ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ ಕಟ್ಟಡದಿಂದ ಬಿದ್ದ ಆರೋಪಿ

ಪೊಲೀಸರಿಂದ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿ ಗಾಯ
Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೋಕ್ಸೊ ಪ್ರಕರಣದ ಆರೋಪಿಯು ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಸಿಟಿ ಸಿವಿಲ್‌ ಕೋರ್ಟ್ ಕಟ್ಟಡದ 4ನೇ ಮಹಡಿಯಿಂದ ಬಿದ್ದು ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

ಬಾಗಲಗುಂಟೆ ಠಾಣೆ ವ್ಯಾಪ್ತಿಯ ಹದಿನೈದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ವಿಕ್ಕಿ ಅಲಿಯಾಸ್‌ ನರಸಿಂಹಮೂರ್ತಿ (21) ಎಂಬಾತನನ್ನು ಬಂಧಿಸಿದ್ದ ಪೊಲೀಸರು, 55ನೇ ಸಿಟಿ ಸಿವಿಲ್‌ ನ್ಯಾಯಾಲಯಕ್ಕೆ ಮಧ್ಯಾಹ್ನ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆತನನ್ನು 12 ದಿನಗಳವರೆಗೆ ನ್ಯಾಯಾಂಗ  ಬಂಧನಕ್ಕೆ ಒಪ್ಪಿಸಿದರು.

ವಿಚಾರಣೆ ಮುಗಿದ ಬಳಿಕ ಸಂಜೆ 5.30ರ ಸುಮಾರಿಗೆ ಪೊಲೀಸರು, ವಿಕ್ಕಿಯನ್ನು ಕರೆದುಕೊಂಡು ನ್ಯಾಯಾಲಯ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಇಳಿಯುತ್ತಿದ್ದರು. ಈ ವೇಳೆ ಅವರಿಂದ ತಪ್ಪಿಸಿಕೊಂಡ ಆರೋಪಿಯು ಓಡಿ ಹೋಗಲು ಯತ್ನಿಸಿ ನಾಲ್ಕನೇ ಮಹಡಿಯಿಂದ ಆಯತಪ್ಪಿ ಮೂರನೇ ಮಹಡಿಗೆ ಬಿದ್ದಿದ್ದ. ಅದರಿಂದ ಕಾಲು, ಕೈಗೆ ತೀವ್ರ ಪೆಟ್ಟು ಬಿತ್ತು. ನರಳಾಡುತ್ತಿದ್ದ ಆತನನ್ನು ಪೊಲೀಸರು, ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು.

ಮತ್ತೊಂದು ಪ್ರಕರಣ ದಾಖಲು: ‘ಬಾಗಲಗುಂಟೆ ಪೊಲೀಸರು ಆರೋಪಿಯನ್ನು  ನ್ಯಾಯಾಲಯದ ನಿರ್ದೇಶನದಂತೆ ಜೈಲಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಹೀಗಾಗಿ ಆತನ ವಿರುದ್ಧ ‘ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಯತ್ನ (ಐಪಿಸಿ 224)’ ಆರೋಪದಡಿ ಹಲಸೂರು ಗೇಟ್‌್ ಠಾಣೆಯಲ್ಲಿ  ಪ್ರಕರಣ ದಾಖಲಿಸಿದ್ದೇವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

ಮೊದಲನೇ ಆರೋಪಿ: ‘ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ವಿಕ್ಕಿಯು ಮೊದಲ ಆರೋಪಿ. ಬಾಲಕಿಯನ್ನು ಅಪಹರಿಸಿ ಆಂಧ್ರಪ್ರದೇಶದ ಮಡಕಶಿರ ತಾಲ್ಲೂಕಿನ ಮನೆಯೊಂದರಲ್ಲಿ ಕೂಡಿಟ್ಟು ಅತ್ಯಾಚಾರ ಎಸಗಿದ್ದ’ ಎಂದು ಬಾಗಲಗುಂಟೆ ಪೊಲೀಸರು ತಿಳಿಸಿದರು.

‘ಫೆ.9ರಂದು ಪೋಷಕರು ನೀಡಿದ್ದ ದೂರಿನನ್ವಯ  16 ವರ್ಷದ ಮೂವರು ಬಾಲಕರನ್ನು  ಬುಧವಾರ (ಫೆ. 15) ಬಂಧಿಸಿದ್ದೆವು. ಆದರೆ, ವಿಕ್ಕಿ ತಲೆಮರೆಸಿಕೊಂಡಿದ್ದ. ಆತನನ್ನು ಶುಕ್ರವಾರವಷ್ಟೇ ಬಂಧಿಸಿದ್ದೆವು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT