ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜಕ್ಕೂ ಇದೊಂದು ಮ್ಯೂಸಿಯಂ ಸಾರ್

Last Updated 4 ಫೆಬ್ರುವರಿ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಜಕ್ಕೂ ಇದೊಂದು ಮ್ಯೂಸಿಯಂ ಸಾರ್’... ‘ವಾವ್ ಎಂಥ ಕಲೆಕ್ಷನ್ನು’... ‘ಅಪರೂಪದ ಕೆಲಸ ಮಾಡಿದ್ದೀರಿ ಭೇಷ್’.

ಹೀಗೆ ಬರುವ ಅಸಂಖ್ಯಾತ ಅಭಿನಂದನೆಗಳನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶನದ ಮಳಿಗೆ ನಂ. 10ರಲ್ಲಿ ಕುಳಿತ ವೃದ್ಧರೊಬ್ಬರು ನಸುನಗುತ್ತ ಸ್ವೀಕರಿಸುತ್ತಾರೆ. ಅವರ ಹೆಸರು ಮಂ.ಅ. ವೆಂಕಟೇಶ್.

40 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ವರದಿ ಮಾಡಿದ ‘ಪ್ರಜಾವಾಣಿ’ಯಿಂದ ಹಿಡಿದು ಕನ್ನಡದ ಎಲ್ಲಾ ಪ್ರಮುಖ ಪತ್ರಿಕೆಗಳ ಸಂಗ್ರಹ ಇವರ ಬಳಿ ಇದೆ. ಸುಮಾರು 30 ಸಮ್ಮೇಳನಗಳ ಸಾರವನ್ನು ಒಳಗೊಂಡ ದಿನಪತ್ರಿಕೆಗಳನ್ನು ಇವರು ಪ್ರದರ್ಶನಕ್ಕಿಟ್ಟಿದ್ದಾರೆ. ಚಾರಿತ್ರಿಕವಾಗಿ ಮಹತ್ವ ಪಡೆದ, ಕವಿ ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರಾಗಿದ್ದ ಧರ್ಮಸ್ಥಳ ಸಮ್ಮೇಳನ ಕುರಿತ ವರದಿ ಹೊಂದಿರುವ ಅಪರೂಪದ ಪತ್ರಿಕಾ ಸಂಗ್ರಹ ನೋಡುಗರ ಕುತೂಹಲ ತಣಿಸುತ್ತಿದೆ.

ಇಂದಿಗೂ ಅನೇಕ ಕನ್ನಡ ಪತ್ರಿಕೆಗಳನ್ನು ಮನೆಗೆ ತರಿಸುವ ವೆಂಕಟೇಶ್,  ‘ಪ್ರಜಾವಾಣಿ’ ಸಾಪ್ತಾಹಿಕದ ಸಮಗ್ರ ಸಂಗ್ರಹವನ್ನು ಹೊಂದಿದ್ದಾರೆ. ‘ಸುಧಾ’ ವಾರಪತ್ರಿಕೆಯ ಮೊದಲ ಆವೃತ್ತಿಯನ್ನೂ ಇಲ್ಲಿ ಕಾಣಬಹುದಾಗಿದೆ. ಕೆ.ಎನ್. ಗುರುಸ್ವಾಮಿ, ವೈಎನ್‌ಕೆ, ಟಿಎಸ್ಸಾರ್ ಅವರ ಸಂಪಾದಕತ್ವದಲ್ಲಿ ಮೂಡಿಬಂದ ಸಮ್ಮೇಳನ ಕುರಿತ ವರದಿಗಳು ಕ್ಷಣಕಾಲ ಕಾಲವನ್ನು ಹಿಂದಕ್ಕೆ ಸರಿಸಿ ಸಾಹಿತ್ಯ ಪರಂಪರೆಯ ಮೇಲೆ ಬೆಳಕು ಚೆಲ್ಲುತ್ತವೆ.

ನಗರದ ಬಿಇಎಲ್ ಕಾರ್ಖಾನೆಯಲ್ಲಿ ಕ್ವಾಲಿಟಿ ಮ್ಯಾನೇಜರ್ ಆಗಿ ನಿವೃತ್ತರಾಗಿರುವ 69 ವರ್ಷದ ವೆಂಕಟೇಶ್ ಕಳೆದ 50 ವರ್ಷಗಳಿಂದ ಪತ್ರಿಕಾ ಸಂಗ್ರಹದಲ್ಲಿ ತೊಡಗಿಕೊಂಡಿದ್ದಾರೆ. ಕುವೆಂಪು, ಬೇಂದ್ರೆ, ಚಿದಾನಂದ ಮೂರ್ತಿ ಹೀಗೆ 800 ಪ್ರಮುಖ ವ್ಯಕ್ತಿಗಳ ಕುರಿತ ಸಮಗ್ರ ಪತ್ರಿಕಾ ಮಾಹಿತಿ ಇವರ ಬಳಿ ಇದೆ. ಅಲ್ಲದೇ ಕನ್ನಡ ಸಂಸ್ಕತಿ ಇಲಾಖೆ ನಡೆಸುವ ಮನೆಯಂಗಳದ ಮಾತುಕತೆಯ ಪ್ರತಿಯೊಬ್ಬ ಅತಿಥಿಗಳ ಭಾಷಣ ಕುರಿತ ಪತ್ರಿಕಾ ವರದಿಗಳನ್ನು ಇವರು ಸಂಗ್ರಹಿಸಿದ್ದಾರೆ.

ಇವರ ಮನೆಯಲ್ಲಿ ಮೂರು ಬೀರುಗಳು, ಹಾಗೂ ವಿಶೇಷ ರ್ಯಾಕ್‌ನಲ್ಲಿ ಪತ್ರಿಕೆಯ ಬೃಹತ್ ಸಂಗ್ರಹವೇ ಇದೆ. ಜೇಬಿನಿಂದ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ವ್ಯಯಿಸಿ ಪತ್ರಿಕೆಗಳನ್ನು ಮನೆಗೆ ತರಿಸುತ್ತಾರೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪತ್ರಿಕೆಗಳನ್ನು ವರ್ಗೀಕರಿಸಿ ಸಂಗ್ರಹಿಸುತ್ತಾರೆ. ವರ್ಷಗಳು ಉರುಳಿದರೂ ಅವುಗಳು ಹಾಳಾಗದಂತೆ ಜತನದಿಂದ ಕಾಪಾಡುತ್ತಾರೆ. ಸಂಶೋಧಕರು ಹಾಗೂ ಆಸಕ್ತರಿಗೆ ಜೆರಾಕ್ಸ್ ಮಾಡಿಸಿೊಳ್ಳಲು ಕೂಡ ಅವಕಾಶ ಕಲ್ಪಿಸುತ್ತಾರೆ.

‘ಸಾಹಿತ್ಯದ ಬಗ್ಗೆ ಮೊದಲಿನಿಂದಲೂ ಅಭಿರುಚಿಯಿತ್ತು. ಅಲ್ಲದೇ ಪತ್ರಿಕಾ ವರದಿಗಳಿಗೆ ಬೆಲೆ ಇರುತ್ತದೆ. ಪುಟ್ಟ ಪುಟ್ಟ ಆಸಕ್ತಿಯಿಂದ ಹುಟ್ಟಿಕೊಂಡ ಈ ಹವ್ಯಾಸ ನನ್ನ ಮನಸ್ಸಿಗೆ ಅಪಾರ ಖುಷಿ ಕೊಟ್ಟಿದೆ’ ಎನ್ನುತ್ತಾರೆ ಅವರು.ಕುಟುಂಬ ವರ್ಗದ ಪೂರ್ಣ ಪ್ರೋತ್ಸಾಹದೊಂದಿಗೆ ಈ ಹವ್ಯಾಸದಲ್ಲಿ ತೊಡಗಿಕೊಂಡಿರುವ ವೆಂಕಟೇಶ್ ತಮ್ಮ ನಿಧನಾನಂತರ ಅಪರೂಪದ ಪತ್ರಿಕೆಗಳು ಕನ್ನಡ ಭವನಕ್ಕೆ ಅರ್ಪಿಸುವ ಆಸೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT