ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕ್ಯಾಂಟೀನ್‌ಗೆ ಆರಂಭದಲ್ಲೇ ವಿಘ್ನ

ಆಹಾರ ತಯಾರಿಕೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಕೆಗೆ ಇಸ್ಕಾನ್‌ ನಿರಾಕರಣೆ
Last Updated 5 ಏಪ್ರಿಲ್ 2017, 19:54 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡಿನ ‘ಅಮ್ಮ ಕ್ಯಾಂಟೀನ್‌’ ಮಾದರಿಯಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ಮುನ್ನವೇ ವಿಘ್ನ ಎದುರಾಗಿದೆ.

‘ಆರ್ಥಿಕವಾಗಿ ಲಾಭದಾಯಕ ಅಲ್ಲದಿರುವುದರಿಂದ ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಸಲು ಸಾಧ್ಯವಿಲ್ಲ’ ಎಂದು ಎರಡು ಪ್ರಮುಖ ಹೊಟೇಲ್‌  ಉದ್ದಿಮೆದಾರರ ಸಂಘಗಳು ಸರ್ಕಾರಕ್ಕೆ ಹೇಳಿವೆ.

ನಗರದ 198 ವಾರ್ಡ್‌ಗಳಲ್ಲಿ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ₹5ಕ್ಕೆ ಉಪಾಹಾರ ಮತ್ತು ₹10ಕ್ಕೆ ಊಟ ಪೂರೈಸುವ ಯೋಜನೆಯನ್ನು ಸರ್ಕಾರ ಬಜೆಟ್‌ನಲ್ಲಿ ಪ್ರಕಟಿಸಿದೆ. ಈ ಯೋಜನೆಗೆ ‘ಇಂದಿರಾ ಕ್ಯಾಂಟೀನ್’ ಎಂದು ಹೆಸರಿಡಲಾಗಿದೆ. ಉಪಾಹಾರ, ಊಟ ಪೂರೈಸುವಂತೆ ‘ಇಸ್ಕಾನ್‌’ಗೆ ಸರ್ಕಾರ ಮೊದಲು ಕೇಳಿತ್ತು. ಆಹಾರ ತಯಾರಿಕೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸುವಂತೆ ಹೇಳಿತ್ತು. ಆದರೆ, ಇದು ಸಾಧ್ಯವಿಲ್ಲ ಎಂದು ಇಸ್ಕಾನ್‌ ಸ್ಪಷ್ಟಪಡಿಸಿತ್ತು.

ಆ ನಂತರ ಎರಡು ಪ್ರಮುಖ ಹೊಟೇಲ್‌ ಉದ್ದಿಮೆದಾರರ ಸಂಘಕ್ಕೆ ಸರ್ಕಾರ ಮನವಿ ಮಾಡಿತು. ಆಹಾರ ಸಿದ್ಧಪಡಿಸಿ ಪೂರೈಸುವುದು ಹಿತಾಸಕ್ತಿ ಸಂಘರ್ಷ ಆಗಲಿದೆ. ಇದರಿಂದ ಸ್ವಂತ ವ್ಯವಹಾರಕ್ಕೆ ಧಕ್ಕೆಯಾಗುತ್ತದೆ ಎಂದು ಸರ್ಕಾರದ ಮನವಿ ತಿರಸ್ಕರಿಸಿವೆ.

ಬೃಹತ್‌ ಬೆಂಗಳೂರು ಹೋಟೆಲ್‌ ಸಂಘದಲ್ಲಿ 2,000 ಹೋಟೆಲ್‌ಗಳು ನೋಂದಣಿಯಾಗಿವೆ. ಆಹಾರ ಪೂರೈಸುವಂತೆ ಆಹಾರ ಇಲಾಖೆ ಮಾಡಿದ ಮನವಿಯನ್ನು ಈ ಸಂಘ ತಿರಸ್ಕರಿಸಿದೆ.

‘ನಮಗೆ ನಮ್ಮದೇ ಆದ ಸಮಸ್ಯೆಗಳಿವೆ. ಆಹಾರ ತಯಾರಿಸಿ ಸರಬರಾಜು ಮಾಡುವುದು ಸುಲಭದ ಕೆಲಸವಲ್ಲ. ಕಾರ್ಮಿಕರ ಸಮಸ್ಯೆಯೂ ಇದೆ. ಹೀಗಾಗಿ ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಸಲು ಸಾಧ್ಯವಿಲ್ಲ’ ಎಂದು ಸಂಘದ ಅಧ್ಯಕ್ಷ ಬಿ. ಚಂದ್ರಶೇಖರ ಹೆಬ್ಬಾರ್‌ ಹೇಳಿದರು. ‘ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ರೆಸ್ಟೊರೆಂಟ್‌ಗಳ ಸಂಘ’ವೂ (ಕೆಪಿಎಚ್‌ಆರ್‌ಎ) ಸರ್ಕಾರದ ಪ್ರಸ್ತಾವನೆ ತಿರಸ್ಕರಿಸಿದೆ.

‘ಆಹಾರ ತಯಾರಿಸಿ ಸರಬರಾಜು ಮಾಡುವುದು ನಷ್ಟದ ವ್ಯವಹಾರ.  ಅದನ್ನು ಹೆಚ್ಚು ದಿನ ಮುಂದುವರಿಸಲು ಸಾಧ್ಯವಿಲ್ಲ’ ಎಂದು ಸಂಘದ ಅಧ್ಯಕ್ಷ ರಾಜೇಂದ್ರ ಹೇಳಿದರು.

ಹೊಟೇಲ್‌ ವ್ಯವಹಾರಕ್ಕೆ ಧಕ್ಕೆ ಇಲ್ಲ: ‘ಇಂದಿರಾ ಕ್ಯಾಂಟೀನ್‌ನಿಂದ ನಿಮ್ಮ ವ್ಯಾಪಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಹೊಟೇಲ್‌ಗಳ ಕಾಯಂ ಗ್ರಾಹಕರು ಹಾಗೆಯೇ ಇರುತ್ತಾರೆ. ಬಡವರಿಗೆ ರಿಯಾಯಿತಿ ದರದಲ್ಲಿ ಊಟ ಕೊಡುವುದಷ್ಟೇ ಯೋಜನೆ ಉದ್ದೇಶ ಎಂದು ಹೊಟೇಲ್‌  ಉದ್ದಿಮೆದಾರರಿಗೆ ಮನವರಿಕೆ ಮಾಡಿಕೊಡಲಾಗಿದೆ’ ಎಂದು  ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಹೇಳಿದರು.

‘ಸರ್ಕಾರ ಕೇವಲ ಹೊಟೇಲ್‌ ಉದ್ದಿಮೆದಾರರನ್ನಷ್ಟೇ ಅವಲಂಬಿಸಿಲ್ಲ. ಸರ್ಕಾರೇತರ ಸಂಘ ಸಂಸ್ಥೆಗಳು, ಯುವಕರ ಸಂಘಟನೆಗಳು ಈ ಬಗ್ಗೆ ಆಸಕ್ತಿ ತೋರಿಸಿವೆ. ಅವರೆಲ್ಲರ ಜೊತೆಗೂ ಶೀಘ್ರದಲ್ಲೇ ಮಾತುಕತೆ ನಡೆಸಲಾಗುವುದು’ ಎಂದು ಖಾದರ್‌ ವಿವರಿಸಿದರು.

ವಿಧಾನಸಭಾ ಕ್ಷೇತ್ರಕ್ಕೊಂದು ಅಡುಗೆ ಮನೆ
‘ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಕೇಂದ್ರೀಕೃತ ಅಡುಗೆ ಮನೆ ಸ್ಥಾಪಿಸಿ, ಅಲ್ಲಿ ತಯಾರಿಸಿದ ಆಹಾರವನ್ನು ಆಯಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಸರಬರಾಜು ಮಾಡುವ ಉದ್ದೇಶ ಇದೆ’ ಎಂದೂ ಖಾದರ್‌ ಹೇಳಿದರು. ಈ ಸಂಬಂಧ 198 ವಾರ್ಡ್‌ಗಳ ವ್ಯಾಪ್ತಿಯಲ್ಲಿಯೂ ಖಾಲಿ ಜಾಗವನ್ನು ಗುರುತಿಸುವಂತೆ ಬಿಬಿಎಂಪಿಗೆ ಸೂಚನೆ ನೀಡಲಾಗಿದೆ ಎಂದೂ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT