ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಅಂಚೆ ಚೀಟಿಗೆ ಕಾಫಿ ಪರಿಮಳ!

ಸುಗಂಧಭರಿತ ಅಂಚೆ ಚೀಟಿ ಸರಣಿಗೆ ಇದು ನಾಲ್ಕನೆ ಸೇರ್ಪಡೆ
Last Updated 23 ಏಪ್ರಿಲ್ 2017, 20:04 IST
ಅಕ್ಷರ ಗಾತ್ರ

ಬೆಂಗಳೂರು: ಅಂಚೆ ಇಲಾಖೆ ಆಗಾಗ ಅತಿ ವಿರಳವಾದ ಅಂಚೆ ಚೀಟಿಗಳನ್ನು ಮುದ್ರಿಸುತ್ತದೆ. ಆ ಸಾಲಿಗೆ ಕಾಫಿ ಪರಿಮಳದ ಅಂಚೆ ಚೀಟಿ ಸೇರ್ಪಡೆಯಾಗಿದೆ. ನಗರದ ಕೇಂದ್ರ ಅಂಚೆ ಕಚೇರಿಯಲ್ಲಿ ಭಾನುವಾರ ಕೇಂದ್ರ ಸಂವಹನ ಸಚಿವ ಮನೋಜ್‌ ಸಿನ್ಹಾ ಅವರು ಈ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.

ಈ ಅಂಚೆ ಚೀಟಿ ಮೇಲೆ ಕೈಯಿಂದ ಉಜ್ಜಿದರೆ ಹಬೆಯಾಡುತ್ತಿರುವ ಕಪ್ಪಿನಿಂದ ಬರುವ ಕಾಫಿ ಪರಿಮಳ ನಿಮ್ಮನ್ನು ಆವರಿಸುತ್ತದೆ. ಸಮೀಪದಲ್ಲೇ ಎಲ್ಲೊ ಕಾಫಿ ಬೀಜಗಳನ್ನು ಪುಡಿ ಮಾಡಲಾಗುತ್ತಿದೆ ಎಂಬಂತೆ ಭಾಸವಾಗುತ್ತದೆ.

ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬೆಳೆಯುವ ಕಾಫಿ ಸಂಕೇತವಾಗಿ ಇದನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 1 ಲಕ್ಷ ಅಂಚೆ ಚೀಟಿಗಳನ್ನು ಮುದ್ರಿಸಲಾಗಿದೆ.
ಸುಗಂಧಭರಿತ ಅಂಚೆ ಚೀಟಿ ಸರಣಿಯಲ್ಲಿ ಇದು ನಾಲ್ಕನೆಯದು. ಒಂದರ ಬೆಲೆ ₹100. ಸದ್ಯ ಆಯ್ದ ಮುಖ್ಯ ಅಂಚೆ ಕಚೇರಿಗಳಲ್ಲಿ ಇದು ಲಭ್ಯ. ಮುಂದಿನ ದಿನಗಳಲ್ಲಿ ಎಲ್ಲಾ ಅಂಚೆ ಕಚೇರಿಗಳಲ್ಲೂ ಸಿಗಲಿದೆ.

2006ರಲ್ಲಿ ಶ್ರೀಗಂಧದ ಸುವಾಸನೆ ಯುಕ್ತ (₹15 ದರ), 2007ರಲ್ಲಿ ಗುಲಾಬಿ ಪರಿಮಳದ (₹5ರಿಂದ ₹15ರ ದರವಿತ್ತು) ಹಾಗೂ 2008ರ ಮಲ್ಲಿಗೆ ಘಮಲಿನ ಅಂಚೆ ಚೀಟಿಯನ್ನು ಇಲಾಖೆ ಬಿಡುಗಡೆ ಮಾಡಿತ್ತು.

ಪೋಸ್ಟ್‌ ಮಾಸ್ಟರ್‌ ಜನರಲ್‌ ಅರವಿಂದ್‌ ವರ್ಮಾ, ‘ಅಂಚೆ ಚೀಟಿ ಸಂಗ್ರಹಗಾರರು ಇದನ್ನು ಖರೀದಿಸುತ್ತಾರೆ. ಅಲ್ಲದೆ ದೂರದ ಪ್ರದೇಶಕ್ಕೆ ಯಾವುದಾದರೂ ಅಂಚೆ ಕಳುಹಿಸಬೇಕಾದರೆ ಈ ಅಂಚೆಯನ್ನು ಬಳಸಬಹುದು’ ತಿಳಿಸಿದರು.

‘ಇದೊಂದು ಕಡಿಮೆ ಆವೃತ್ತಿಯ ಅಂಚೆ ಚೀಟಿ ಆಗಿರುವುದರಿಂದ ಒಂದು ಬಾರಿ ಮಾತ್ರ ಮುದ್ರಿಸಲಾಗುತ್ತದೆ. ಹೀಗಾಗಿ ಕೆಲ ವರ್ಷಗಳ ನಂತರ ಇದಕ್ಕೆ ಬೇಡಿಕೆ ಬರುತ್ತದೆ. ಹೆಚ್ಚಿನ ಬೆಲೆ ನೀಡಿ ಈ ಅಂಚೆ ಚೀಟಿಗಳನ್ನು ಖರೀದಿ ಮಾಡುವವರೂ ಇದ್ದಾರೆ’ ಎಂದರು.

ಮನೋಜ್‌ ಸಿನ್ಹಾ, ‘ಭಾರತದ ಪ್ರಮುಖ ಉತ್ಪನ್ನವಾಗಿರುವ ಕಾಫಿಯ ರುಚಿಗೆ ಹೊರದೇಶದವರೂ ಮಾರುಹೋಗಿದ್ದಾರೆ. ಕರ್ನಾಟಕ ಕಾಫಿಯ ತವರೂರು. ತಮಿಳುನಾಡು ಮತ್ತು ಕೇರಳದಲ್ಲೂ ಕಾಫಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆಂಧ್ರಪ್ರದೇಶ, ಒಡಿಶಾ ಮತ್ತು ಈಶಾನ್ಯ ರಾಜ್ಯಗಳಲ್ಲೂ ಈಗ ಕಾಫಿಯನ್ನು ಕಾಣುತ್ತೇವೆ’ ಎಂದು ಹೇಳಿದರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್, ‘ಕಾಫಿ ರಫ್ತನ್ನು ಹೆಚ್ಚಿಸಬೇಕೆಂಬ ಉದ್ದೇಶದಿಂದ ಕಾಫಿ ಮಂಡಳಿ ಈ ಅಂಚೆ ಚೀಟಿ ರೂಪಿಸಿದೆ. ಎಲ್ಲಾ ಅಂಚೆ ಕಚೇರಿಗಳಲ್ಲಿ ಈ ಅಂಚೆ ಚೀಟಿಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಆಂಧ್ರಪ್ರದೇಶದಲ್ಲಿ ಒಂದು ಬೆಳೆದ ಕಾಫಿ ಪ್ಯಾರಿಸ್‌ನಲ್ಲಿ ಜನಪ್ರಿಯವಾಗಿದೆ. ಕೊಡಗಿನ ಕಾಫಿ ಏಕೆ ಪರಿಚಯವಾಗಿಲ್ಲ’ ಎಂದು ಪ್ರಶ್ನಿಸಿದರು.

‘ರಾಹುಲ್‌ ಗಾಂಧಿಗೆ ಅನುಭವ ಕೊರತೆ’
ಬೆಂಗಳೂರು:
‘ಸಾಮಾಜಿಕ ಜಾಲತಾಣ ಬಳಕೆ ಕುರಿತು ಪ್ರಧಾನಿ ಮೋದಿ ಅವರ ಅಭಿಪ್ರಾಯಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ನೀಡಿರುವ ಹೇಳಿಕೆ ಅವರ ಅನುಭವ ಕೊರತೆಯನ್ನು ತೋರಿಸುತ್ತದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್‌ ವ್ಯಂಗ್ಯ ಮಾಡಿದರು.

‘ಪ್ರಧಾನಿ ಮೋದಿ ಅವರು ಎಲ್ಲ ಸಚಿವರು ಮತ್ತು ಅಧಿಕಾರಿಗಳಿಗೆ ಪ್ರೇರಣೆ ನೀಡುವಂತಹ ವ್ಯಕ್ತಿ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯದೆ, ಜನರ ಸೇವೆಗೆ ಹೆಚ್ಚಿನ ಸಮಯ ಮೀಸಲಿಡಿ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು. ಅಲಿ ಆಸ್ಗರ್‌ ರಸ್ತೆಯಲ್ಲಿ ತಮ್ಮ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಬೋಜೇಗೌಡ ಕಾಫಿ ಮಂಡಳಿ ಅಧ್ಯಕ್ಷ
‘ಚಿಕ್ಕಮಗಳೂರಿನ ಎಂ.ಎಸ್. ಬೋಜೇಗೌಡ ಅವರನ್ನು ಸದ್ಯದಲ್ಲಿಯೇ ಕಾಫಿ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗುವುದು. ಈಗಾಗಲೇ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ’ ಎಂದು ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT