ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಮರುವಿಂಗಡಣೆ ಪಟ್ಟಿ ಸಲ್ಲಿಸುವಲ್ಲಿ ರಾಜ್ಯ ಸರ್ಕಾರ ವಿಳಂಬ:ಚುನಾವಣಾ ಆಯೋಗ

ಹೈಕೋರ್ಟ್‌ಗೆ ಮತ್ತೆ ಮನವಿ
Last Updated 28 ಮೇ 2018, 11:54 IST
ಅಕ್ಷರ ಗಾತ್ರ

ಬೆಂಗಳೂರು:  ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲು ಹಾಗೂ ಕ್ಷೇತ್ರ ಮರುವಿಂಗಡಣೆ ಪಟ್ಟಿ ಸಲ್ಲಿಸುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದ್ದು, ಈ ಕುರಿತು ಕೂಡಲೇ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‌ಗೆ ಮತ್ತೆ ಮನವಿ ಮಾಡಿದೆ.

ಈ ಕುರಿತಂತೆ ಆಯೋಗದ ಪರ ವಕೀಲರು ಸೋಮವಾರ ಹೈಕೋರ್ಟ್‌ನ ಮುಖ್ಯ‌ ನ್ಯಾಯಮೂರ್ತಿ ದಿನೇಶ್ ‌ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಮೌಖಿಕ ಮನವಿ ಮಾಡಿ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಕೋರಿದ್ದಾರೆ.

‘ಇದೇ ವರ್ಷದ ಸೆಪ್ಟೆಂಬರ್ ಹಾಗೂ 2019 ರ ಫೆಬ್ರವರಿ ಅಂತ್ಯದೊಳಗೆ ನಗರಸಭೆ, ಪಟ್ಟಣ ಪಂಚಾಯಿತಿ, ಕಾರ್ಪೊರೇಷನ್ ಒಳಗೊಂಡಂತೆ 116 ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದಿದ್ದು. ಮುಂದಿನ ಚುನಾವಣಾ ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆಯ ಪರಿಷ್ಕೃತ ಪಟ್ಟಿಯನ್ನು ಆಯೋಗವು ಒಂದು ವರ್ಷಕ್ಕೂ ಮೊದಲೇ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಈ ಕುರಿತು ನಾವು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಹಲವು ಬಾರಿ ಪತ್ರ ಬರೆದು ಕೋರಿಕೆ‌ ಸಲ್ಲಿಸಿದ್ದೇವೆ’ ಎಂದರು.

‘ಈ ಸಂಬಂಧ ರಾಜ್ಯ ಸರ್ಕಾರ 2018ರ ಫೆಬ್ರುವರಿ 12ರಂದು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ ಪಟ್ಟಿ ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ ‌ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಯೋಗದ ಪರ ವಕೀಲರು ನ್ಯಾಯಪೀಠಕ್ಕೆ ಅಕ್ಷೇಪಣೆ ಸಲ್ಲಿಸಿದರು.

‘ನಿರ್ಧರಿತ ಸಮಯದಲ್ಲಿ ಚುನಾವಣೆ ನಡೆಸಬೇಕಿರುವುದು ಆಯೋಗದ ಕರ್ತವ್ಯ. ಒಂದು ವೇಳೆ ಚುನಾವಣೆ ವಿಳಂಬವಾದರೆ,‌ ಅದು ಸಾಂವಿಧಾನಿಕ ಉಲ್ಲಂಘನೆಯಾಗಲಿದೆ. ಹೀಗಾಗಿ ಕೂಡಲೇ ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ಪಟ್ಟಿಯನ್ನು ನಮಗೆ ಒದಗಿಸುವಂತೆ ನಿರ್ದೇಶಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈ ಕುರಿತಂತೆ ನೀವು ಮಧ್ಯಂತರ ಅರ್ಜಿ ಸಲ್ಲಿಸಿ’ ಎಂದು ಚುನಾವಣಾ ಆಯೋಗದ ಪರ ವಕೀಲರಿಗೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT