ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಬಿ.ಕೋಳಿವಾಡ ಪುತ್ರ ಬಿಜೆಪಿಗೆ ?

ಆರ್‌.ಆರ್‌.ನಗರದತ್ತ ಎಸ್‌.ಎಂ.ಕೆ ಪುತ್ರಿ ಶಾಂಭವಿ ಚಿತ್ತ
Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಪುತ್ರ ಪ್ರಕಾಶ್‌ ಕೋಳಿವಾಡ ಬಿಜೆಪಿಗೆ ಸೇರುವ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಅಥವಾ ಅವರ ಕುಟುಂಬದ ಸದಸ್ಯರು ಪಕ್ಷಗಳನ್ನು ಬದಲಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಅದರಲ್ಲಿ ಕೋಳಿವಾಡ ಪುತ್ರ ಅವರೂ ಪ್ರಕಾಶ್‌ ಪ್ರಮುಖರು.

ಕೋಳಿವಾಡ  ಪ್ರಸ್ತುತ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಅದೇ ಕ್ಷೇತ್ರದಿಂದ ಪ್ರಕಾಶ್‌ ಸ್ಪರ್ಧಿಸುವ ಸಾಧ್ಯತೆ ಇದೆ. 2004  ಮತ್ತು 2008 ರ ಚುನಾವಣೆಯಲ್ಲಿ ಬಿಜೆಪಿಯಿಂದ ಜಿ.ಶಿವಣ್ಣ ಗೆದ್ದಿದ್ದರು. 2013 ರ ಚುನಾವಣೆಯಲ್ಲಿ ಕೋಳಿವಾಡ ಪಕ್ಷೇತರ ಅಭ್ಯರ್ಥಿ ಆರ್‌.ಶಂಕರ್ ವಿರುದ್ಧ ಗೆಲುವು ಸಾಧಿಸಿದ್ದರು. ಕೋಳಿವಾಡ ನಾಲ್ಕು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಹಾದಿ ಸುಗಮ ಮಾಡಲಿದ್ದಾರೆ ಎನ್ನಲಾಗಿದೆ.

ರಾಣೆಬೆನ್ನೂರು ಲಿಂಗಾಯಿತ ಮತದಾರರೇ ನಿರ್ಣಾಯಕವಾಗಿರುವ ವಿಧಾನಸಭಾ ಕ್ಷೇತ್ರ. ಇಲ್ಲಿ ಬಿಜೆಪಿ ಪ್ರಬಲವಾಗಿದೆ. ಬಿ.ಎಸ್‌. ಯಡಿಯೂರಪ್ಪ ಉತ್ತರ ಕರ್ನಾಟಕ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಸೂಚನೆ ವರಿಷ್ಠರಿಂದ ಬಂದಾಗ ರಾಣೆಬೆನ್ನೂರು ಕ್ಷೇತ್ರವೂ ಅವರ ಪರಿಶೀಲನೆಯಲ್ಲಿತ್ತು. ಒಂದು ವೇಳೆ ತಾವು ಸ್ಪರ್ಧಿಸಲು ಸಾಧ್ಯವಾಗದಿದ್ದರೆ, ತಮ್ಮ ಪುತ್ರ ರಾಘವೇಂದ್ರ ಅವರನ್ನು ಆ ಕ್ಷೇತ್ರದಿಂದ ಕಣಕ್ಕೆ ಇಳಿಸುವ ಉದ್ದೇಶ ಹೊಂದಿದ್ದರು. ಈ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ಪ್ರಭಾವ ಸಾಕಷ್ಟಿದೆ.  ಈ ಹಂತದಲ್ಲಿ ಕೋಳಿವಾಡ ಪುತ್ರ ಬಿಜೆಪಿ ಸೇರಿ ಅಲ್ಲಿಂದ ಸ್ಪರ್ಧಿಸುವ ಒಲವು ವ್ಯಕ್ತಪಡಿಸಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಪ್ರಕಾಶ್‌ ಕೋಳಿವಾಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಬಿಜೆಪಿ ನಾಯಕರು ಮುಕ್ತ ಮನಸ್ಸು ಹೊಂದಿದ್ದಾರೆ ಎನ್ನಲಾಗಿದೆ.

ಶಾಂಭವಿ ರಾಜಕೀಯ ಪ್ರವೇಶ ಸಿದ್ಧತೆ ?:
ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಪುತ್ರಿ ಶಾಂಭವಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪ್ರವೇಶ ಮಾಡಲಿದ್ದು, ಬೆಂಗಳೂರು ನಗರದಲ್ಲಿ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಒಕ್ಕಲಿಗರ ಸಂಖ್ಯೆ ಅಧಿಕವಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಕೃಷ್ಣ ಅವರು ಮಂಡ್ಯ ಜಿಲ್ಲೆಯಲ್ಲಿ ಹಿಡಿತ ಹೊಂದಿರುವುದರಿಂದ ಆ ಜಿಲ್ಲೆಯಲ್ಲಿ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸೂಚಿಸುವ ಸಾಧ್ಯತೆ ಇದೆ. ಅಂತಿಮವಾಗಿ ವರಿಷ್ಠರು ಈ ಬಗ್ಗೆ ತೀರ್ಮಾನಿಸಲಿದ್ದಾರೆ ಎನ್ನಲಾಗಿದೆ.

ಇದೇ ಕ್ಷೇತ್ರದಿಂದ ಚಲನಚಿತ್ರ ನಟ ಗಣೇಶ್‌ ಪತ್ನಿ ಶಿಲ್ಪಾ ಗಣೇಶ್‌ ಅವರೂ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ. ಕಾಂಗ್ರೆಸ್‌ ಶಾಸಕ ಮುನಿರತ್ನಂ ವಿರುದ್ಧ ಸೆಣಸಲು ಜೆಡಿಎಸ್‌ನಿಂದ ಪ್ರಜ್ವಲ್‌ ರೇವಣ್ಣ ಅವರೂ ಆಸಕ್ತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT