ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಿ ಅಡವಿಟ್ಟು ವಂಚಕನಿಗೆ ಕೊಟ್ಟಿದ್ದ ಹಣ ವಾಪಸ್!

Last Updated 26 ಜುಲೈ 2017, 20:14 IST
ಅಕ್ಷರ ಗಾತ್ರ

ಬೆಂಗಳೂರು: ನಿವೇಶನ ಕೊಡಿಸುವ ನೆಪದಲ್ಲಿ ಮಹಿಳೆಯೊಬ್ಬರಿಂದ ಎಂಟು ತಿಂಗಳ ಹಿಂದೆ ₹ 50 ಸಾವಿರ ಪಡೆದು ಪರಾರಿಯಾಗಿದ್ದ ವಂಚಕನ ಕುಟುಂಬವನ್ನು ಈಗ ಪತ್ತೆ ಮಾಡಿರುವ ಚಾಮರಾಜಪೇಟೆ ಪೊಲೀಸರು, ಆರೋಪಿಯ ತಂದೆಯಿಂದಲೇ ಮಹಿಳೆಗೆ ಹಣ ವಾಪಸ್ ಕೊಡಿಸಿದ್ದಾರೆ.

ಚಾಮರಾಜಪೇಟೆ ನಿವಾಸಿಯಾದ ಆ ಮಹಿಳೆ, ಸುತ್ತಮುತ್ತಲ ಮನೆಗಳಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಾರೆ. 2016ರ ನವೆಂಬರ್‌ನಲ್ಲಿ ಅವರು ಮಗಳನ್ನು ನೋಡಲು ಮೈಸೂರಿಗೆ ಹೋಗಿದ್ದರು.

ಅಲ್ಲಿಂದ ಟ್ಯಾಕ್ಸಿಯಲ್ಲಿ ನಗರಕ್ಕೆ ವಾಪಸಾಗುತ್ತಿದ್ದಾಗ ಅದೇ ವಾಹನದಲ್ಲಿದ್ದ ವಂಚಕ, ‘ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸರ್ಕಾರ ಕಡಿಮೆ ಬೆಲೆಗೆ ನಿವೇಶನ ನೀಡುತ್ತಿದೆ. ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಿಚಯವಿದೆ. ನೀವು ₹ 1 ಲಕ್ಷ ಕೊಟ್ಟರೆ ನಿವೇಶನ ಕೊಡಿಸುತ್ತೇನೆ’ ಎಂದು ಹೇಳಿದ್ದ.

ಆತನ ಮಾತನ್ನು ನಂಬಿದ ಮಹಿಳೆ, ತಮ್ಮ ಮಾಂಗಲ್ಯ ಸರವನ್ನು ಚಾಮರಾಜಪೇಟೆಯ ಆಭರಣ ಮಳಿಗೆಯಲ್ಲಿ ಅಡವಿಟ್ಟು ₹ 50 ಸಾವಿರ ಹೊಂದಿಸಿದ್ದರು. ಸರ ಅಡವಿಡಲು ಆರೋಪಿಯೂ ಅವರ ಜತೆ ಹೋಗಿದ್ದರಿಂದ ಮಳಿಗೆಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಆತನ ಚಲನವಲನ ಸೆರೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಈ ರೀತಿಯಾಗಿ ಮಹಿಳೆಯಿಂದ ₹ 50 ಸಾವಿರ ಪಡೆದ ವಂಚಕ, ನಂತರ ಮೊಬೈಲ್ ಸ್ವಿಚ್ಡ್ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದ. ನಂತರ ಮಹಿಳೆ ಚಾಮರಾಜಪೇಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾದ ಸುಳಿವು ಆಧರಿಸಿ ತನಿಖೆ ಪ್ರಾರಂಭಿಸಿದ್ದರು.

ತಡವಾಗಿ ಸಿಕ್ಕಿದ್ದೇಕೆ?: ‘ನಕಲಿ ದಾಖಲೆ ಸಲ್ಲಿಸಿ ಖರೀದಿಸಿದ್ದ ಸಿಮ್‌ನಿಂದ ಮಹಿಳೆಗೆ ಎರಡು ಸಲ ಕರೆ ಮಾಡಿದ್ದ ಆರೋಪಿ, ಹಣ ಕೈಸೇರುತ್ತಿದ್ದಂತೆಯೇ ಆ ಸಿಮ್‌ ತೆಗೆದು ಹಾಕಿದ್ದ. ಕರೆ ವಿವರ (ಸಿಡಿಆರ್) ಪರಿಶೀಲಿಸಿದರೆ, ಆ ಸಂಖ್ಯೆಯಿಂದ ಮಹಿಳೆಗೆ ಹೊರತುಪಡಿಸಿ ಬೇರ್‌್ಯಾರಿಗೂ ಕರೆ ಹೋಗಿರಲಿಲ್ಲ’ ಎಂದು ತನಿಖಾಧಿಕಾರಿಗಳು ಹೇಳಿದರು.

‘ಸಿಮ್ ಚಾಲನೆಯಲ್ಲಿ ಇಲ್ಲದಿದ್ದರೂ ಕಾಲ ಕಾಲಕ್ಕೆ ಸಿಡಿಆರ್ ಪರಿಶೀಲಿಸುತ್ತಲೇ ಇದ್ದೆವು. 15 ದಿನಗಳ ಹಿಂದೆ ಆತ ಅದೇ ಸಿಮ್‌ನಿಂದ ತಂದೆ ಮುನಿಯಪ್ಪ ಹಾಗೂ ತಮ್ಮ ಮಣಿ ಅವರಿಗೆ ಕರೆ ಮಾಡಿದ್ದ. ಆ ಸಂಖ್ಯೆಗಳ ಜಾಡು ಹಿಡಿದು ಹೊರಟಾಗ ಆತನ ಕುಟುಂಬ ಮಾಲೂರಿನಲ್ಲಿ ನೆಲೆಸಿರುವುದು ಗೊತ್ತಾಯಿತು’ ಎಂದು ಮಾಹಿತಿ ನೀಡಿದರು.

***

ಮಗನ ಪರವಾಗಿ ಹಣ ನೀಡಿದ ತಂದೆ
‘ನನ್ನ ಮಗ ಅದೇ ರೀತಿ ಹಲವರಿಗೆ ಮೋಸ ಮಾಡಿದ್ದಾನೆ. ಹೀಗಾಗಿ, 2 ವರ್ಷಗಳ ಹಿಂದೆಯೇ ಆತನನ್ನು ಮನೆಯಿಂದ ಹೊರ ಹಾಕಿದ್ದೆ. ಈಗ ಎಲ್ಲಿದ್ದಾನೆ. ಏನು ಮಾಡುತ್ತಿದ್ದಾನೆ ಎಂಬುದು ನನಗೂ ಗೊತ್ತಿಲ್ಲ. ಆ ಮಹಿಳೆಗೆ ನಾನೇ ಹಣ ಕೊಡುತ್ತೇನೆ’ ಎಂದು ಪೊಲೀಸರೆದುರು ಭರವಸೆ ನೀಡಿದ್ದ ಆರೋಪಿಯ ತಂದೆ, ಜುಲೈ 20ರಂದು ಮಹಿಳೆಗೆ ₹ 50 ಸಾವಿರ ಕೊಟ್ಟಿದ್ದಾರೆ. ಪೊಲೀಸರು ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT