ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚೆತ್ತ ಬಿಜೆಪಿ: ಸಾಮೂಹಿಕ ನಾಯಕತ್ವದತ್ತ ಚಿತ್ತ

Last Updated 18 ಅಕ್ಟೋಬರ್ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: ವ್ಯಕ್ತಿ ಪ್ರಭಾವಳಿಯಿಂದ ಪಕ್ಷವನ್ನು ಬಿಡಿಸುವ ಬಗ್ಗೆ ಆಡಳಿತಾರೂಢ ಬಿಜೆಪಿ ಒಳಗೊಳಗೇ ಕಾರ್ಯತಂತ್ರ ರೂಪಿಸುತ್ತಿದೆ. ಬಿ.ಎಸ್. ಯಡಿಯೂರಪ್ಪ ಅವರು ಜೈಲು ಸೇರಿದ ನಂತರ ಈ ಕುರಿತು ಚಿಂತನೆ ಹೆಚ್ಚು ಬಲ ಪಡೆದುಕೊಂಡಿದೆ.

ಯಡಿಯೂರಪ್ಪ ಅವರ ಕಾನೂನು ಹೋರಾಟಕ್ಕೆ ಪೂರ್ಣ ಬೆಂಬಲ ನೀಡುತ್ತಲೇ ಪಕ್ಷವನ್ನು ವ್ಯಕ್ತಿ ಹಿಡಿತದಿಂದ ಬಿಡಿಸಿ ಸಂಘಟನೆಯ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಗಳು ಸಾಗಿವೆ.

ವ್ಯಕ್ತಿ ಮತ್ತು ಜಾತಿಯ ಬಿಗಿ ಮುಷ್ಟಿಯಿಂದ ಪಕ್ಷವನ್ನು ಪಾರು ಮಾಡಿ, ಸಾಮೂಹಿಕ ನಾಯಕತ್ವಕ್ಕೆ ಒತ್ತು ಕೊಟ್ಟು, ತತ್ವ-ಸಿದ್ಧಾಂತದ ನೆಲೆಗಟ್ಟಿನ ಮೇಲೆ ಪಕ್ಷ ಕಟ್ಟುವ ಲೆಕ್ಕಾಚಾರಗಳು ಆರಂಭವಾಗಿವೆ.

ಯಡಿಯೂರಪ್ಪ ರಾಜೀನಾಮೆ ನಂತರ ಶಾಸಕಾಂಗ ಪಕ್ಷಕ್ಕೆ ಹೊಸ ನಾಯಕನ ಆಯ್ಕೆ ಸಂದರ್ಭದಲ್ಲಿ ಪಕ್ಷ ಬಹುತೇಕ ಇಬ್ಭಾಗವಾಗಿತ್ತು. ಇದುವರೆಗೂ ಆ ಕರಿನೆರಳಿನಿಂದ ಪಕ್ಷ ಹೊರಬಂದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಾದರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಇದಕ್ಕೆ ಪೂರಕವಾಗಿ ಪಕ್ಷದಲ್ಲಿಯೂ ಕೆಲ ಕಾರ್ಯಕ್ರಮ ರೂಪಿಸಲು ಚಿಂತನೆ ನಡೆದಿದೆ ಎಂದು ಗೊತ್ತಾಗಿದೆ.

ಗುಂಪುಗಾರಿಕೆಯನ್ನು ದೂರ ಮಾಡಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟು ಮೂಡಿಸುವ ಬಗ್ಗೆಯೂ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಸಚಿವರನ್ನು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಕಡೆಗೆ ಹೆಚ್ಚು ತೊಡಗಿಸಿಕೊಳ್ಳುವ ಹಾಗೆ ಮಾಡಲು ಪ್ರಯತ್ನಿಸಲಾಗುತ್ತಿದೆ.

ಮುಂಬರುವ ಎಲ್ಲ ಚುನಾವಣೆಗಳನ್ನೂ ಸಾಮೂಹಿಕ ನಾಯಕತ್ವದ ಮೇಲೆಯೇ ಎದುರಿಸಲು ನಿರ್ಧರಿಸಿದ್ದು, ಜಾತಿ ಆಧಾರದ ಮೇಲೆ ಪಕ್ಷ ಕಟ್ಟುವ ಸಾಹಸಕ್ಕೆ ಕೈಹಾಕುವುದು ಬೇಡ ಎನ್ನುವ ತೀರ್ಮಾನಕ್ಕೆ ಪಕ್ಷದ ಮುಖಂಡರು ಬಂದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಯಾವುದೇ ಒಂದು ಜಾತಿಯನ್ನು ತಲೆ ಮೇಲೆ ಕೂರಿಸಿಕೊಂಡು ಉಳಿದ ಸಮುದಾಯಗಳ ಕಣ್ಣು ಕಿಸುರಿಗೆ ಒಳಗಾಗುವುದು ಸರಿಯಲ್ಲ. ಎಲ್ಲ ಜಾತಿ- ಜನಾಂಗಗಳನ್ನು ಒಟ್ಟಿಗೆ ಕರೆದೊಯ್ಯುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪಕ್ಷ ಬದಲಾವಣೆಗೆ ತೆರೆದುಕೊಳ್ಳುವ ಅಗತ್ಯ ಇದೆ ಎಂಬುದು ಮುಖಂಡರಿಗೆ ಮನವರಿಕೆ ಆಗಿದೆ ಎಂದು ಹಿರಿಯ ಕಾರ್ಯಕರ್ತರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT