ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಡು ಉತ್ಪಾದನೆ ವೆಚ್ಚ ಪರಿಗಣಿಸಿ

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರೇಷ್ಮೆ ಗೂಡಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಾಗ ಬೆಳೆಗಾರರು ಗೂಡು ಉತ್ಪಾದನೆಗೆ ಮಾಡುವ ಕನಿಷ್ಠ ವೆಚ್ಚವನ್ನು ಪರಿಗಣಿಸಬೇಕು~ ಎಂದು ರೇಷ್ಮೆ ಬೆಳೆಗಾರರು ಮತ್ತು ತಜ್ಞರು ಸರ್ಕಾರಕ್ಕೆ ಸಲಹೆ ಮಾಡಿದರು.

ರೇಷ್ಮೆ ಗೂಡಿನ ಉತ್ಪಾದನಾ ವೆಚ್ಚವನ್ನು ನಿರ್ಧರಿಸಲು `ಸುಂಕರಹಿತ ರೇಷ್ಮೆ ಆಮದು ವಿರೋಧಿ ಅಖಿಲ ಭಾರತ ಹೋರಾಟ ಸಮಿತಿ~ಯು ನಗರದಲ್ಲಿ ಗುರುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ವಿವಿಧ ಜಿಲ್ಲೆಗಳ ಆಯ್ದ ರೇಷ್ಮೆ ಬೆಳೆಗಾರರು, ತಜ್ಞರು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಸುದೀರ್ಘ ಚರ್ಚೆಯ ನಂತರ ಸರ್ವಾನುಮತದ ನಿರ್ಣಯ ತೆಗೆದುಕೊಂಡರು.

`ಒಂದು ಕೆ.ಜಿ. ರೇಷ್ಮೆ ಗೂಡು ಉತ್ಪಾದಿಸಲು ಕನಿಷ್ಠ ವೆಚ್ಚ 325 ರೂಪಾಯಿ ಆಗಲಿದೆ. ಈ ವೆಚ್ಚಕ್ಕೆ ಅದರ ಶೇಕಡಾ 50ರಷ್ಟನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆಯನ್ನಾಗಿ ನೀಡಬೇಕು~ ಎಂಬ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿಕೊಡಲು ನಿರ್ಧರಿಸಲಾಯಿತು.

`ರಸಗೊಬ್ಬರ, ಕೀಟ ನಾಶಕಗಳು, ಡೀಸೆಲ್ ಮತ್ತಿತರ ಸಾಮಗ್ರಿಗಳ ಬೆಲೆಗಳಲ್ಲಿ ಸತತವಾಗಿ ಆಗುತ್ತಿರುವ ಹೆಚ್ಚಳದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ತೋಟ ಮತ್ತು ಹುಳು ಸಾಕುವ ಮನೆ ನಿರ್ವಹಣೆಯ ವೆಚ್ಚ ವಿಪರೀತವಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಕನಿಷ್ಠ ಲಾಭ ಸಿಗುವಂತೆ ಬೆಂಬಲ ಬೆಲೆ ನಿಗದಿ ಮಾಡಬೇಕು~ ಎಂದು ಸಮಿತಿಯ ಸಂಘಟನಾ ಸಂಚಾಲಕ ಜಿ.ಸಿ.ಬಯ್ಯಾರೆಡ್ಡಿ ಒತ್ತಾಯಿಸಿದರು.

ಬೆಂಬಲ ಬೆಲೆ ನಿಗದಿ, ಸುಂಕ ರಹಿತ ರೇಷ್ಮೆ ಆಮದು ನಿಷೇಧ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್ ಮೊದಲ ವಾರದಲ್ಲಿ ಸಂಸತ್ ಚಲೋ ಚಳವಳಿ ನಡೆಸಲಾಗುವುದು ಎಂದು ಅವರು ತಿಳಿಸಿದರು.

ರೇಷ್ಮೆ ಬೆಳೆಗಾರರಾದ ಚಿಕ್ಕಬಳ್ಳಾಪುರದ ಎಸ್.ಎಂ.ನಾರಾಯಣಸ್ವಾಮಿ, ಕೆ.ಎಂ.ವೆಂಕಟೇಶ್, ರಾಮನಗರದ ಜಿ.ಶಿವಣ್ಣ, ಕೋಲಾರದ ಕಲ್ಯಾಣಕುಮಾರ್, ಮಂಡ್ಯದ ಬೋರೇಗೌಡ, ಟಿ.ಎಲ್.ಕೃಷ್ಣೇಗೌಡ, ಆಂಧ್ರಪ್ರದೇಶದ ರೈತ ಮುಖಂಡ ವೆಂಕಟರಾಮರೆಡ್ಡಿ, ತಮಿಳುನಾಡಿನ ದಯಾನಿಧಿ, ಮುಖಂಡರಾದ ಮಳ್ಳೂರು ಶಿವಣ್ಣ, ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ತಜ್ಞರಾದ ಡಾ.ನಾಗರಾಜು, ಡಾ.ಎಸ್.ಆರ್.ಕಟ್ಟಿ, ಡಾ.ಪಿ.ತಿಪ್ಪಯ್ಯ, ಎಂ. ರಾಮಚಂದ್ರೇಗೌಡ ಮತ್ತಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT