ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಮಿತಿ ಮೀರಿದ ವಾಯು ಮಾಲಿನ್ಯ

Last Updated 26 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರೀಕರಣ, ಕೈಗಾರೀಕರಣದ ಜತೆಗೆ ಮಿತಿ ಮೀರುತ್ತಿರುವ ವಾಹನಗಳಿಂದ ನಗರದಲ್ಲಿ ವಾಯುಮಾಲಿನ್ಯ ಮಟ್ಟ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಜನತೆ ಅಸ್ತಮಾ ಸೇರಿದಂತೆ ಶ್ವಾಸಕೋಶ ಸಂಬಂಧಿ ತೊಂದರೆಗಳಿಗೆ ಒಳಗಾಗುತ್ತಿರುವ ಆತಂಕಕಾರಿ ಅಂಶ ಬಯಲಾಗಿದೆ.

ವೈಟ್‌ಫೀಲ್ಡ್, ಪೀಣ್ಯ, ಯಲಹಂಕ ಕೆಎಚ್‌ಬಿ ಕೈಗಾರಿಕಾ ಪ್ರದೇಶ, ಯಶವಂತಪುರ, ಮೈಸೂರು ರಸ್ತೆಗಳಲ್ಲಿ ವಾಯು ಮಾಲಿನ್ಯ ಅಧಿಕವಾಗಿದೆ. ಮಾಲಿನ್ಯ ಹೆಚ್ಚಳಕ್ಕೆ ವಾಹನಗಳು ಶೇಕಡ 42ರಷ್ಟು ಕೊಡುಗೆ ನೀಡುತ್ತಿವೆ ಎಂಬುದು ಗಮನಾರ್ಹ ಅಂಶ. `ಬಸ್ ದಿನ~ಗಳಂದು ಮಾಲಿನ್ಯ ಪ್ರಮಾಣ ಶೇ 11ರಷ್ಟು ಕಡಿಮೆಯಾಗುತ್ತಿದೆ. ಇದರಿಂದ ಸಮೂಹ ಸಂಪರ್ಕ ಸೇವೆಯಿಂದ ಮಾಲಿನ್ಯ ಪ್ರಮಾಣವನ್ನು ತಗ್ಗಿಸಬಹುದು ಎಂಬುದು ಸ್ಪಷ್ಟಗೊಳ್ಳುತ್ತಿದೆ.

ರಾಷ್ಟ್ರೀಯ ಮಿತಿ ಪ್ರಕಾರ, ಒಂದು ಸಾವಿರ ಲೀಟರ್ ಗಾಳಿಯಲ್ಲಿ ತೇಲಾಡುವ ದೂಳಿನ ಪ್ರಮಾಣ 60 ಮೈಕ್ರೋ ಗ್ರಾಂನಷ್ಟಿರಬೇಕು. ಆದರೆ, ವೈಟ್‌ಫೀಲ್ಡ್‌ನಂತಹ ಕೈಗಾರಿಕಾ ಪ್ರದೇಶದಲ್ಲಿ ರಾಷ್ಟ್ರೀಯ ಮಿತಿಗಿಂತ ಈ ಪ್ರಮಾಣ ಶೇಕಡ ನೂರರಷ್ಟು ಮಾಲಿನ್ಯ ಅಧಿಕವಾಗಿದೆ. ಬಸವೇಶ್ವರನಗರ ಬಳಿಯ ಸಾಣೆಗೊರವನಹಳ್ಳಿಯಲ್ಲಿ ಈ ಪ್ರಮಾಣ ರಾಷ್ಟ್ರೀಯ ಮಿತಿಗಿಂತ ಕಡಿಮೆಯಿದೆ. ಇದರಿಂದ ವಸತಿ ಪ್ರದೇಶಗಳಲ್ಲಿ ಪರಿಸರ ಅಷ್ಟೊಂದು ಹದಗೆಟ್ಟಿಲ್ಲ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ.

ನಗರದಲ್ಲಿ ನಿತ್ಯ ಸಂಚರಿಸುವ ಲಕ್ಷಾಂತರ ವಾಹನಗಳು ಉಗುಳುವ ಹೊಗೆಯಿಂದ ಮಾಲಿನ್ಯ ಪ್ರಮಾಣ ಏರುತ್ತಿದೆ. ಇನ್ನು, ರಸ್ತೆ ದೂಳು (ಶೇ 20), ಕಾರ್ಖಾನೆಗಳು (ಶೇ 14), ಡೀಸೆಲ್ ಜನರೇಟರ್‌ಗಳು (ಶೇ 7), ಗೃಹ ಬಳಕೆ (ಶೇ 3) ಹಾಗೂ ಕಟ್ಟಡ ನಿರ್ಮಾಣ ಕೆಲಸಗಳಿಂದ (ಶೇ 14) ವಾತಾವರಣ ಹದಗೆಡುತ್ತಿದೆ. ನಗರದಲ್ಲಿ ದಿನೇ ದಿನೇ ಪರಿಸರ ಕಲುಷಿತಗೊಳ್ಳುತ್ತಿರುವುದರಿಂದ ಜನರಲ್ಲಿ ನೆಗಡಿ, ಕೆಮ್ಮು, ಗೂರಲು ಸೇರಿದಂತೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಉಲ್ಬಣಗೊಳ್ಳಲು ಕಾರಣವಾಗುತ್ತಿದೆ.

ವಾಯು ಮಾಲಿನ್ಯಕ್ಕೆ ಮುಖ್ಯ ಅಂಶಗಳು: ಬೆಂಗಳೂರಿನಲ್ಲಿ ಕೈಗಾರಿಕಾ ವಲಯ, ವಸತಿ ವಲಯ, ಸೂಕ್ಷ್ಮ ವಲಯ (ಶಾಲಾ-ಕಾಲೇಜು, ಆಸ್ಪತ್ರೆಗಳು) ಹಾಗೂ ಮಿಶ್ರ ನಗರ ವಲಯಗಳನ್ನಾಗಿ (ವಾಣಿಜ್ಯ ಸಂಸ್ಥೆಗಳು ಒಳಗೊಂಡಂತೆ) ವಿಂಗಡಿಸಿ ಮಾಲಿನ್ಯ ನಿಯಂತ್ರಣ ಮಂಡಳಿಯು ಮಾಲಿನ್ಯ ಮಾಪನ ಮಾಡುತ್ತಿದೆ.
 
ಮಾನವ ನಿರ್ವಹಣೆ ಹಾಗೂ ಸ್ವಯಂಚಾಲಿತ ಸೇರಿ ಒಟ್ಟು 14 ಮಾಪನಗಳ ಮೂಲಕ ನಗರದ ವಿವಿಧ ಭಾಗಗಳ ಮಾಲಿನ್ಯ ಪ್ರಮಾಣವನ್ನು ಅಳೆಯಲಾಗುತ್ತಿದೆ. ಆದರೆ, ಒಂದೊಂದು ಪ್ರದೇಶದಲ್ಲೂ ಮಾಲಿನ್ಯ ಪ್ರಮಾಣ ವಿಭಿನಆಗಿದೆ.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಶೇ 53, ಯಲಹಂಕ ಕೆಎಚ್‌ಬಿ ಕೈಗಾರಿಕಾ ಪ್ರದೇಶದಲ್ಲಿ ಶೇ 20, ಯಶವಂತಪುರದಲ್ಲಿ ಶೇ 65, ಮೈಸೂರು ರಸ್ತೆಯಲ್ಲಿ ಶೇ 33, ವಿಕ್ಟೋರಿಯಾ ಆಸ್ಪತ್ರೆ ವ್ಯಾಪ್ತಿಯಲ್ಲಿ ಶೇ 6, ನಗರ ರೈಲು ನಿಲ್ದಾಣದಲ್ಲಿ ಶೇ 2ರಷ್ಟು ಮಾಲಿನ್ಯ ಪ್ರಮಾಣ ಸಾಮಾನ್ಯ ಮಟ್ಟಕ್ಕಿಂತ ಅಧಿಕವಾಗಿದೆ. ಗಂಧಕದ ಡೈ ಆಕ್ಸೈಡ್, ಸಾರಜನಕ ಡೈ ಆಕ್ಸೈಡ್ ಹಾಗೂ ಇಂಗಾಲದ ಡೈ ಆಕ್ಸೈಡ್ ವಾಯುಮಾಲಿನ್ಯಕ್ಕೆ ಪ್ರಮುಖ ವಸ್ತುಗಳು.

ಹೇಗೆ ಶೇಖರವಾಗುತ್ತದೆ?: ಪರಿಸರದಲ್ಲಿ ಸೇರುವ ದೂಳಿನ ಕಣಗಳು ಭೂಮಿಯಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಶೇಖರವಾಗುತ್ತವೆ. ಸಾಮಾನ್ಯವಾಗಿ ಬೆಳಿಗ್ಗೆ 10 ಹಾಗೂ ರಾತ್ರಿ 11 ಗಂಟೆ ವೇಳೆಯಲ್ಲಿ ಮಾಲಿನ್ಯ ಅಧಿಕವಾಗಿರುತ್ತದೆ.

ವಾಹನಗಳ ಒತ್ತಡ ಕಡಿಮೆಯಾಗಿ ತಾಪಮಾನವೂ ಇಳಿಕೆಯಾಗುತ್ತಿದ್ದಂತೆ ದೂಳಿನ ಕಣಗಳ ಗುಚ್ಛ ಪರಸ್ಪರ ಡಿಕ್ಕಿಯಾಗಿ ಕೆಳಗೆ ಬೀಳುತ್ತವೆ. ಆದರೆ, ಸೂರ್ಯನ ಕಿರಣಗಳು ಬೀಳುವ ಮುನ್ನವೇ ಆರಂಭವಾಗುವ ವಾಹನಗಳ ಓಡಾಟ ರಾತ್ರಿ 11 ಗಂಟೆವರೆಗೂ ಮುಂದುವರಿಯಲಿದೆ. ಹೀಗಾಗಿ, ದಿನದ 16 ಗಂಟೆಗಳಲ್ಲಿ ನಗರದಲ್ಲಿ ಮಾಲಿನ್ಯದ ಪ್ರಮಾಣ ಅಧಿಕವಾಗಿರುತ್ತದೆ ಎನ್ನುತ್ತಾರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರು.

ಮಾಲಿನ್ಯ ಹೆಚ್ಚಳದಿಂದ ಪರಿಸರ, ಮಾನವನ ಆರೋಗ್ಯ, ಮರ-ಗಿಡ, ಬೆಳೆಗಳ ಮೇಲೂ ಪರಿಣಾಮ ಬೀರುತ್ತಿದೆ. ಅಲ್ಲದೆ, ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಮಳೆಯ ಮೇಲೂ ಮಾಲಿನ್ಯ ಪ್ರಭಾವ ಬೀರುತ್ತಿದೆ. ಇದರಿಂದ ವಾರ್ಷಿಕವಾಗಿ ಮಳೆ ಹೆಚ್ಚು ಬೀಳಬಹುದು ಅಥವಾ ಕೆಲವೊಮ್ಮೆ ಬೀಳದೇ ಕೂಡ ಇರಬಹುದು ಎಂದು ಅವರು ವಿವರಿಸಿದರು.

ಈ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಬಿಬಿಎಂಪಿ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಬಿಡಿಎ, ನಗರಾಭಿವೃದ್ಧಿ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಬಿಎಂಆರ್‌ಸಿಎಲ್ ಹಾಗೂ ತೈಲ ಕಂಪೆನಿಗಳನ್ನು ಒಳಗೊಂಡಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿದೆ.ಇದು ಆಗಾಗ್ಗೆ ಸಭೆ ಸೇರಿ ಮಾಲಿನ್ಯ ನಿಯಂತ್ರಣಕ್ಕೆ ಯೋಜನೆಗಳನ್ನು ರೂಪಿಸುತ್ತಿದೆ. ಆದರೂ, ಮಾಲಿನ್ಯ ಪ್ರಮಾಣ ಕಡಿಮೆಯಾಗುವುದರ ಬದಲು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT