ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಗ್ಲಿಷ್‌ ಬಳಸುವ ನಿಗಮ–ಮಂಡಳಿ ವಿರುದ್ಧ ಕ್ರಮಕ್ಕೆ ಶಿಫಾರಸು’

Last Updated 25 ಏಪ್ರಿಲ್ 2017, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ಇಂಗ್ಲಿಷ್‌ನಲ್ಲಿ  ವ್ಯವಹರಿಸುತ್ತಿರುವ, ಸಾರ್ವಜನಿಕ ಉದ್ದಿಮೆಗಳ ಇಲಾಖೆ ವ್ಯಾಪ್ತಿಯ ಬಹುತೇಕ ನಿಗಮ–  ಮಂಡಳಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ದರಾಮಯ್ಯ ಹೇಳಿದರು.

‘ಇಂಗ್ಲಿಷ್‌ ಭಾಷೆಯಲ್ಲಿ ಇರುವ ಕಡತಗಳನ್ನು ವಾಪಸ್‌ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಅವರು  ಮಂಗಳವಾರ  ಮಾಧ್ಯಮ ಗೋಷ್ಠಿಯಲ್ಲಿ  ತಿಳಿಸಿದರು.

‘ಆಡಳಿತದಲ್ಲಿ ಕನ್ನಡವನ್ನೇ ಬಳಸ ಬೇಕು ಎಂದು ಈವರೆಗೆ 314 ಆದೇಶಗಳು ಹೊರಬಿದ್ದಿವೆ. ಹಾಗಿದ್ದರೂ ಕೆಲವು ಕಚೇರಿಗಳಲ್ಲಿ ಇಂಗ್ಲಿಷ್‌ನಲ್ಲಿಯೇ ಕಡತ ಮಂಡನೆಯಾಗುತ್ತಿದೆ’ ಎಂದು ಹೇಳಿದರು.

ಪ್ರಧಾನಿಗೆ ಪತ್ರ: ‘2014ರ ನೇಮಕಾತಿ ನಿಯಮಗಳ ಅನ್ವಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ  ನೇಮಕಾತಿ ನಡೆಸಿದರೆ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ. ಈ ನಿಯಮಗಳ ಅನ್ವಯವೇ ನೇಮಕಾತಿ ನಡೆಸುವಂತೆ  ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ  ನಿರ್ದೇಶನ ನೀಡಬೇಕು ಎಂದು ಕೋರಿ  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ. ಇದು ಜಾರಿಯಾದರೆ ಕನ್ನಡ ಕಲಿತವರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗಲಿವೆ’ ಎಂದೂ ಅವರು ಹೇಳಿದರು.

‘ಖಾಸಗಿ ಉದ್ದಿಮೆ, ಬ್ಯಾಂಕುಗಳ ಸಿ ಮತ್ತು ಡಿ ಸಮೂಹದ ಶೇ 100ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ  ನೀಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಜೆಟ್‌ ಭಾಷಣದಲ್ಲಿ ಘೋಷಿಸಿದ್ದಾರೆ. ಅದನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಬ್ಯಾಂಕಿಂಗ್‌ ಮತ್ತು ಖಾಸಗಿ ಕ್ಷೇತ್ರದ ಸಂಸ್ಥೆಗಳಿಗೆ ಪ್ರಾಧಿಕಾರದಿಂದಲೇ ಸೂಚನೆ ನೀಡಲಾಗುತ್ತಿದೆ’ ಎಂದರು.

‘ಇಂಗ್ಲಿಷ್‌ನಲ್ಲಿಯೇ ಕಡತ ಮಂಡಿಸಬೇಕು ಎಂದು ಸುತ್ತೋಲೆ ಹೊರಡಿಸಿದ್ದ ಸಾರ್ವಜನಿಕ ಉದ್ಯಮಗಳ ಇಲಾಖೆ ಹಿಂದಿನ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಅವರಿಗೆ ವಾಗ್ದಂಡನೆ ವಿಧಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದರ ಬದಲು ಅವರನ್ನು ಕೇಂದ್ರ ಸೇವೆಗೆ ವರ್ಗಾವಣೆ ಮಾಡಲಾಗಿದೆ’ ಎಂದು ಹೇಳಿದರು.

‘ದ್ವಿಭಾಷಾ ಸೂತ್ರ ಅನುಷ್ಠಾನಕ್ಕೆ ಚಳವಳಿ’
‘ತಮಿಳುನಾಡಿನ ಮಾದರಿಯಲ್ಲಿ ದ್ವಿಭಾಷಾ ಸೂತ್ರವನ್ನು ರಾಜ್ಯದಲ್ಲಿಯೂ ಅನುಷ್ಠಾನಕ್ಕೆ ತರಲು ಚಳವಳಿ ಆರಂಭಿಸಬೇಕಾಗಿದೆ’ ಎಂದು ಎಸ್‌.ಜಿ.  ಸಿದ್ದರಾಮಯ್ಯ ಹೇಳಿದರು.

‘ಹಿಂದಿ ಭಾಷೆ ಹೇರಿಕೆ ಹೆಚ್ಚುತ್ತಿದೆ. ಸಾಂವಿಧಾನಿಕವಾಗಿ ಗುರುತಿಸಿರುವ ಭಾಷೆಗಳೆಲ್ಲ ರಾಷ್ಟ್ರ ಭಾಷೆಗಳೇ ಆಗಿವೆ. ಹೀಗಿರುವಾಗ ಹಿಂದಿ  ಭಾಷೆ ಹೇರುವುದು ಸಂವಿಧಾನಬಾಹಿರ ನಡೆಯಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಕರ್ನಾಟಕವು ತ್ರಿಭಾಷಾ ಸೂತ್ರ ಒಪ್ಪಿಕೊಂಡಿದ್ದರಿಂದ ಸಮಸ್ಯೆಯಾಗಿದೆ. ಇನ್ನು ಮುಂದೆಯಾದರೂ ಇಂಗ್ಲಿಷ್ ಮತ್ತು ಕನ್ನಡ ಭಾಷೆ ಬಳಕೆಗೆ ಮಾತ್ರ ಅವಕಾಶ ಇರುವ ದ್ವಿಭಾಷಾ ಸೂತ್ರ  ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT