ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ಧಣಿಗಳ ಮೇಲೆ ಐಟಿ ದಾಳಿಗೆ ಪೊಲೀಸರ ಅಡ್ಡಿ

Last Updated 4 ಸೆಪ್ಟೆಂಬರ್ 2011, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ ಪ್ರಮುಖ ವ್ಯಕ್ತಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಮೂರು ಬಾರಿ ನಡೆಸಿದ್ದ ಮಹತ್ವದ ದಾಳಿಗಳಿಗೆ ಸ್ಥಳೀಯ ಪೊಲೀಸರಿಂದಲೇ ಅಡ್ಡಿ ಎದುರಾಗಿತ್ತು ಎಂಬುದನ್ನು ಕೇಂದ್ರ ಸರ್ಕಾರದ ಮೂಲಗಳು ಬಹಿರಂಗಪಡಿಸಿವೆ.

2010ರ ಅಕ್ಟೋಬರ್‌ನಿಂದ 2011ರ ಫೆಬ್ರುವರಿವರೆಗಿನ ಅವಧಿಯಲ್ಲಿ ನಡೆದ ಈ ದಾಳಿಗಳಲ್ಲಿ ಪತ್ತೆಯಾದ ದಾಖಲೆಗಳು ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯ ಪ್ರಮುಖ ಆಧಾರವಾಗಿದ್ದವು. ಆದರೆ, ಈ ದಾಳಿಗಳ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ಸ್ಥಳೀಯ ಪೊಲೀಸರನ್ನು ನೆಚ್ಚಿಕೊಂಡಿದ್ದರೆ ಬರಿಗೈಲಿ ಮರಳಬೇಕಾಗಿತ್ತು ಎನ್ನುತ್ತವೆ ಅಧಿಕೃತ ಮೂಲಗಳು.

ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಮಹಾನಿರ್ದೇಶಕ ರಾಜೇಶ್ವರ ರಾವ್ ಅಕ್ರಮ ಗಣಿಗಾರಿಕೆ ಮಾಫಿಯಾದ ಪ್ರಮುಖರ ಮೇಲೆ ದಾಳಿಗೆ ಸಿದ್ಧತೆ ನಡೆಸಲು 2010ರ ಮಾರ್ಚ್‌ನಲ್ಲಿ ಹಿರಿಯ ಅಧಿಕಾರಿಗಳ ತಂಡವೊಂದನ್ನು ನಿಯೋಜಿಸಿದ್ದರು. ಇಲಾಖೆಯ ತನಿಖಾ ವಿಭಾಗದ ನಿರ್ದೇಶಕ ಪಿ.ಆರ್.ಧಯೆ, ಹೆಚ್ಚುವರಿ ನಿರ್ದೇಶಕ ಪಳನಿವೇಲು ರಾಜನ್ ಮತ್ತು ಜಂಟಿ ನಿರ್ದೇಶಕ ರಾಜಶೇಖರ್ ಈ ತಂಡದಲ್ಲಿದ್ದರು.

ಮಹಾನಿರ್ದೇಶಕರೂ ಸೇರಿದಂತೆ ನಾಲ್ವರು ಹಿರಿಯ ಅಧಿಕಾರಿಗಳು ಹಲವು ಆಯ್ದ ಅಧಿಕಾರಿಗಳ ಜೊತೆ ಸೇರಿ ಗಣಿಗಾರಿಕೆ ಮಾಫಿಯಾದ ಮೇಲಿನ ದಾಳಿಗೆ ಆರು ತಿಂಗಳ ಕಾಲ ಸಿದ್ಧತೆ ನಡೆಸಿದ್ದರು. ಅಕ್ರಮ ಗಣಿಗಾರಿಕೆ ಜಾಲವನ್ನು ನಿಯಂತ್ರಿಸುತ್ತಿದ್ದ ಪ್ರಮುಖರನ್ನು ಗುರುತಿಸಿದ್ದ ಈ ತಂಡ, ಅವರ ಮೇಲೆ ನಿಗಾ ಇಟ್ಟಿತ್ತು. ಬಳ್ಳಾರಿ ಜಿಲ್ಲೆಯ ಒಳಭಾಗದ ಹಲವು ಪ್ರದೇಶಗಳನ್ನು ದಾಳಿಗಾಗಿ ಗುರುತಿಸಲಾಗಿತ್ತು.

ದಾಳಿಗೆ ಗುರುತಿಸಿದ್ದ ವ್ಯಕ್ತಿಗಳು ಆಗಲೇ ಎಚ್ಚೆತ್ತುಕೊಂಡಿದ್ದರು. ಹಿಂದೆ ಇದೇ ಮಾಫಿಯಾ ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥ ಡಾ.ಯು.ವಿ.ಸಿಂಗ್ ಅವರಿಗೆ ಹಲವು ಬಾರಿ ಬೆದರಿಕೆ ಹಾಕಿತ್ತು. ಅದೇ ರೀತಿಯ ಬೆದರಿಗೆ ಐಟಿ ಅಧಿಕಾರಿಗಳಿಗೂ ಇತ್ತು.

ಶೂನ್ಯದಿಂದಲೇ ಕೆಲಸ ಆರಂಭ: ಖಾಲಿ ಕೈಯಲ್ಲಿ ಬಳ್ಳಾರಿಗೆ ಕಾಲಿರಿಸಿದ್ದ ಐಟಿ ಅಧಿಕಾರಿಗಳು ಶೂನ್ಯದಿಂದಲೇ ತಮ್ಮ ಕಾರ್ಯಾಚರಣೆ ಆರಂಭಿಸಿದ್ದರು. ಸ್ಥಳೀಯ ವ್ಯಕ್ತಿಗಳ ಸಹಕಾರದಿಂದ ಬಾಡಿಗೆ ಮನೆಯೊಂದನ್ನು ಪಡೆದ ಅವರು, ಮೊದಲಿಗೆ ಅಕ್ರಮ ಗಣಿಗಾರಿಕೆಯ ಪ್ರಭಾವಿ ವ್ಯಕ್ತಿಗಳನ್ನು ಪತ್ತೆಹಚ್ಚುವ ಕೆಲಸಕ್ಕೆ ಕೈ ಹಾಕಿದ್ದರು. ಬಲಾಢ್ಯ ಗಣಿ ಉದ್ಯಮಿಗಳ ಬಂಟರಾದ ಖಾರದಪುಡಿ ಮಹೇಶ್ ಮತ್ತು ಮಧುಕುಮಾರ್ ವರ್ಮ ಅವರನ್ನು ಈ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿದ್ದರು.

`ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಿದ್ದ ದಿನಗಳು ಬಹಳ ಕಷ್ಟಕರವಾಗಿದ್ದವು. ಆಗ ಹಲವು ದಿನಗಳ ಕಾಲ ನಾವು ನಮ್ಮ ಗುರಿಯತ್ತ ಕಣ್ಣಿಟ್ಟಿದ್ದೆವು. ವರ್ಮಾ ಆಗಾಗ ಹಳ್ಳಿಯೊಂದಕ್ಕೆ ಭೇಟಿ ನೀಡುತ್ತಿದ್ದುದು ನಮ್ಮಲ್ಲಿ ಹೆಚ್ಚಿನ ಅನುಮಾನಕ್ಕೆ ಕಾರಣವಾಗಿತ್ತು. ಹಳ್ಳಿಯಲ್ಲಿನ ಸ್ಥಳವೊಂದರ ಮೇಲೆ ನಡೆದ ದಾಳಿಯಲ್ಲಿ ಮಹತ್ವದ ಮಾಹಿತಿ ದೊರೆಯಿತು~ ಎಂದು ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

ಸುಳಿವು ನೀಡಿದ ಪೊಲೀಸರು: ಐಟಿ ಅಧಿಕಾರಿಗಳು ಬಳ್ಳಾರಿಯಲ್ಲಿ ಬೀಡುಬಿಟ್ಟು ದಾಳಿಗೆ ಸಿದ್ಧತೆ ನಡೆಸುತ್ತಿರುವುದು ಸಣ್ಣಗೆ ಬಹಿರಂಗವಾಗಿತ್ತು. ಆದಾಯ ತೆರಿಗೆ ಅಧಿಕಾರಿಗಳ ಚಲನವಲನದ ಮೇಲೆ ನಿಗಾ ಇರಿಸಿದ್ದ ಸ್ಥಳೀಯ ಪೊಲೀಸರು ಗಣಿ ಉದ್ಯಮಿಗಳಿಗೆ ಈ ಬಗ್ಗೆ ಸುಳಿವು ನೀಡಿದ್ದರು ಎನ್ನುತ್ತಾರೆ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು.

`ಅಂತಹ ಸೂಕ್ಷ್ಮ ಸಂದರ್ಭದಲ್ಲಿ ಗಣಿ ಉದ್ಯಮಿಗಳ ಪರವಾಗಿ ಕೆಲಸ ಮಾಡಿದ್ದ ರಾಜ್ಯದ ಅಧಿಕಾರಿಯನ್ನು ನಾವು ಗುರುತಿಸಿದ್ದೇವೆ. ಈ ಅಧಿಕಾರಿ ನೀಡಿದ ಸುಳಿವಿನಿಂದಾಗಿ ಗಣಿ ಉದ್ಯಮಿಗಳು ನಮಗೆ ಯಾವುದೇ ದಾಖಲೆಯೂ ದೊರೆಯದಂತೆ ಮಾಡಿದ್ದರು~ ಎಂದು ಅವರು ಹೇಳಿದರು.

ಐಟಿ ತನಿಖೆಯ ಕುರಿತೂ ಇದೇ ರೀತಿ ಮಾಹಿತಿ ರವಾನೆಯಾಗಿತ್ತು. ಬಳ್ಳಾರಿ ಜಿಲ್ಲೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಜಿಲ್ಲೆಯ ಗಣಿ ಉದ್ಯಮಿಗಳನ್ನು ದಶಕದ ಕಾಲದಿಂದ ರಕ್ಷಿಸಿದ ರಾಷ್ಟ್ರೀಯ ಮಟ್ಟದ ರಾಜಕಾರಣಿಯೊಬ್ಬರಿಗೆ ಸಂಬಂಧಿಸಿದಂತೆ ಈ ಮಾಹಿತಿ ರವಾನೆಯಾಗಿತ್ತು.

ನಿರಂತರವಾಗಿ ಮಾಹಿತಿ ಸೋರಿಕೆ ಆಗುತ್ತಿರುವುದು ಐಟಿ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿತ್ತು. ರಾಜ್ಯದ ಪೊಲೀಸರಿಂದಲೇ ತಮ್ಮ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂಬುದು ಕೆಲ ದಿನಗಳಲ್ಲೇ ಅವರಿಗೆ ಅನುಭವಕ್ಕೆ ಬಂದಿತ್ತು.
 
ಆದಾಯ ತೆರಿಗೆ ಇಲಾಖೆಯು ಕೇಂದ್ರ ಹಣಕಾಸು ಇಲಾಖೆಯ ಜೊತೆ ಮಾಹಿತಿ ವಿನಿಮಯ ಮಾಡಿಕೊಂಡಿರುವ ಟಿಪ್ಪಣಿಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, `ನಾವು ದಾಳಿಗೆ ಕೇಂದ್ರೀಕರಿಸಿದ್ದ ವ್ಯಕ್ತಿಗಳನ್ನು ಸ್ಥಳೀಯ ಪೊಲೀಸರು ರಕ್ಷಿಸಲು ನಿಂತಿದ್ದು ಮತ್ತು ಅವರಿಗೆ ಪೂರಕವಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದುದು ನಾವು ಎದುರಿಸಿದ ಅತಿದೊಡ್ಡ ಸವಾಲು~ ಎಂದು ಉಲ್ಲೇಖಿಸಿದ್ದಾರೆ.

ಸ್ಥಳೀಯ ಪೊಲೀಸರನ್ನು ಕಂಡರೆ ತಮಗೆ ಭಯವಾಗುತ್ತಿತ್ತು. ಗಣಿ ಉದ್ಯಮಿಗಳ ರಕ್ಷಣೆಗಾಗಿಯೇ ಅವರು ಸದಾ ಕೆಲಸ ಮಾಡುತ್ತಿದ್ದುದು ಇದಕ್ಕೆ ಕಾರಣವಾಗಿತ್ತು. ತಮ್ಮ ತಂಡ ಯಾವುದೇ ಸುಳಿವು ನೀಡದೇ ಜಿಲ್ಲೆಯೊಳಕ್ಕೆ ಪ್ರವೇಶಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು ಎಂದು ಈ ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ.

`ಬಳ್ಳಾರಿ ಜಿಲ್ಲೆಯ ಬಹುತೇಕ ರಸ್ತೆಗಳು ಕಿರಿದಾಗಿವೆ. ನಾವು ಜಿಲ್ಲೆಯನ್ನು ಪ್ರವೇಶಿಸಿದ ಸುಳಿವು ಪಡೆಯುತ್ತಿದ್ದ ಸ್ಥಳೀಯ ಪೊಲೀಸರು ನಮ್ಮ ಗುರುತು ಪತ್ತೆಹಚ್ಚುವುದಕ್ಕಾಗಿಯೇ ರಸ್ತೆಗಳಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನೂ ತಪಾಸಣೆಗೆ ಒಳಪಡಿಸುತ್ತಿದ್ದರು~ ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ಆ ದಿನಗಳನ್ನು ಸ್ಮರಿಸುತ್ತಾರೆ.

ಐಟಿ ದಾಳಿಯ ಪ್ರಮುಖ ಗುರಿಗಳಲ್ಲಿ ಒಬ್ಬನಾಗಿದ್ದ ಖಾರದಪುಡಿ ಮಹೇಶ್ ಎಂಬಾತನಿಂದ ಪೊಲೀಸ್, ಅರಣ್ಯ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಲಂಚ ಪಡೆದ ವಿವರವನ್ನು `ಪ್ರಜಾವಾಣಿ~ ಇತ್ತೀಚೆಗೆ ಪ್ರಕಟಿಸಿತ್ತು.

ಆತಂಕದಲ್ಲೇ ಕಾರ್ಯಾಚರಣೆ: ಕಾರ್ಯಾಚರಣೆ ನಡೆಸಲು ತೆರಳಿದ್ದ ಅಧಿಕಾರಿಗಳು ಆರಂಭದಲ್ಲೇ ಆತಂಕಕ್ಕೆ ಒಳಗಾಗಿದ್ದರು. ಸುಳ್ಳು ವಿಳಾಸ ನೀಡಿ ಅವರೆಲ್ಲರೂ ಬಳ್ಳಾರಿ ಜಿಲ್ಲೆಯ ವಿವಿಧೆಡೆ ಹೋಟೆಲ್‌ಗಳಲ್ಲಿ ತಂಗಿದ್ದ ಸಂಗತಿ ಸ್ಥಳೀಯ ಪೊಲೀಸರಿಗೆ ಗೊತ್ತಾಗಿತ್ತು. ಅದನ್ನೇ ಬಳಸಿಕೊಂಡು ಅವರನ್ನು ಬಂಧಿಸುವಂತೆ ಸ್ಥಳೀಯ ಪೊಲೀಸರ ಮೇಲೆ ಗಣಿ ಉದ್ಯಮದ ಪ್ರಭಾವಿಗಳು ಒತ್ತಡ ಹೇರುತ್ತಿರುವುದು ಐಟಿ ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿತ್ತು.

`ದಾಳಿ ಸಂಘಟಿಸುವ ಎರಡು-ಮೂರು ದಿನಗಳ ಮೊದಲು ರಾತ್ರಿ 10.40ರ ವೇಳೆಗೆ ನಮ್ಮ ತನಿಖಾ ವಿಭಾಗದ ಮಹಾನಿರ್ದೇಶಕರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಜಯ್‌ಕುಮಾರ್ ಸಿಂಗ್ ಅವರಿಗೆ ದೂರವಾಣಿ ಕರೆಮಾಡಿ ನಮ್ಮ ಆತಂಕವನ್ನು ವಿವರಿಸಿದ್ದರು.

ತಮ್ಮ ಸ್ವಂತ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಎಲ್ಲರಿಗೂ ನೀಡಿದ್ದ ಅಜಯ್‌ಕುಮಾರ್ ಸಿಂಗ್ ಅವರು ಯಾವುದೇ ಸಂದರ್ಭದಲ್ಲಿ ಸ್ಥಳೀಯ ಪೊಲೀಸರಿಂದ ಕಾರ್ಯಾಚರಣೆಗೆ ಅಡ್ಡಿಯಾದರೆ ನೇರವಾಗಿ ತಿಳಿಸುವಂತೆ ಸೂಚಿಸಿದ್ದರು.
 
ಅವರು ತುಂಬಾ ಸಹಕಾರ ಮನೋಭಾವದಿಂದ ನಡೆದುಕೊಂಡಿದ್ದರು~ ಎನ್ನುತ್ತಾರೆ ಐಟಿ ಅಧಿಕಾರಿಗಳು. ಮೊದಲ ದಾಳಿಗಳ ಅನುಭವದಲ್ಲಿ ಸ್ಥಳೀಯ ಪೊಲೀಸರ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದ ಐಟಿ ಅಧಿಕಾರಿಗಳು, ಕೊನೆಯ ಮಹತ್ವದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ರಕ್ಷಣೆ ಒದಗಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದರು.

ಸಕಲ ಸಿದ್ಧತೆಯೊಂದಿಗೆ 2010ರ ಅಕ್ಟೋಬರ್ 25ರಂದು ದಕ್ಷಿಣ ಭಾರತದ ಅತಿದೊಡ್ಡ ಆದಾಯ ತೆರಿಗೆ ದಾಳಿ ನಡೆಯಿತು. ಮೊದಲೇ ಗುರುತಿಸಿದ್ದ 79 ಸ್ಥಳಗಳ ಮೇಲೆ 520 ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ತಂಡಕ್ಕೆ 179 ಶಸ್ತ್ರಸಜ್ಜಿತ ಸಿಆರ್‌ಪಿಎಫ್ ಪೊಲೀಸರು ರಕ್ಷಣೆ ನೀಡಿದ್ದರು.

ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಜಾಲದ ವ್ಯಾಪ್ತಿಯನ್ನು ಮೊದಲೇ ಅರಿತಿದ್ದ ಆದಾಯ ತೆರಿಗೆ ಇಲಾಖೆ ಐದು ರಾಜ್ಯಗಳಲ್ಲಿನ ತನ್ನ ಅಧಿಕಾರಿಗಳನ್ನು ದಾಳಿಗೆ ನಿಯೋಜಿಸಿತ್ತು. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಭುವನೇಶ್ವರ ಮತ್ತು ದೆಹಲಿಯ ಐಟಿ ಅಧಿಕಾರಿಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಖೆಡ್ಡಕ್ಕೆ ಬಿದ್ದ `ಗಣಿ ಧಣಿ~ಗಳು: ಐಟಿ ದಾಳಿಯ ಸುಳಿವು ಅರಿತ ಗಣಿ ಉದ್ಯಮಿಗಳು ತಮ್ಮ ಮನೆ, ಕಚೇರಿಗಳಿಂದ ದಾಖಲೆಗಳನ್ನು ಹೊರಕ್ಕೆ ಸಾಗಿಸಿರುವ ವಿಷಯ ಮೊದಲೇ ಆದಾಯ ತೆರಿಗೆ ಅಧಿಕಾರಿಗಳಿಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಪ್ರಭಾವಿ ಉದ್ಯಮಿಗಳನ್ನು ಈ ದಾಳಿಯಲ್ಲಿ ಮುಟ್ಟುವ ಗೋಜಿಗೆ ಹೋಗಲಿಲ್ಲ. ಬದಲಿಗೆ ಅವರ ಸಹಚರರ ಮೇಲೆಯೇ ದಾಳಿ ಕೇಂದ್ರೀಕೃತವಾಗಿತ್ತು. ಐಟಿ ಅಧಿಕಾರಿಗಳ ಈ ತಂತ್ರ ಆರು ತಿಂಗಳ ಸಿದ್ಧತೆಗೆ ತಕ್ಕ ಫಲ ನೀಡಿತ್ತು.

`ಗಣಿ ಮಾಫಿಯಾ ನಮ್ಮ ಕಾರ್ಯಾಚರಣೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದಾಗಿಯೇ ನಾವು ನಿಜವಾಗಿಯೂ ಗುರಿಯಾಗಿಟ್ಟ ಸ್ಥಳಗಳಿಂದ ದಾಖಲೆಗಳನ್ನು ಹೊರಸಾಗಿಸಲು ಅವರಿಗೆ ಸಾಧ್ಯವಾಗಿರಲಿಲ್ಲ.

ನಾವು ಬಲಾಢ್ಯ `ಗಣಿ ಧಣಿ~ಗಳನ್ನು ಮುಟ್ಟಲಿಲ್ಲ. ಆದರೆ ನಾವು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಮಾಹಿತಿ, ದಾಖಲೆ ಈ ದಾಳಿಯಿಂದ ದೊರೆಯಿತು~ ಎನ್ನುತ್ತಾರೆ ಐಟಿ ಅಧಿಕಾರಿಗಳು.

`ದಾಳಿಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಇದ್ದುದ್ದಕ್ಕಾಗಿ ಸಿಆರ್‌ಪಿಎಫ್‌ಗೆ ಧನ್ಯವಾದ ಹೇಳುತ್ತೇವೆ. ಸ್ಥಳೀಯ ಪೊಲೀಸರನ್ನು ಕಾರ್ಯಾಚರಣೆಯಿಂದ ದೂರ ಇಡುವ ನಮ್ಮ ನಿರ್ಧಾರವೇ ದಾಳಿಯ ಯಶಸ್ಸಿಗೆ ಕಾರಣವಾಯಿತು~ ಎನ್ನುತ್ತಾರೆ ಅವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT