ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಬಸ್‌ ಚಾಲನೆ: ಶಾಸಕರ ಕಚೇರಿಗೆ ನುಗ್ಗಿದ ಬಸ್‌

Last Updated 5 ಅಕ್ಟೋಬರ್ 2017, 19:41 IST
ಅಕ್ಷರ ಗಾತ್ರ

ಬೆಂಗಳೂರು: ಕುಡಿದ ಅಮಲಿನಲ್ಲಿದ್ದ ಚಾಲಕ ಚಂದ್ರ ಎಂಬಾತ, ಗುರುವಾರ ಹವಾನಿಯಂತ್ರಿತ ಲಕ್ಸುರಿ ಸ್ಲೀಪರ್‌ ಬಸ್‌ ಅಡ್ಡಾದಿಡ್ಡಿ ಚಲಾಯಿಸಿದ್ದರಿಂದ ಎರಡು ಆಟೊ ಹಾಗೂ ಎರಡು ಕಾರುಗಳು ಜಖಂಗೊಂಡಿವೆ. ಚಾಮರಾಜಪೇಟೆಯ ಶಾಸಕ ಜಮೀರ್‌ ಅಹಮದ್‌ ಅವರ ಕಚೇರಿಗೂ ಹಾನಿಯಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಪೇಟೆ ಸಂಚಾರ ಠಾಣೆಯ ಪೊಲೀಸರು, ಕುಡಿದು ವಾಹನ ಚಾಲನೆ ಹಾಗೂ ನಿರ್ಲಕ್ಷ್ಯ ಆರೋಪದಡಿ ಚಂದ್ರನನ್ನು ಬಂಧಿಸಿ ಬಸ್‌ ಜಪ್ತಿ ಮಾಡಿದ್ದಾರೆ.

‘ಬಂಟ್ವಾಳದ ಚಂದ್ರ, ನಗರದ ಸೌಮ್ಯಾ ಟ್ರಾವೆಲ್ಸ್‌ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಉಡುಪಿಯಲ್ಲಿದ್ದ ಕಾರ್ಯಕ್ರಮವೊಂದಕ್ಕೆ ಹೋಗಲು ನಗರದ ಉದ್ಯಮಿಯೊಬ್ಬರು ಬಸ್‌  ಕಾಯ್ದಿರಿಸಿದ್ದರು. ನಿಗದಿಯಂತೆ ಗುರುವಾರ ರಾತ್ರಿ ಜಾಲಹಳ್ಳಿ ಕ್ರಾಸ್‌ನಿಂದ ಪ್ರಯಾಣಿಕರನ್ನು  ಹತ್ತಿಸಿಕೊಂಡು ಉಡುಪಿಗೆ ಹೋಗಬೇಕಿತ್ತು.’

‘ಬಸ್‌ ಚಲಾಯಿಸಿಕೊಂಡು ಹೋಗಲು ಟ್ರಾವೆಲ್ಸ್‌ ಮಾಲೀಕರು, ಚಂದ್ರನಿಗೆ ಹೇಳಿದ್ದರು. ಆತ ರಾತ್ರಿ 10 ಗಂಟೆಯ ಸುಮಾರಿಗೆ ವಿಜಯಾ ಬ್ಯಾಂಕ್‌ ಕಾಲೊನಿ ಕಚೇರಿಯಿಂದ ಬಸ್‌ (ಕೆಎ–20, ಡಿ–6007) ತೆಗೆದುಕೊಂಡು ಜಾಲಹಳ್ಳಿ ಕ್ರಾಸ್‌ನತ್ತ ಹೊರಟಿದ್ದ. ಕಂಠಪೂರ್ತಿ ಮದ್ಯ ಕುಡಿದಿದ್ದ ಆತ, ಅದರ ಅಮಲಿನಲ್ಲಿ ಬಸ್‌ ಚಲಾಯಿಸುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

‘ಚಾಮರಾಜಪೇಟೆ ಬಳಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಬಸ್‌ ಅಡ್ಡಾದಿಡ್ಡಿಯಾಗಿ ಚಲಿಸಲಾರಂಭಿಸಿತ್ತು. ಕುಳಿತ ಆಸನದಲ್ಲಿ ಆತ ಕುಸಿದುಬಿದ್ದಿದ್ದ. ಬಳಿಕ ಬಸ್‌, ಎದುರಿಗಿದ್ದ ಆಟೊ ಹಾಗೂ ಕಾರಿಗೆ ಗುದ್ದಿತ್ತು. ಅದಾದ ನಂತರ ಪಕ್ಕದ ಫುಟ್‌ಪಾತ್‌ಗೆ ಹತ್ತಿ, ಅದರ ಪಕ್ಕವಿದ್ದ  ಶಾಸಕರ ಕಚೇರಿಗೆ ನುಗ್ಗಿತು’ ಎಂದು ವಿವರಿಸಿದರು.

‘ಜಖಂಗೊಂಡ ಒಂದು ಕಾರು ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಿಗೆ ಸೇರಿದ್ದು’ ಎಂದು ಪೊಲೀಸರು ವಿವರಿಸಿದರು.

ಮೂವರಿಗೆ ಗಾಯ: ‘ಘಟನೆಯಲ್ಲಿ ಆಟೊ ಹಾಗೂ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಆಲ್ಕೋಮೀಟರ್‌ ಮೂಲಕ ಆರೋಪಿಯನ್ನು ತಪಾಸಣೆ ನಡೆಸಿದಾಗ ಆತನ ದೇಹದಲ್ಲಿ 116 ಎಂ.ಎಲ್‌ ಮದ್ಯದ ಪ್ರಮಾಣ ಕಂಡುಬಂತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT