ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಆರ್‌ಆರ್‌ ಯೋಜನೆಗೆ ಮರುಜೀವ

ಭಾರತ್‌ ಮಾಲಾ ಯೋಜನೆಯಡಿ ನಿರ್ಮಾಣಗೊಳ್ಳಲಿದೆ ಪೆರಿಫೆರಲ್‌ ರಿಂಗ್‌ ರಸ್ತೆ
Last Updated 28 ಅಕ್ಟೋಬರ್ 2017, 19:39 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರವು ಅನುಷ್ಠಾನಗೊಳಿಸಲು ಮುಂದಾಗಿರುವ ಮಹತ್ವಾಕಾಂಕ್ಷೆಯ ‘ಭಾರತ್‌ ಮಾಲಾ’ ಯೋಜನೆಯು, ನನೆಗುದಿಗೆ ಬಿದ್ದಿದ್ದ ನಗರದ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಯೋಜನೆ ಅನುಷ್ಠಾನದ ಕುರಿತು ಹೊಸ ಭರವಸೆ ಮೂಡಿಸಿದೆ.

ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ‘ಭಾರತ್‌ ಮಾಲಾ’ ಯೋಜನೆಯನ್ನು ಇತ್ತೀಚೆಗೆ ಪ್ರಕಟಿಸಿದ್ದರು. ಮುಂದಿನ ಐದು ವರ್ಷಗಳಲ್ಲಿ 83,677 ಕಿ.ಮೀ ಉದ್ದದ ರಸ್ತೆಗಳನ್ನು ₹ 6.92 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಈ ಯೋಜನೆಯಲ್ಲಿ ಬೆಂಗಳೂರು, ಬೆಳಗಾವಿ ಹಾಗೂ ಚಿತ್ರದುರ್ಗಗಳಲ್ಲಿ ವರ್ತುಲ ರಸ್ತೆಗಳನ್ನು ನಿರ್ಮಿಸುವುದು ಕೂಡಾ ಸೇರಿದೆ ಎಂದು ಅವರು ತಿಳಿಸಿದ್ದರು.

ಈ ಯೋಜನೆಯಡಿ ಪೆರಿಫೆರಲ್ ವರ್ತುಲ ರಸ್ತೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಖಚಿತಪಡಿಸಿದ್ದಾರೆ. 100 ಮೀಟರ್‌ ಅಗಲದ ಪಿಆರ್‌ ಆರ್‌ ನಿರ್ಮಾಣಕ್ಕೆ 2006ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಭೂಸ್ವಾಧೀನ ವಿಚಾರದಲ್ಲಿ ಗೊಂದಲ ಇದ್ದುದರಿಂದ ಈ ಯೋಜನೆ ಅನುಷ್ಠಾನಗೊಂಡಿರಲಿಲ್ಲ.

ರೈತರಿಗೆ ನಗದು ರೂಪದಲ್ಲಿ ಪರಿಹಾರ ನೀಡುವುದರಿಂದ ಆಗುವ ಆರ್ಥಿಕ ಹೊರೆ ಕಡಿಮೆ ಮಾಡುವ ಸಲುವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಯೋಜನೆಯಲ್ಲಿ ಮಾರ್ಪಾಡು ಮಾಡಿತ್ತು. 100 ಮೀಟರ್‌ ಅಗಲದ ರಸ್ತೆ ನಿರ್ಮಿಸುವ ಬದಲು 75 ಮೀಟರ್‌ ಅಗಲದಲ್ಲಿ ರಸ್ತೆ ನಿರ್ಮಿಸಲು ಹಾಗೂ ಉಳಿದ 25 ಮೀಟರ್‌ ಅಗಲದ ಜಾಗವನ್ನು ಅಭಿವೃದ್ಧಿಪಡಿಸಿ, ಜಾಗ ಕಳೆದುಕೊಂಡ ರೈತರಿಗೆ ಮರಳಿಸಲು ಬಿಡಿಎ ಮುಂದಾಗಿತ್ತು. ಈ ಪರಿಷ್ಕೃತ ಯೋಜನೆಗೆ ಸಚಿವ ಸಂಪುಟ ಕಳೆದ ವರ್ಷ ಜೂನ್‌ನಲ್ಲಿ ತಾತ್ವಿಕ ಒಪ್ಪಿಗೆ ನೀಡಿತ್ತು. ಆದರೆ, ಈ ಪ್ರಸ್ತಾವಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿತ್ತು.

ಈ ಯೋಜನೆಗೆ ಅಧಿಸೂಚನೆ ಹೊರಡಿಸುವಾಗ ಅಂದಾಜು ವೆಚ್ಚ ₹ 500 ಕೋಟಿ ಇತ್ತು. 2013ರಲ್ಲಿ ಇದು ₹ 5,000 ಕೋಟಿಗೆ ಹೆಚ್ಚಿತ್ತು. ಪರಿಷ್ಕೃತ ಅಂದಾಜಿನ ಪ್ರಕಾರ ಈ ಯೋಜನೆಗೆ ₹ 11,950 ಕೋಟಿ ಬೇಕಾಗುತ್ತದೆ. ಈ ಪೈಕಿ ರಸ್ತೆ ನಿರ್ಮಾಣಕ್ಕೆ ₹ 3,850 ಕೋಟಿ, ಭೂಸ್ವಾಧೀನಕ್ಕೆ ₹ 8,100 ಕೋಟಿ ವೆಚ್ಚವಾಗಲಿದೆ. ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ರಸ್ತೆ ನಿರ್ಮಾಣಕ್ಕೆ ₹ 3,850 ಕೋಟಿ ಸಾಲ ನೀಡಲು ಆಸಕ್ತಿ ತೋರಿದೆ.

‘ಭೂಸ್ವಾಧೀನಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಸರ್ಕಾರವು ಭಾರತ್‌ ಮಾಲಾ ಯೋಜನೆ ಅಡಿ ಭರಿಸಲಿದೆ ಎಂಬ ಆಶಾವಾದ ಹೊಂದಿದ್ದೇವೆ. ಯೋಜನೆಗೆ ಅನುದಾನ ಒದಗಿಸುವ ವಿಚಾರದಲ್ಲಿ ಕೇಂದ್ರದಿಂದ ಔಪಚಾರಿಕ ಪ್ರಸ್ತಾವದ ನಿರೀಕ್ಷೆಯಲ್ಲಿದ್ದೇವೆ’ ಎಂದು ಮಹೇಂದ್ರ ಜೈನ್‌ ತಿಳಿಸಿದರು.

‘ನಾವು ಈ ಯೋಜನೆಗೆ ಅಗತ್ಯ ವಿರುವ 100 ಮೀಟರ್‌ ಅಗಲದ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಿದ್ದೇವೆ. 25 ಮೀಟರ್‌ ಜಾಗವನ್ನು ಆದಾಯ ತರುವ ಚಟುವಟಿಕೆಗೆ ಬಳಸಿಕೊಳ್ಳುವ ಸಾಧ್ಯಾಸಾಧ್ಯತೆ ನೋಡಿಕೊಂಡು ರಸ್ತೆಯ ಅಗಲ 75 ಮೀಟರ್‌ ಇರಬೇಕೋ ಅಥವಾ 100 ಮೀಟರ್‌ ಇರಬೇಕೋ ಎಂಬು
ದನ್ನು ನಿರ್ಧರಿಸುತ್ತೇವೆ’ ಎಂದು ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ತಿಳಿಸಿದರು.

‘ಭೂಸ್ವಾಧೀನಕ್ಕೆ ಕೇಂದ್ರ ಸರ್ಕಾರವು ಯಾವುದೇ ರೀತಿಯ ನೆರವು ನೀಡಿದರೂ ಸ್ವಾಗತಾರ್ಹ. ಅವರು ಶೇ 100ರಷ್ಟು ಅನುದಾನ ಒದಗಿಸಿದರೆ ನಾವು ಈ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಅಥವಾ ಕೇಂದ್ರ ಸರ್ಕಾರ ಸೂಚಿಸುವ ಸಂಸ್ಥೆಗೆ ಹಸ್ತಾಂತರ ಮಾಡಲು ಸಿದ್ಧ’ ಎಂದರು.

**

‘ಆರು ಕಟ್ಟಡ ಸಂಕೀರ್ಣ ಅಭಿವೃದ್ಧಿ’

ಪಿಆರ್‌ಆರ್‌ ನಿರ್ಮಾಣವೂ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಹೊಂದಿಸುವ ಸಲುವಾಗಿ ಬಿಡಿಎ ಆರು ಕಟ್ಟಡ ಸಂಕೀರ್ಣಗಳನ್ನು ಅಭಿವೃದ್ಧಿಪಡಿಸಿ, ಅವುಗಳಿಂದ ಹೆಚ್ಚಿನ ಆದಾಯ ಗಳಿಸಲು ಮುಂದಾಗಿದೆ.

ಕೋರಮಂಗಲ, ಎಚ್‌ಎಸ್‌ಆರ್‌ ಬಡಾವಣೆ, ಆಸ್ಟಿನ್‌ಟೌನ್‌, ವಿಜಯನಗರ, ಆರ್.ಟಿ.ನಗರ, ಸದಾಶಿವನಗರ ಹಾಗೂ ಇಂದಿರಾನಗರಗಳ ಕಟ್ಟಡ ಸಂಕೀರ್ಣಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ಇದಕ್ಕೆ ₹ 330 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

‘ಖಾಸಗಿ ಸಹಭಾಗಿತ್ವದಲ್ಲಿ ಈ ಸಂಕೀರ್ಣಗಳನ್ನು ಅಭಿವೃದ್ಧಿಪಡಿಸಲಿದ್ದೇವೆ. ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳುವವರೆಗೆ, ಇಲ್ಲಿರುವ ಮಳಿಗೆಗಳನ್ನು ಸ್ಥಳಾಂತರ ಮಾಡುತ್ತೇವೆ. ಮಳಿಗೆಗಳನ್ನು ಮರುಹಂಚಿಕೆ ಮಾಡುವಾಗ ಫ್ಲೋರ್‌ ಏರಿಯಾ ರೇಷಿಯೋ (ಎಫ್‌ಎಆರ್‌) ಪ್ರಮಾಣವನ್ನು ಹೆಚ್ಚಿಸಲಾಗುವುದು’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

‘ಹಳತಾಗಿರುವ ಈ ಸಂಕೀರ್ಣಗಳು ಹೆಚ್ಚಿನ ನಿರ್ವಹಣೆ ಬಯಸುತ್ತಿದ್ದವು. ಹಾಗಾಗಿ ಪ್ರಾಧಿಕಾರವು ಅವುಗಳನ್ನು ಮತ್ತೆ ನಿರ್ಮಿಸಲು ನಿರ್ಧರಿಸಿದೆ. ಈ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಲಾಗಿದೆ’ ಎಂದರು.

**

ಪೆರಿಫೆರಲ್‌ ವರ್ತುಲ ರಸ್ತೆಯನ್ನು ಸಂಧಿಸುವ ಪ್ರಮುಖ ರಸ್ತೆಗಳು

ತುಮಕೂರು ರಸ್ತೆ , ಬಳ್ಳಾರಿ ರಸ್ತೆ,  ಹಳೆ ಮದ್ರಾಸ್‌ ರಸ್ತೆ,  ಹೊಸೂರು ರಸ್ತೆ , ದೊಡ್ಡಬಳ್ಳಾಪುರ ರಸ್ತೆ, ಹೆಣ್ಣೂರು ರಸ್ತೆ,  ಹೆಸರಘಟ್ಟ ರಸ್ತೆ,
ಹೊಸಕೋಟೆ– ಆನೇಕಲ್‌ ರಸ್ತೆ, ವೈಟ್‌ಫೀಲ್ಡ್‌ ರಸ್ತೆ, ಸರ್ಜಾಪುರ ರಸ್ತೆ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT