ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಗುತ್ತಿಗೆದಾರರಿಗೆ ಸಕಾಲಕ್ಕೆ ಹಣ

ವಾಟ್ಸ್ ಆ್ಯಪ್‌ ಮೂಲಕ ನಿತ್ಯದ ಹಾಜರಾತಿ ಸಲ್ಲಿಸಲು ಸೂಚನೆ
Last Updated 27 ಏಪ್ರಿಲ್ 2015, 20:02 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಿಂದ ಕಸದ ಗುತ್ತಿಗೆದಾರರಿಗೆ ಇನ್ನುಮುಂದೆ ಸಕಾಲಕ್ಕೆ ಹಣ ಪಾವತಿ ಮಾಡಲಾಗುವುದು. ಆದರೆ, ಕಸ ವಿಲೇವಾರಿಯಲ್ಲಿ ವಿಫಲವಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಜಿ.ಕುಮಾರ್‌ ನಾಯಕ್‌ ಎಚ್ಚರಿಕೆ ನೀಡಿದರು.

ಮಲ್ಲೇಶ್ವರದ ಐ.ಪಿ.ಪಿ ಕೇಂದ್ರದಲ್ಲಿ ಸೋಮವಾರ ಕರೆಯಲಾಗಿದ್ದ ಕಸದ ಗುತ್ತಿಗೆದಾರರ ಸಭೆಯಲ್ಲಿ ಅವರು ಮಾತನಾಡಿದರು.
‘ನಗರದ ಕೆಲವು ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಕಪ್ಪು ಸ್ಥಳಗಳು ದಿನೇ ದಿನೇ ಹೆಚ್ಚಾಗುತ್ತಿವೆ. ರಸ್ತೆಗಳನ್ನು ಗುಡಿಸುವ ಕೆಲಸ ಕೂಡ ಸರಿಯಾಗಿ ನಡೆಯುತ್ತಿಲ್ಲ. ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಆದ್ದರಿಂದ ತಮಗೆ ವಹಿಸಿಕೊಡಲಾದ ವಾರ್ಡ್‌ಗಳು ಸ್ವಚ್ಛವಾಗಿ ಇರುವಂತೆ ನೋಡಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಟೆಂಡರ್‌ನಲ್ಲಿ ನಮೂದಿಸಿದ ಎಲ್ಲ ನಿಯಮ ಪಾಲನೆ ಮಾಡಬೇಕು. ವಾರ್ಡ್ ಮಟ್ಟದಲ್ಲಿ ನಿಗದಿಪಡಿಸಿದ ಸಂಖ್ಯೆಯಷ್ಟು ವಾಹನ ಮತ್ತು ಪೌರಕಾರ್ಮಿಕರನ್ನು ನಿಯೋಜಿಸಬೇಕು.  ಪೌರಕಾರ್ಮಿಕರಿಗೆ ಕೈ-ಚೀಲ, ಜಾಕೆಟ್ ಮತ್ತು ಗಮ್ ಬೂಟ್‌ಗಳನ್ನು ಕಡ್ಡಾಯವಾಗಿ ನೀಡಬೇಕು’ ಎಂದು ತಿಳಿಸಿದರು.

‘ರಸ್ತೆ ಬದಿ ಮೋರಿಗಳಲ್ಲಿ ಬಿದ್ದಿರುವ ಕಸವನ್ನು ಕೂಡ ಗುತ್ತಿಗೆದಾರರೇ ತೆಗೆಯಬೇಕು. ಈಗ ಮಳೆಗಾಲ ಪ್ರಾರಂಭವಾಗಿದ್ದು, ಮೋರಿಗಳಲ್ಲಿ ಬಿದ್ದಿರುವ ಕಸದಿಂದ ನೀರು ಸರಾಗವಾಗಿ ಹರಿಯದೇ ಹಲವಾರು ಸಮಸ್ಯೆಗಳು ಉದ್ಭವವಾಗುತ್ತಿವೆ’ ಎಂದು ಹೇಳಿದರು.

‘ಕಳೆದ ವಾರ ಕನಕಪುರ ರಸ್ತೆಯಲ್ಲಿ ಅಸಮರ್ಪಕ ಕಸ ವಿಲೇವಾರಿ ಸಂಬಂಧ ಕರ್ತವ್ಯ ಲೋಪ ಎಸಗಿದ್ದ ಇಬ್ಬರು ಎಂಜಿನಿಯರ್‌ಗಳನ್ನು ಆಮಾನತು ಮಾಡಲಾಗಿದೆ. ಇದನ್ನು ಅರಿತು ಎಲ್ಲರೂ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್‌, ಪ್ರತಿದಿನ ಬೆಳಿಗ್ಗೆ 6.30ಕ್ಕೆ ಸಂಬಂಧಪಟ್ಟ ಸಹಾಯಕ ಎಂಜಿನಿಯರ್‌ಗಳು ಹಾಗೂ ಆರೋಗ್ಯ ಪರಿವೀಕ್ಷಕರು, ಪೌರಕಾರ್ಮಿಕರ ಹಾಜರಾತಿ, ತಳ್ಳುವ ಗಾಡಿ ಮತ್ತು ಆಟೋ ಟಿಪ್ಪರ್‌ಗಳ ವಿವರ ತೆಗೆದುಕೊಂಡು ವಾಟ್ಸ್- ಆ್ಯಪ್‌ ಮುಖಾಂತರ ಮೇಲಧಿಕಾರಿಗಳಿಗೆ ಕಳುಹಿಸಬೇಕು ಎಂದು ಸೂಚನೆ ನೀಡಿದರು. ವಿಶೇಷ ಆಯುಕ್ತ ದರ್ಪಣ್ ಜೈನ್ ಉಪಸ್ಥಿತರಿದ್ದರು.
*
58 ಸಿಬ್ಬಂದಿಗೆ ನೋಟಿಸ್‌
ಬಿಬಿಎಂಪಿಯ ಕೆಲವು ಕಚೇರಿಗಳಿಗೆ ಸೋಮವಾರ ಮುನ್ಸೂಚನೆ ಇಲ್ಲದೆ ಭೇಟಿ ನೀಡಿದ ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್‌, ಕಚೇರಿಯಲ್ಲಿ ಇರದಿದ್ದ 58 ಸಿಬ್ಬಂದಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಸೂಕ್ತ ವಿವರಣೆ ನೀಡದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
*
ಗುತ್ತಿಗೆದಾರರಿಗೆ ಬಿಬಿಎಂಪಿ ಸಕಾಲಕ್ಕೆ ಹಣ ಪಾವತಿ ಮಾಡಲಿದೆ. ಆದರೆ, ಕಸ ವಿಲೇವಾರಿಯಲ್ಲಿ ಏರು–ಪೇರು ಉಂಟಾದರೆ ಅಷ್ಟೇ ಉಗ್ರ ಕ್ರಮ ಕೈಗೊಳ್ಳಲಿದೆ.
- ಜಿ.ಕುಮಾರ್‌ ನಾಯಕ್‌,
ಬಿಬಿಎಂಪಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT