ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವೇ ತಾಸುಗಳಲ್ಲಿ ಸಿಕ್ಕಿಬಿದ್ದ ಆರೋಪಿಗಳು

Last Updated 21 ಫೆಬ್ರುವರಿ 2012, 20:10 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರದ ಮನೆಯೊಂದರಲ್ಲಿ ಸೋಮವಾರ ಹಾಡಹಗಲೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದ ದುಷ್ಕರ್ಮಿಗಳ ಗುಂಪಿನ ಸದಸ್ಯರ ಮೇಲೆ ಘಟನೆ ನಡೆದ ಕೆಲವೇ ತಾಸುಗಳಲ್ಲಿ ಹೆಣ್ಣೂರು ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.

ತಮಿಳುನಾಡು ಮೂಲದ ರಮೇಶ್ ಅಲಿಯಾಸ್ ಏಕಾಂಬರಂ (27) ಮತ್ತು ಮುರಳಿ (22) ಬಂಧಿತರು. ಆರೋಪಿಗಳು ಮಲ್ಲೇಶ್ವರ 13ನೇ ಅಡ್ಡರಸ್ತೆಯ `ಶ್ರೀ~ ಅಪಾರ್ಟ್‌ಮೆಂಟ್ ನಿವಾಸಿ ಜಯವಂತಿ ಹಿರಿಯೂರು (60) ಎಂಬುವರ ಮನೆಯಲ್ಲಿ ದರೋಡೆ ಮಾಡಿದ್ದರು.

ಶಾಲೆ ನಡೆಸುತ್ತಿರುವ ಜಯವಂತಿ ಅವರು ಮಕ್ಕಳಾದ ಯಶವಂತ್ ಮತ್ತು ಸತ್ಯವ್ರತ ಅವರ ಜತೆ ಅಪಾರ್ಟ್‌ಮೆಂಟ್‌ನ ನೆಲ ಮಹಡಿಯ ಫ್ಲಾಟ್‌ನಲ್ಲಿ ವಾಸವಾಗಿದ್ದಾರೆ. ಏಕಾಂಬರಂ ಮತ್ತು ಸಹಚರರು ಸೋಮವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಅವರ ಮನೆಯ ಬಳಿ ಬಂದು ಬೆಲ್ ಮಾಡುತ್ತಿದ್ದಂತೆ ಯಶವಂತ್ ಬಾಗಿಲು ತೆರೆದಿದ್ದಾರೆ.

ಆಗ ಏಕಾಏಕಿ ಒಳ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬೆದರಿಸಿ ಜಯವಂತಿ ಮತ್ತು ಅವರ ಇಬ್ಬರು ಮಕ್ಕಳನ್ನೂ ಹಗ್ಗದಿಂದ ಕಟ್ಟಿ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ. ನಂತರ ಅಲ್ಮೇರಾದಲ್ಲಿದ್ದ 200 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಸ್ತುಗಳು, ಗಂಧದ ವಿಗ್ರಹಗಳು ಹಾಗೂ ವಿದೇಶಿ ಕರೆನ್ಸಿ ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಕೃತ್ಯ ಎಸಗಿದ ಬಳಿಕ ಆರೋಪಿಗಳು ಹೆಣ್ಣೂರು ಸಮೀಪದ ಪ್ರಕೃತಿಲೇಔಟ್‌ನ ನಿರ್ಜನ ಪ್ರದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದರು. ಪ್ರಕೃತಿಲೇಔಟ್‌ನಲ್ಲಿ ರಾತ್ರಿ ಗಸ್ತಿನಲ್ಲಿದ್ದ ಹೆಣ್ಣೂರು ಠಾಣೆ ಇನ್‌ಸ್ಪೆಕ್ಟರ್ ಜಿ.ಪ್ರಭಾಕರ್, ಕಾನ್‌ಸ್ಟೇಬಲ್‌ಗಳಾದ ಕೆಂಚಪ್ಪ ಡಿ.ಕುಳ್ಳೂರು, ರಮೇಶ್‌ನಾಯ್ಕ, ರಮೇಶ್, ಮಧುಕುಮಾರ್ ಅವರ ತಂಡ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಏಕಾಂಬರಂ ಸಹಚರರನ್ನು ಸುತ್ತುವರಿದು ಶರಣಾಗುವಂತೆ ಸೂಚಿಸಿತು.

ಆದರೆ, ಆರೋಪಿಗಳು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಿ ಹಾಗೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಈ ವೇಳೆ ಇನ್‌ಸ್ಪೆಕ್ಟರ್ ಪ್ರಭಾಕರ್ ಆರೋಪಿಗಳ ಮೇಲೆ ಸರ್ವಿಸ್ ಪಿಸ್ತೂಲ್‌ನಿಂದ ಐದು ಸುತ್ತು ಗುಂಡು ಹಾರಿಸಿದರು. ಗುಂಡೇಟಿನಿಂದ ಗಾಯಗೊಂಡು ಕುಸಿದು ಬಿದ್ದ ಏಕಾಂಬರಂ ಮತ್ತು ಮುರಳಿಯನ್ನು ಸಿಬ್ಬಂದಿ ಬಂಧಿಸಿದರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರು ದರೋಡೆ ಮಾಡಿದ್ದ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ಇತರೆ ಆರೋಪಿಗಳಾದ ಆಯು ಹಾಗೂ ರಾಜನ್ ಎಂಬುವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಮೇಶ್‌ನಾಯ್ಕ, ಕೆಂಚಪ್ಪ ಮತ್ತು ರಮೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಾದ ಏಕಾಂಬರಂ ಹಾಗೂ ಮುರಳಿಯ ಬಲಗಾಲಿಗೆ ಗುಂಡು ಹೊಕ್ಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೃತ್ತಿಪರರು: `ಪ್ರಕರಣದ ಪ್ರಮುಖ ಆರೋಪಿ ಏಕಾಂಬರಂ ಎಂ.ಎಸ್ಸಿ ಪದವೀಧರ. ವೃತ್ತಿಪರ ಡಕಾಯಿತರಾಗಿದ್ದ ಆರೋಪಿಗಳು ತಮಿಳುನಾಡು ಸೇರಿದಂತೆ ಹಲವೆಡೆ ಅಪರಾಧ ಕೃತ್ಯಗಳನ್ನು ಎಸಗಿದ್ದಾರೆ~ ಎಂದು ಕೆ.ಆರ್.ಪುರ ಉಪ ವಿಭಾಗದ ಎಸಿಪಿ ಡಾ.ಡಿ.ನಾರಾಯಣಸ್ವಾಮಿ ಅವರು  `ಪ್ರಜಾವಾಣಿ~ಗೆ ತಿಳಿಸಿದರು.

ಆರೋಪಿಗಳು ಆಗಾಗ ತಮಿಳುನಾಡಿನಿಂದ ಬೆಂಗಳೂರಿಗೆ  ಬಂದು ಡಕಾಯಿತಿ ಮಾಡಿ ದೋಚಿದ  ವಸ್ತುಗಳ ಸಮೇತ ವಾಪಸ್ ಹೋಗುತ್ತಿದ್ದರು. ನಗರದಲ್ಲಿ ದೋಚಿದ ಆಭರಣಗಳನ್ನು ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದರು~ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT