ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿಸಿಕೊಳ್ಳಲು ಯತ್ನಿಸಿದ ಹಂತಕನಿಗೆ ಗುಂಡೇಟು

ಮಹಜರಿಗೆ ಕರೆದೊಯ್ದಾಗ ಪೊಲೀಸರತ್ತ ಕಲ್ಲೆಸೆದ ಜಾನ್ಸನ್, ಇನ್‌ಸ್ಪೆಕ್ಟರ್‌ ಸಾದಿಕ್‌ ಪಾಷಾರಿಂದ ಗುಂಡೇಟು
Last Updated 24 ಜೂನ್ 2017, 20:01 IST
ಅಕ್ಷರ ಗಾತ್ರ

ಬೆಂಗಳೂರು: ಮಹಜರಿಗೆ ಕರೆದೊಯ್ದಿದ್ದ ಪೊಲೀಸರಿಗೆ ಕಲ್ಲಿನಿಂದ ಹೊಡೆದು ಪರಾರಿಯಾಗಲು ಯತ್ನಿಸಿದ ಕೊಲೆ ಪ್ರಕರಣದ ಆರೋಪಿ ಜಾನ್ಸನ್ (22) ಎಂಬಾತನ ಕಾಲಿಗೆ ಎಚ್‌ಎಎಲ್ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ ಅವರು ಗುಂಡು ಹೊಡೆದಿದ್ದಾರೆ.

ವಿಭೂತಿಪುರದ ಜಾನ್ಸನ್, ಜೂನ್ 10ರ ರಾತ್ರಿ ಕಗ್ಗದಾಸನಪುರ ಮುಖ್ಯರಸ್ತೆಯಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ದೋಚಲು ಯತ್ನಿಸಿದ್ದ. ಆಗ ಸ್ವಲ್ಪ ದೂರದಲ್ಲೇ ನಿಂತಿದ್ದ ಖಾಸಗಿ ಕಂಪೆನಿ ಉದ್ಯೋಗಿ ಸಾಯಿಚರಣ್ (22) ಎಂಬುವರು, ಆತನನ್ನು ಬೆನ್ನಟ್ಟಿ ಹಿಡಿದಿದ್ದರು.

ಈ ವೇಳೆ ಆರೋಪಿಯು ಅವರ ಬೆನ್ನಿಗೆ ಚಾಕುವಿನಿಂದ ಇರಿದು ತಪ್ಪಿಸಿಕೊಂಡಿದ್ದ. ಸ್ಥಳೀಯರು ಗಾಯಾಳುವನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ರಕ್ತಸ್ರಾವವಾಗಿದ್ದರಿಂದ ರಾತ್ರಿ 12.30ಕ್ಕೆ ಸಾಯಿಚರಣ್ ಕೊನೆಯುಸಿರೆಳೆದಿದ್ದರು. ಮೃತರ ತಾಯಿ ಕೊಂಡಮ್ಮ ಕೊಟ್ಟ ದೂರಿನ ಅನ್ವಯ ಎಚ್‌ಎಎಲ್‌ ಠಾಣೆಯಲ್ಲಿ  ಕೊಲೆ ಪ್ರಕರಣ ದಾಖಲಾಗಿತ್ತು.

ಎಚ್‌ಎಎಲ್‌ ಹಾಗೂ ಬೈಯಪ್ಪನಹಳ್ಳಿ ಪೊಲೀಸರನ್ನು ಒಳಗೊಂಡ ವಿಶೇಷ ತಂಡವು, ಸಿ.ಸಿ ಟಿ.ವಿ ಕ್ಯಾಮೆರಾದ ಸುಳಿವು ಆಧರಿಸಿ ಶುಕ್ರವಾರ ಸಂಜೆ  ಜಾನ್ಸನ್‌ನನ್ನು ಪತ್ತೆ ಮಾಡಿತ್ತು. ವಿಚಾರಣೆ ನಡೆಸಿದಾಗ ಆತ ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದ.

(ಜಾನ್ಸನ್)

ಮಹಜರು ಪ್ರಕ್ರಿಯೆ ಪೂರ್ಣಗೊಳಿಸುವ ಸಲುವಾಗಿ ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳು ಜಾನ್ಸನ್‌ನನ್ನು ಹತ್ಯೆ ನಡೆದ ಸ್ಥಳಕ್ಕೆ ಕರೆದೊಯ್ದಿದ್ದರು.

‘ಮೊದಲು ಚಾಕು ಬಿಸಾಡಿದ್ದ ಸ್ಥಳವನ್ನು ಸಿಬ್ಬಂದಿಗೆ ತೋರಿಸಿದ ಜಾನ್ಸನ್, ನಂತರ ಸರಗಳವು ಮಾಡಲು ಬಳಸಿದ್ದ ಬೈಕನ್ನು ತೋರಿಸುವುದಾಗಿ ಕರೆದುಕೊಂಡು ಹೋಗುತ್ತಿದ್ದ. 300 ಮೀಟರ್‌ನಷ್ಟು ದೂರ ನಡೆದ ಬಳಿಕ ಮೂತ್ರ ವಿಸರ್ಜನೆ  ಮಾಡಬೇಕೆಂದ. ಆಗ ಆತನ ಜತೆ ಕಾನ್‌ಸ್ಟೆಬಲ್‌ಗಳೂ ನಿರ್ಜನ ಪ್ರದೇಶಕ್ಕೆ ತೆರಳಿದ್ದರು’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

‘ಅಲ್ಲಿಗೆ ಹೋದ ಬಳಿಕ ಸಿಬ್ಬಂದಿಯನ್ನು ತಳ್ಳಿ ಓಡಲಾರಂಭಿಸಿದ ಆತ, ಬೆನ್ನಟ್ಟಿದಾಗ ಅವರ ಮೇಲೆ ಕಲ್ಲು ತೂರಲಾರಂಭಿಸಿದ. ಆಗ ಸಾದಿಕ್ ಪಾಷಾ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರು. ಮಾತು ಕೇಳದಿದ್ದಾಗ ಎಡಗಾಲಿಗೆ ಗುಂಡು ಹೊಡೆದರು. ಸದ್ಯ ಆತ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡ ಬಳಿಕ ವಶಕ್ಕೆ ಪಡೆಯುತ್ತೇವೆ’ ಎಂದು ಮಾಹಿತಿ ನೀಡಿದರು.

ಮಹಿಳೆ ದೂರಲಿಲ್ಲ: ‘ಸಾಯಿಚರಣ್ ಜೂನ್ 10ರಂದು ಸ್ನೇಹಿತರ ಜತೆ ಔತಣ ಕೂಟಕ್ಕೆ ಹೋಗಿದ್ದರು. ಮನೆಗೆ ವಾಪಸಾಗುವಾಗ ನಡುರಸ್ತೆಯಲ್ಲಿ ಜೋಸೆಫ್ ಮಹಿಳೆಯ ಸರ ಹಿಡಿದು ಎಳೆದಾಡುತ್ತಿದ್ದುದನ್ನು ಕಂಡು ರಕ್ಷಣೆಗೆ ಧಾವಿಸಿದ್ದರು. ಆತನನ್ನು ಹಿಡಿಯಲು ಹೋಗಿ ಕೊಲೆಯೂ ಆದರು. ಆದರೆ, ತುಂಡಾಗಿದ್ದ ತಮ್ಮ ಸರ ತೆಗೆದುಕೊಂಡು ಮನೆಗೆ ಮರಳಿದ ಮಹಿಳೆ, ಸರಗಳ್ಳನ ವಿರುದ್ಧ ದೂರು ಕೊಡಲು ಈವರೆಗೂ ಬಂದಿಲ್ಲ. ಕನಿಷ್ಠ ತನಿಖೆಗೂ ಸಹಕಾರ ನೀಡಲಿಲ್ಲ’ ಎಂದು ತನಿಖಾಧಿಕಾರಿಗಳು ಹೇಳಿದರು.

‘ಸಾಯಿಚರಣ್ ಕೊಲೆಯಾಗಿದ್ದ ಸ್ಥಳದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳೂ ಇರಲಿಲ್ಲ.‘ಮಗನನ್ನು ಸ್ನೇಹಿತರು ಕರೆ ಮಾಡಿ ಕರೆಸಿಕೊಂಡರು’ ಎಂದು ಮೃತರ ತಾಯಿ ಹೇಳಿಕೆ ಕೊಟ್ಟಿದ್ದರಿಂದ ಆರಂಭದಲ್ಲಿ ಸ್ನೇಹಿತರ ಮೇಲೆಯೇ ಅನುಮಾನ ವ್ಯಕ್ತವಾಗಿತ್ತು. ನಾಲ್ಕೈದು ತಾಸುಗಳ ವಿಚಾರಣೆ ಬಳಿಕ ಕೃತ್ಯದಲ್ಲಿ ಅವರ ಪಾತ್ರವಿಲ್ಲ ಎಂಬುದು ಖಚಿತವಾಯಿತು.’

‘ಕೊನೆಗೆ ಸುತ್ತಮುತ್ತಲ ರಸ್ತೆಗಳ 25 ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ, 2 ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ದರೋಡೆ ಪ್ರಕರಣದ ಆರೋಪಿ ಜಾನ್ಸನ್‌ ಓಡಾಡುತ್ತಿರುವ ದೃಶ್ಯ ಒಂದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದು ಮಾಹಿತಿ ನೀಡಿದರು.

(ಜಾನ್ಸನ್)

**

ದರೋಡೆ ಕೃತ್ಯ ಬಯಲು

ಡಕಾಯಿತಿ ಪ್ರಕರಣದಲ್ಲಿ ಇದೇ ಮಾರ್ಚ್‌ನಲ್ಲಿ ಜಾನ್ಸನ್‌ನನ್ನು ಬಂಧಿಸಿದ್ದೆವು. 23 ದಿನಗಳ ಸೆರೆವಾಸದ ಬಳಿಕ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

‘ಯುವಕನೊಬ್ಬ ಚಾಕುವಿನಿಂದ ಬೆದರಿಸಿ ನಮ್ಮ ಪರ್ಸ್ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾದ’ ಎಂದು ಇದೇ ಏಪ್ರಿಲ್ 4ರಂದು ರಾಹುಲ್ ಮತ್ತು ಸಮೀಕ್ಷಾ ಸಿಂಗ್ ಎಂಬುವರು ದೂರು ಕೊಟ್ಟಿದ್ದರು. ಆ ಕೃತ್ಯವನ್ನು ತಾನೇ ಎಸಗಿದ್ದಾಗಿ ಜಾನ್ಸನ್  ಹೇಳಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT