ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚಾ ಸ್ಪರ್ಧೆ: ನಗರದ ವಿದ್ಯಾರ್ಥಿಗಳ ಸಾಧನೆ

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಬುಧವಾರ ನಡೆದ `ವರ್ಬ್ಯಾಟಲ್ ಸೌತ್~ ಅಂತರ ರಾಜ್ಯ ಮಟ್ಟದ ಶಾಲಾ ಚರ್ಚಾ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಬೆಂಗಳೂರಿನ ಐಟಿಐ ಸೆಂಟ್ರಲ್ ಶಾಲೆಯ ಲಕ್ಷ್ಮಿಪ್ರಿಯ ಕಣ್ಣನ್ ಹಾಗೂ ಸ್ನೇಹಪ್ರಿಯ ಕಣ್ಣನ್ ಅವರು ಪ್ರಥಮ ಬಹುಮಾನ ಗಳಿಸುವ ಮೂಲಕ ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರ ಪಡೆದುಕೊಂಡರು.

ಸ್ಪರ್ಧೆಯಲ್ಲಿ ಆಂಧ್ರಪ್ರದೇಶ, ಕೇರಳ, ಪಾಂಡಿಚೆರಿ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ವಿವಿಧ ಶಾಲೆಗಳ ಏಳನೇ ತರಗತಿಯಿಂದ 10ನೇ ತರಗತಿವರೆಗೆ  (12-16ರ ನಡುವಿನ ವಯೋಮಾನ) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕೆ.ಆರ್. ರಸ್ತೆಯಲ್ಲಿರುವ ಬೆಂಗಳೂರು ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ಕೆಲವು ಸುತ್ತಿನ ಸ್ಪರ್ಧೆಗಳ ಬಳಿಕ ಅಂತಿಮ ಸುತ್ತಿನ ಸ್ಪರ್ಧೆಗೆ ಮೂರು ತಂಡಗಳು ಆಯ್ಕೆಯಾದವು.

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಬೆಂಗಳೂರಿನ ವಿದ್ಯಾರ್ಥಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಬಹುಮಾನ ವಿತರಿಸಿದರು. ಹಾಗೆಯೇ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಚೆನ್ನೈನ ಚೆಟ್ಟಿನಾಡ್ ವಿದ್ಯಾಶ್ರಮದ ಸೆನುನಿಜರ್ ಮತ್ತು ಅದಿತಿ ಪ್ರಕಾಶ್ ಹಾಗೂ ಚೆನ್ನೈನ ಹರ್ಷ ವಿದ್ಯಾಮಂದಿರದ ಶ್ರೀಭವಾನಿ ಮತ್ತು ಸೆಹರ್ ಅವರಿಗೆ 10,000 ರೂಪಾಯಿ ನಗದು ಪುರಸ್ಕಾರವನ್ನು ಅವರು ವಿತರಿಸಿದರು.

ನಂತರ ಮಾತನಾಡಿದ ಅವರು, `ಪ್ರಜಾಪ್ರಭುತ್ವ ವ್ಯವಸ್ಥೆ ಅಳವಡಿಸಿಕೊಂಡಿರುವ ದೇಶದಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯ ಅನುಷ್ಠಾನ, ಪ್ರಭಾವ ಹಾಗೂ ಬಲವರ್ಧನೆಗೆ ಆರೋಗ್ಯಪೂರ್ಣ ಚರ್ಚೆ ಸಹಕಾರಿ ಎನಿಸಿದೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಶಾಲಾ ಹಂತದಲ್ಲೇ ಚರ್ಚೆಯ ಮಹತ್ವವನ್ನು ತಿಳಿಸಿಕೊಡುವ ಪ್ರಯತ್ನ ಉತ್ತಮವಾಗಿದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

`ಭಿನ್ನಾಭಿಪ್ರಾಯಗಳು ಹಾಗೂ ವಿವಾದಗಳನ್ನು ಚರ್ಚೆಗಳ ಮೂಲಕವೇ ಪರಿಹರಿಸಿಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬರಲ್ಲೂ ಚರ್ಚೆ ನಡೆಸುವ ಮನೋಭಾವ ಮೂಡಿದರೆ ಸಾಕಷ್ಟು ವಿವಾದಗಳು ಬಗೆಹರಿಯಲಿವೆ ಎಂಬುದನ್ನು ಮಕ್ಕಳು ತಿಳಿಯಬೇಕು~ ಎಂದು ಹೇಳಿದರು. ಪತ್ರಕರ್ತ ದೀಪಕ್ ತಿಮ್ಮಯ್ಯ ಸ್ಪರ್ಧೆಯನ್ನು ನಿರೂಪಿಸಿ, ಮೇಲ್ವಿಚಾರಣೆ ನಡೆಸಿದರು.

ವಾದ-ಪ್ರತಿವಾದ: `ಆನ್‌ಲೈನ್ ಶಿಕ್ಷಣಕ್ಕಿಂತ ತರಗತಿ ಕಲಿಕಾ ಪದ್ಧತಿ ಉತ್ತಮ~ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದ ಲಕ್ಷ್ಮಿಪ್ರಿಯ ಕಣ್ಣನ್ ಹಾಗೂ ಸ್ನೇಹಪ್ರಿಯ ಕಣ್ಣನ್, `ತರಗತಿಯಲ್ಲಿ ಕಲಿಸುವ ವಿಧಾನ ಪರಿಣಾಮಕಾರಿ ಎನಿಸಿದೆ. ಸ್ನೇಹಿತರೊಂದಿಗೆ ಸಾಮೂಹಿಕ ಅಭ್ಯಾಸ ನಡೆಸಬಹುದು. ಆನ್‌ಲೈನ್ ಮೂಲಕ ಸ್ವಯಂ ಪ್ರೇರಿತರಾಗಿ ಎಲ್ಲವನ್ನೂ ಕಲಿಯಲು ಸಾಧ್ಯವಿಲ್ಲ. ಶಿಕ್ಷಕರ ಮಾರ್ಗದರ್ಶನ ಅಗತ್ಯ. ನಗರವಾಸಿಗಳಿಗಷ್ಟೇ ಕಂಪ್ಯೂಟರ್ ಕಲಿಕೆಗೆ ಅವಕಾಶವಿರುತ್ತದೆ. ಆದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈ ಸೌಲಭ್ಯ ದೊರೆಯುವುದಿಲ್ಲ. ಹಾಗಾಗಿ ತರಗತಿ ಶಿಕ್ಷಣವೇ ಸೂಕ್ತ~ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವಾದಕ್ಕೆ ವಿರುದ್ಧವಾಗಿ ಮಾತನಾಡಿದ ಸೆನುನಿಜರ್ ಹಾಗೂ ಅದಿತಿ ಪ್ರಕಾಶ್, `ಶಿಕ್ಷಕರು ಎಲ್ಲ ಮಕ್ಕಳನ್ನು ಏಕಪ್ರಕಾರವಾಗಿ ಕಾಣುತ್ತಾರೆ, ಎಲ್ಲರ ಕಲಿಕೆಗೆ ಗಮನ ನೀಡುತ್ತಾರೆ ಎಂದು ನಿರೀಕ್ಷಿಸುವುದು ಸರಿಯಲ್ಲ. ಅಲ್ಲದೇ ಅಂಕ ನೀಡಿಕೆಯಲ್ಲಿ ತಾರತಮ್ಯ ನಡೆಯುತ್ತಲೇ ಇದೆ. ವಿದ್ಯಾರ್ಥಿಗಳು ತಮಗಿರುವ ಗೊಂದಲ, ಅನುಮಾನಗಳ ಬಗ್ಗೆ ಶಿಕ್ಷಕರನ್ನು ಕೇಳಲು ಅಂಜುತ್ತಾರೆ. ಆದರೆ ಆನ್‌ಲೈನ್ ಕಲಿಕೆಯಲ್ಲಿ ಈ ರೀತಿ ತೊಂದರೆ ಕಾಡುವುದಿಲ್ಲ. ಫೇಸ್‌ಬುಕ್‌ನಂತಹ ಸಾಮಾಜಿಕ ತಾಣಗಳಲ್ಲೂ ಸ್ನೇಹಿತರನ್ನು ಮಾಡಿಕೊಳ್ಳಬಹುದು. ಶ್ರವ್ಯ- ದೃಶ್ಯ ಮಾಧ್ಯಮವು ಕಲಿಕೆಗೆ ಪೂರಕವಾಗಿದೆ~ ಎಂದರು.

ವಿಷಯದ ಪರ ಮಾತನಾಡಿದ ಶ್ರೀ ಭವಾನಿ ಹಾಗೂ ಸೆಹರ್, `ಶಿಕ್ಷಕರು, ವಿದ್ಯಾರ್ಥಿಗಳ ನಡುವೆ ಸಂವಾದ ನಡೆದಾಗ ಮಾತ್ರ ಸುಲಭ ಕಲಿಕೆ ಸಾಧ್ಯ. ತರಗತಿಯಲ್ಲಿ ಶಿಕ್ಷಕರು ಮೇಲ್ವಿಚಾರಣೆ ನಡೆಸುತ್ತ, ಓದಿನಲ್ಲಿ ಹಿಂದಿರುವ ಮಕ್ಕಳಿಗೆ ಹೆಚ್ಚು ಗಮನ ನೀಡಲು ಅವಕಾಶವಿದೆ. ಆದರೆ ಆನ್‌ಲೈನ್ ವ್ಯವಸ್ಥೆಯಲ್ಲಿ ಈ ರೀತಿಯ ಮೇಲ್ವಿಚಾರಣೆ ನಡೆಸಲು ಯಾರೂ ಇರುವುದಿಲ್ಲ. ಯುವಜನತೆ ಇ-ಮೇಲ್, ಚಾಟಿಂಗ್‌ಗೆ ಆಸಕ್ತಿ ತೋರುತ್ತಾರೆಯೇ ಹೊರತು ಕಲಿಕೆಗೆ ಗಮನ ನೀಡುವುದಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT