ಎಂಜಿನಿಯರ್‌ಗಳು ಹಾಗೂ ಜನಪ್ರತಿನಿಧಿಗಳು ಕೂಡ ಒಪ್ಪುತ್ತಾರೆ. ಪರಿಣಾಮ, ಅನೇಕ ಪ್ರಕರಣಗಳಲ್ಲಿ ಕ್ರಮ ಜರುಗಿಸುವ ಬದಲು ಪಾಲಿಕೆ ಎಂಜಿನಿಯರ್‌ಗಳೂ ಕೈಕಟ್ಟಿ ಕೂತಿದ್ದಾರೆ.

ಈ ರೀತಿ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ಬೃಹತ್ ಕಟ್ಟಡಗಳಿಂದ ಹಿಡಿದು 30/40 ಚದರ ಅಡಿ ವಿಸ್ತೀರ್ಣದ ಕಟ್ಟಡಗಳೂ ಇವೆ. ಆದರೆ, ನಿಯಮ ಉಲ್ಲಂಘಿಸಿದ ನಿರ್ದಿಷ್ಟ ಪ್ರಕರಣಗಳ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದ ನಂತರವೂ ಕ್ರಮ ಕೈಗೊಳ್ಳದೆ ತಮ್ಮ ಕರ್ತವ್ಯ ಪಾಲನೆಯಲ್ಲಿ ಲೋಪವೆಸಗಿರುವ ಪಾಲಿಕೆ ಎಂಜಿನಿಯರ್‌ಗಳ ಸಂಖ್ಯೆಯೂ ಕಡಿಮೆಯೇನಿಲ್ಲ.

ಇಂತಹ ಪ್ರಕರಣಗಳಲ್ಲಿ ಕರ್ತವ್ಯಲೋಪವೆಸಗಿದ ಎಂಜಿನಿಯರ್‌ಗಳ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಸಮರ ಸಾರಿದೆ. ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ಒಟ್ಟು 149 ಪ್ರಕರಣಗಳಲ್ಲಿ ಬಿಎಂಟಿಎಫ್ ಪ್ರಕರಣ ದಾಖಲಿಸಿಕೊಂಡಿದೆ. ಈ ಪೈಕಿ 15 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.

ಸಾರ್ವಜನಿಕರ ದೂರಿನ ಮೇರೆಗೆ ಕ್ರಮ ಕೈಗೊಳ್ಳದ ಪಾಲಿಕೆ ಎಂಜಿನಿಯರ್‌ಗಳ ವಿರುದ್ಧ ಬಿಎಂಟಿಎಫ್ ಮೊಕದ್ದಮೆ ದಾಖಲಿಸಿದ ಹಿನ್ನೆಲೆಯಲ್ಲಿ ಕಳೆದ ತಿಂಗಳಷ್ಟೇ ಪಾಲಿಕೆ ಅಧಿಕಾರಿಗಳು, ನೌಕರರು ಮುಷ್ಕರ ನಡೆಸಿ, ಬಿಎಂಟಿಎಫ್ ಮುಖ್ಯಸ್ಥರ ವರ್ಗಾವಣೆಗೆ ಒತ್ತಾಯಿಸಿದ್ದರು.

ಕೊನೆಗೆ ಪಾಲಿಕೆ ನೌಕರರ ಪ್ರತಿಭಟನೆಗೆ ಮಣಿದ ಸರ್ಕಾರ ಬಿಎಂಟಿಎಫ್ ಮುಖ್ಯಸ್ಥ ಡಾ.ಆರ್.ಪಿ. ಶರ್ಮಾರನ್ನು ವರ್ಗಾವಣೆ ಮಾಡಿತು. ಸರ್ಕಾರದ ಕ್ರಮವನ್ನು ಕೇಂದ್ರ ಆಡಳಿತ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿದ ಶರ್ಮಾ, ವರ್ಗಾವಣೆಗೆ ತಾತ್ಕಾಲಿಕ ತಡೆ ತಂದರು. ಇದರಿಂದ ಸರ್ಕಾರಕ್ಕೂ ಮುಖಭಂಗ ಉಂಟಾಯಿತು.

ಬಿಎಂಟಿಎಫ್‌ಗೆ ನೀಡಿರುವ ಅಧಿಕಾರವನ್ನು ವಾಪಸು ಪಡೆದು ಪಾಲಿಕೆ ಆಯುಕ್ತರ ಉಸ್ತುವಾರಿಯಲ್ಲಿ ಕಾರ್ಯಪಡೆ ಕಾರ್ಯಾಚರಣೆ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಪಾಲಿಕೆ ನೌಕರರ ಒತ್ತಾಯ. ಆದರೆ, ಈ ಬಗ್ಗೆ ಸರ್ಕಾರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಬೇಕಾಗಿದೆ. ಬಿಎಂಟಿಎಫ್‌ಗೆ ಅಧಿಕಾರ ಹಂಚಿಕೆ ಮಾಡಿದ ತನ್ನ ಲೋಪವೂ ಇದೆ ಎಂಬುದನ್ನು ಒಪ್ಪಿಕೊಂಡಿರುವ ಸರ್ಕಾರ, ಮೌನಕ್ಕೆ ಶರಣಾಗಿದೆ.

ಉಲ್ಲಂಘನೆ: ಕೆಎಂಸಿ ಕಾಯ್ದೆ ಪ್ರಕಾರ, ಶೇ 5ರಷ್ಟು ಪ್ರಮಾಣದಲ್ಲಿ ನಕ್ಷೆ ಮಂಜೂರಾತಿ ಉಲ್ಲಂಘನೆ ಮಾಡಲು ಅವಕಾಶವಿದೆ. ಈ ಉಲ್ಲಂಘನೆಯ ಪ್ರಮಾಣವನ್ನು ಕಾನೂನು ಪ್ರಕಾರ ದಂಡ ವಿಧಿಸಿ ಸಕ್ರಮ ಮಾಡಿಕೊಳ್ಳಬಹುದು. ಆದರೆ, ಹಲವು ಪ್ರಕರಣಗಳಲ್ಲಿ ಶೇ  ನೂರರಷ್ಟು ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಕಟ್ಟಡ ನಿಯಮ ಉಲ್ಲಂಘನೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ತಕ್ಷಣ ಪಾಲಿಕೆ ಎಂಜಿನಿಯರ್‌ಗಳು ಸ್ಥಳ ಪರಿಶೀಲಿಸಿ ಸೂಕ್ತ ಉತ್ತರ ನೀಡುವಂತೆ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಬೇಕು. ಕಟ್ಟಡ ಮಾಲೀಕರಿಂದ ಸೂಕ್ತ ಉತ್ತರ ಬಾರದಿದ್ದಲ್ಲಿ ನಿಯಮಗಳಿಗೆ ವ್ಯತಿರಿಕ್ತವಾಗಿ ನಿರ್ಮಿಸಿದ ಕಟ್ಟಡಗಳ ಭಾಗಗಳನ್ನು ತೆರವುಗೊಳಿಸುವ ಸಂಬಂಧ ಆದೇಶ ಹೊರಡಿಸಲು ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಅವಕಾಶವಿದೆ.
 
ಕೆಎಂಸಿ ಕಾಯ್ದೆ 462 ಪ್ರಕಾರ, ಪಾಲಿಕೆ ಎಂಜಿನಿಯರ್‌ಗಳು ಬಿಎಂಟಿಎಫ್ ಪೊಲೀಸರ ರಕ್ಷಣೆ ಪಡೆದು ಉಲ್ಲಂಘಿತ ಕಟ್ಟಡದ ಭಾಗಗಳನ್ನು ತೆರವುಗೊಳಿಸಬಹುದು. ನಿಯಮ ಉಲ್ಲಂಘಿಸಿರುವ ಕಟ್ಟಡಗಳ ವಿರುದ್ಧ ಪಾಲಿಕೆ ನೋಟಿಸ್ ನೀಡಿದ 7 ದಿನಗಳ ನಂತರ ಕ್ರಮ ಜರುಗಿಸಲು ಅವಕಾಶವಿದೆ.

ಆದರೆ, ಅನೇಕ ಪ್ರಕರಣಗಳಲ್ಲಿ ಎಂಜಿನಿಯರ್‌ಗಳು ಸಕಾಲದಲ್ಲಿ ಕ್ರಮ ಜರುಗಿಸದೆ ನಿರ್ಲಕ್ಷ್ಯ ವಹಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಟ್ಟಡ ಮಾಲೀಕರೊಂದಿಗೆ ಎಂಜಿನಿಯರ್‌ಗಳು ಶಾಮೀಲಾಗಿ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂಬುದು ಬಿಎಂಟಿಎಫ್‌ಗೆ ಸಲ್ಲಿಕೆಯಾಗಿರುವ ದೂರುಗಳಲ್ಲಿ ಸಾರ್ವಜನಿಕರ ಸಹಜ ಆರೋಪ.

ಈ ನಡುವೆ, ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದ ಹಲವು ತಿಂಗಳ ನಂತರವೂ ಕ್ರಮ ಜರುಗಿಸದಿರುವ ಎಂಜಿನಿಯರ್‌ಗಳ ವಿರುದ್ಧ ಬಿಎಂಟಿಎಫ್ ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ. ಇತ್ತೀಚೆಗಷ್ಟೇ 16 ಎಂಜಿನಿಯರ್‌ಗಳು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ನಿಯಮ ಏನು ಹೇಳುತ್ತದೆ?
ನಗರದ ಯಾವುದೇ ಭಾಗದಲ್ಲಿ ಎಷ್ಟೇ ಅಳತೆಯ ನಿವೇಶದಲ್ಲಿ ಕಟ್ಟಡ ನಿರ್ಮಿಸಬೇಕೆಂದರೂ ಅದಕ್ಕಾಗಿಯೇ ಪ್ರತ್ಯೇಕ ನಿಯಮಗಳಿವೆ. ರಸ್ತೆಯ ಅಗಲ, ನಿವೇಶನವಿರುವ ಪ್ರದೇಶ ಸೇರಿದ ವಲಯ, ಉದ್ದೇಶಿತ ಕಟ್ಟಡದ ಎತ್ತರ ಸೇರಿದಂತೆ ಇತರೆ ಅಂಶಗಳ ಮೇಲೆ ಒಟ್ಟು ನಿರ್ಮಾಣ ಪ್ರದೇಶದ ವಿಸ್ತೀರ್ಣ ನಿರ್ಧಾರವಾಗುತ್ತದೆ. ಅಲ್ಲದೆ, ಆ ನಿವೇಶನದ ಅಳತೆಗೆ ಪೂರಕವಾಗಿ ಇಷ್ಟೇ ಎತ್ತರದ ಕಟ್ಟಡ ನಿರ್ಮಿಸಬೇಕೆಂಬ ನಿಯಮವಿದೆ.

ನಿವೇಶನದ ಅಳತೆಗೆ ಅನುಗುಣವಾಗಿ ಎಡ ಹಾಗೂ ಬಲಭಾಗದಲ್ಲಿ ಇಂತಿಷ್ಟು ತೆರೆದ ಪ್ರದೇಶ (ಸೆಟ್ ಬ್ಯಾಕ್) ಬಿಡಬೇಕೆಂಬ ನಿಯಮವಿದೆ. 11.5 ಮೀಟರ್ ಎತ್ತರದವರೆಗಿನ ಕಟ್ಟಡ ಹಾಗೂ 4000 ಚದರ ಮೀಟರ್ ವಿಸ್ತೀರ್ಣದ ನಿವೇಶನಗಳಲ್ಲಿ ಬಲಭಾಗ ಹಾಗೂ ರಸ್ತೆಗೆ ಅಭಿಮುಖವಾಗಿರುವ ಭಾಗದಲ್ಲಿ ತಲಾ ಒಂದು ಮೀಟರ್ ಸೆಟ್ ಬ್ಯಾಕ್ ಪ್ರದೇಶವಿರಬೇಕು.

ಕಟ್ಟಡದ ಎತ್ತರ 11.5ರಿಂದ 15 ಮೀಟರ್ ಎತ್ತರದವರೆಗೆ ಇದ್ದರೆ ಆ ಕಟ್ಟಡದ ನಾಲ್ಕು ಭಾಗಗಳಲ್ಲಿ ಐದು ಮೀಟರ್ ಸೆಟ್‌ಬ್ಯಾಕ್ ಬಿಡಬೇಕು. 15ರಿಂದ 18 ಮೀಟರ್ ಎತ್ತರದ ಕಟ್ಟಡಗಳಲ್ಲಿ 6 ಮೀಟರ್ ಸೆಟ್‌ಬ್ಯಾಕ್ ಬಿಡಬೇಕು. ಒಟ್ಟು 50 ಮೀಟರ್ ಹಾಗೂ ಅದಕ್ಕಿಂತಲೂ ಹೆಚ್ಚು ಎತ್ತರದ ಕಟ್ಟಡಗಳಲ್ಲಿ 16 ಮೀಟರ್ ಸೆಟ್‌ಬ್ಯಾಕ್ ಬಿಡಬೇಕೆಂಬ ನಿಯಮವಿದೆ.
 
ಆದರೆ, ಬಹುಪಾಲು ಕಟ್ಟಡಗಳಲ್ಲಿ ಈ ನಿಯಮ ಪಾಲಿಸುತ್ತಿಲ್ಲ.ಇನ್ನು ವಾಸದ ಕಟ್ಟಡಗಳನ್ನು ಕೂಡ ರಸ್ತೆಯ ಅಗಲಕ್ಕೆ ಅನುಗುಣವಾಗಿ ನಿಗದಿಪಡಿಸಿದ ವಿಸ್ತೀರ್ಣದಲ್ಲಷ್ಟೇ ನಿರ್ಮಿಸಬೇಕು. 12 ಮೀಟರ್ ಅಗಲದ ರಸ್ತೆಯಲ್ಲಿ 360 ಚದರ ಮೀಟರ್ ನಿವೇಶನವಿದ್ದಲ್ಲಿ ನೆಲಮಟ್ಟದಲ್ಲಿ ಶೇ 75ರಷ್ಟು ಪ್ರದೇಶವನ್ನು ಮಾತ್ರ ಬಳಸಬೇಕು.
 
18 ಮೀಟರ್ ಅಗಲದ ರಸ್ತೆಯಲ್ಲಿ 1000 ಚ.ಮೀ. ವಿಸ್ತೀರ್ಣದ ನಿವೇಶನವಿದ್ದಲ್ಲಿ ನೆಲಮಟ್ಟದಲ್ಲಿ ಶೇ 65ರಷ್ಟು ಭಾಗ ಮಾತ್ರ ಬಳಸಬೇಕು. ಹಾಗೆಯೇ 30 ಮೀಟರ್ ಅಗಲದ ರಸ್ತೆಯಲ್ಲಿ  20 ಸಾವಿರ ಚ.ಮೀ. ವಿಸ್ತೀರ್ಣದ ನಿವೇಶನವಿದ್ದರೂ ನೆಲಮಟ್ಟದ ಶೇ 50ರಷ್ಟು ಪ್ರದೇಶದಲ್ಲಿ ಕಟ್ಟಡ ನಿರ್ಮಿಸಬೇಕು.

ಬಿಎಂಟಿಎಫ್‌ಗೆ ಸಿಬ್ಬಂದಿ ಕೊರತೆ
ಇನ್ನು, ಸಾರ್ವಜನಿಕರ ದೂರುಗಳ ಬಗ್ಗೆ ತನಿಖೆ ನಡೆಸಲು ಬಿಎಂಟಿಎಫ್‌ಗೆ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇಡೀ ಬಿಎಂಟಿಎಫ್‌ನಲ್ಲಿ ಪೊಲೀಸರು ಹಾಗೂ ಸಹಾಯಕರೂ ಸೇರಿ ಕೇವಲ 40 ಮಂದಿ ಸಿಬ್ಬಂದಿಯಿದ್ದಾರೆ. ಇದರಿಂದ ನಿರೀಕ್ಷಿತ ರೀತಿಯಲ್ಲಿ ಪ್ರಕರಣಗಳತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಎಂಟಿಎಫ್ ಮುಖ್ಯಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕಾರ್ಯಪಡೆಗೆ ಹೆಚ್ಚಿನ ಸಿಬ್ಬಂದಿ ನೀಡುವಂತೆ ಬಿಎಂಟಿಎಫ್ ಮುಖ್ಯಸ್ಥರು ಸರ್ಕಾರಕ್ಕೆ ಪತ್ರ ಬರೆದಿರುವುದು ಇದೀಗ ಅದರ ಅಧಿಕಾರ ವ್ಯಾಪ್ತಿಗೆ ಕುತ್ತು ತರುವ ಪ್ರಸಂಗ ತಂದೊಡ್ಡಿದೆ. ಕರ್ನಾಟಕ ಮುನಿಸಿಪಲ್ ಕಾಯ್ದೆ 1976ರ ಕಲಂ 492 ಪ್ರಕಾರ, ಬಿಎಂಟಿಎಫ್‌ಗೆ ನಿರ್ದಿಷ್ಟ ಸಂಖ್ಯೆ ಅಧಿಕಾರಿಗಳನ್ನು ನೇಮಿಸಲು ಆಯುಕ್ತರಿಗೆ ಅವಕಾಶವಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎನ್. ಗೋಪಾಲಯ್ಯ ಅವರು ಜುಲೈ 17ರಂದು ಆದೇಶ ಹೊರಡಿಸಿರುವುದು ಈ ಅನುಮಾನಗಳಿಗೆ ಪುಷ್ಠಿ ನೀಡಿದೆ.
 
ಕೆಎಂಸಿ ಅಧಿನಿಯಮ 1976ರ ಕಲಂ 492 (3) ಪ್ರಕಾರ, ಬಿಎಂಟಿಎಫ್‌ನ ಮೇಲ್ವಿಚಾರಣೆ ಹಾಗೂ ನಿಯಂತ್ರಣವನ್ನು ಆಯುಕ್ತರು ಹೊಂದಿರಬೇಕಾಗುತ್ತದೆ. ಆದರೆ, 1996ರ ಮಾ.19ರ ಆದೇಶದಂತೆ ಕಾರ್ಯಾಚರಣೆ ಪಡೆಯು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇರ ನಿಯಂತ್ರಣ, ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ.
 
ಸರ್ಕಾರಿ ಆದೇಶದಲ್ಲಿನ ಈ ಅಂಶವು ಕಲಂ 492 (2), (3)ಗೆ ವ್ಯತಿರಿಕ್ತವಾಗಿದೆ. ಇದರಿಂದ ಬಿಎಂಟಿಎಫ್ ರಚನೆ ಹಾಗೂ ಅದಕ್ಕೆ ಅಧಿಕಾರ ನೀಡುವಲ್ಲಿ ತಪ್ಪಾಗಿದೆ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT