ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟದ ಮೈದಾನ ಹಂಚಿಕೆ: ಮಕ್ಕಳ ಪ್ರತಿಭಟನೆ

ಬಿಡಿಎ ಕ್ರಮದ ವಿರುದ್ಧ ಸ್ಥಳೀಯರ ಪ್ರತಿಭಟನೆ
Last Updated 17 ಮೇ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ನಂದಿನಿ ಲೇಔಟ್‌ನ ರಾಮಕೃಷ್ಣ ನಗರದಲ್ಲಿರುವ ಮಕ್ಕಳ ಆಟದ ಮೈದಾನವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಮೂರು ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡಿದೆ. ಇದನ್ನು ವಿರೋಧಿಸಿ ರಾಮಕೃಷ್ಣನಗರ ಮಕ್ಕಳ ಆಟದ ಮೈದಾನ ರಕ್ಷಣಾ ಸಮಿತಿಯ ಸದಸ್ಯರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.

ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ 347 ಚದರ ಮೀಟರ್‌, ಮಹಾಲಕ್ಷ್ಮಿಪುರ ಬ್ರಾಹ್ಮಣ ಸಭಾಕ್ಕೆ 532.50 ಚದರ ಮೀಟರ್‌, ತುಂಗಾಭದ್ರಾ ವಿದ್ಯಾಸಂಸ್ಥೆಗೆ 682.22 ಚದರ ಮೀಟರ್ ಜಾಗವನ್ನು ಪ್ರಾಧಿಕಾರ 2018ರ ಮೇ ತಿಂಗಳಲ್ಲಿ ಹಂಚಿಕೆ ಮಾಡಿದೆ.‘ಈ ಮೈದಾನವು ಪ್ರಾಧಿಕಾರಕ್ಕೆ ಸೇರಿದ್ದು. ಸುಮಾರು 30 ವರ್ಷಗಳ ಹಿಂದೆಯೇ ಬಿಬಿಎಂಪಿ ಅಧಿಕಾರಿಗಳು ಖಾಲಿ ಮೈದಾನವನ್ನು ಆಟದ ಮೈದಾನವನ್ನಾಗಿ ಪರಿವರ್ತಿಸಿ ತಡೆಗೋಡೆ ನಿರ್ಮಿಸಿದ್ದಾರೆ. ಜತೆಗೆ, ಇಲ್ಲಿ ಮಕ್ಕಳ ಆಟದ ವಸ್ತುಗಳನ್ನು ಅಳವಡಿಸಿದ್ದಾರೆ. ಸುತ್ತಲಿನ ಎಂಟು ಶಾಲೆಗಳ ಮಕ್ಕಳು ಇಲ್ಲಿ ಆಟವಾಡಲು ಬರುತ್ತಿದ್ದಾರೆ . ಬಿಡಿಎ ನಿರ್ಧಾರದಿಂದ ಮಕ್ಕಳಿಗೆ ಆಟದ ಮೈದಾನ ಇಲ್ಲದಂತಾಗಿದೆ’ ಎಂದು ರಕ್ಷಣಾ ಸಮಿತಿಯ ಸದಸ್ಯ ಲೋಕೇಶ್‌ ಬಹುಜನ್‌ ದೂರಿದರು.

‘ಬ್ರಾಹ್ಮಣ ಸಭಾಕ್ಕೆ ಜಾಗ ಮಂಜೂರು ಮಾಡುವಂತೆ ಶಾಸಕ ಕೆ.ಗೋಪಾಲಯ್ಯ, ಬಿಜೆಪಿ ಮುಖಂಡರಾದ ನೆ.ಲ.ನರೇಂದ್ರಬಾಬು, ಎಂ.ನಾಗರಾಜ್‌, ಎಸ್‌.ಹರೀಶ್‌, ಪಾಲಿಕೆ ಸದಸ್ಯ ಎಸ್‌.ಕೇಶವಮೂರ್ತಿ ಶಿಫಾರಸು ಮಾಡಿದ್ದರು. ರಾಜಕಾರಣಿಗಳ ಒತ್ತಡಕ್ಕೆ ಮಣಿದು ಬಿಡಿಎ ನಿವೇಶನ ಮಂಜೂರು ಮಾಡಿದೆ. ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ಶಾಲಾ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಗೋಪಾಲಯ್ಯ ಒತ್ತಡ ಹೇರುತ್ತಿದ್ದಾರೆ’ ಎಂದು ಅವರು ಕಿಡಿಕಾರಿದರು. ‘ನೆ.ಲ.ನರೇಂದ್ರಬಾಬು ಅವರು ಶಾಸಕರಾಗಿದ್ದ ವೇಳೆಯಲ್ಲಿ ಮೈದಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ಈಗ ಸಂಘ ಸಂಸ್ಥೆಗಳ ಪರವಾಗಿ ನಿಂತಿದ್ದಾರೆ. ಇದು ದ್ವಿಮುಖ ಧೋರಣೆಗೆ ಸಾಕ್ಷಿ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಇನ್ನೊಬ್ಬ ಸದಸ್ಯ ಜ್ಞಾನಮೂರ್ತಿ, ‘ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಕಾಮಗಾರಿಗೆ ತಡೆ ನೀಡುವುದಾಗಿ ಬಿಡಿಎ ಆಯುಕ್ತ ರಾಕೇಶ್ ಸಿಂಗ್‌ ಅವರು ಮೌಖಿಕವಾಗಿ ಹೇಳಿದ್ದಾರೆ. ನಿವೇಶನ ಹಂಚಿಕೆ ರದ್ದುಪಡಿಸುವ ಬಗ್ಗೆ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಲಿಖಿತ ಆದೇಶ ನೀಡುವ ವರೆಗೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT