ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರಿಗೆ ಬಿಎಂಟಿಸಿ ಆಘಾತ

ಪ್ರಯಾಣ ದರ ಶೇ 15 ಹೆಚ್ಚಳ
Last Updated 25 ಏಪ್ರಿಲ್ 2014, 19:57 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬಸ್‌ ಪ್ರಯಾಣ ದರ­ವನ್ನು ದಿಢೀರನೇ ಶೇ 15ರಷ್ಟು ಹೆಚ್ಚಿ­ಸಿದೆ. ನೂತನ ದರ ಗುರುವಾರ ಮಧ್ಯ­ರಾತ್ರಿಯಿಂದಲೇ ಜಾರಿಗೆ ಬಂದಿದೆ. ಈ ಮೂಲಕ ಪ್ರಯಾಣಿಕರಿಗೆ ಸಂಸ್ಥೆ ಆಘಾತ ನೀಡಿದೆ.

ಸಾಮಾನ್ಯ ಬಸ್‌ಗಳಲ್ಲಿ ಈಗಿನ ಕನಿಷ್ಠ ದರ ₨5 ಆಗಿತ್ತು. ನೂತನ ದರ ₨6 ಆಗಿದೆ. ವೋಲ್ವೊ ಸೇರಿದಂತೆ ಹವಾನಿ­ಯಂತ್ರಿತ ಬಸ್‌ಗಳ ಕನಿಷ್ಠ ದರ ₨10 ಆಗಿತ್ತು. ನೂತನ ದರ ₨15 ಆಗಲಿದೆ. ಬಸ್‌ ಪಾಸ್‌ಗಳ ದರವೂ ಗಣನೀಯ ಪ್ರಮಾಣದಲ್ಲಿ ಏರಿದೆ. ಪ್ರಯಾಣ ದರ ಏರಿಕೆಗೆ ಪ್ರಯಾಣಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಚುನಾವಣಾ ಆಯೋಗ ನೀತಿ ಸಂಹಿ­ತೆಯನ್ನು ಸಡಿಲಗೊಳಿಸಿದ ಕೆಲವೇ ಗಂಟೆ­ಗಳಲ್ಲೇ ಮುಖ್ಯಮಂತ್ರಿ ಅವರ ಒಪ್ಪಿಗೆ ಪಡೆದು ಸಂಸ್ಥೆ ದರ ಏರಿಕೆ ಮಾಡಿದೆ. ಸಂಸ್ಥೆ ನಷ್ಟ ಪ್ರಮಾಣವನ್ನು ಸರಿದೂಗಿ­ಸಲು ಶೇ 17ರಷ್ಟು ದರ ಏರಿಕೆಗೆ ಅನು­ಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು. ಶೇ 15 ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.

ದರ ಏರಿಕೆ ಮಾಡುವಂತೆ ಚುನಾ­ವಣೆ ದಿನಾಂಕ ಘೋಷಣೆ­ಯಾಗುವ ಮೊದಲೇ ನಿಗಮ ಮನವಿ ಮಾಡಿತ್ತು.  ಆದರೆ, ಚುನಾ­ವಣೆ ಸಮೀಪಿಸಿದ್ದ ಹಿನ್ನೆಲೆ­ಯಲ್ಲಿ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ.

‘ಮಾಸಿಕ ಡೀಸೆಲ್ ಬೆಲೆಯು ಪ್ರತಿ ಲೀಟರ್‌ಗೆ 60 ಪೈಸೆ ಜಾಸ್ತಿಯಾಗು­ತ್ತಿದೆ. ಡೀಸೆಲ್ ದರ

ಹೆಚ್ಚಳ, ಸಿಬ್ಬಂದಿ ತುಟ್ಟಿಭತ್ಯೆ ಪರಿಷ್ಕರಣೆ ಮತ್ತು ವಾಹ­ನದ ಬಿಡಿಭಾಗಗಳ ಬೆಲೆ ಏರಿಕೆಯಿಂದ ದರ ಏರಿಕೆ ಅನಿವಾರ್ಯ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ತಿಳಿಸಿದರು.

‘2012–13ನೇ ಸಾಲಿನಲ್ಲಿ ಸಂಸ್ಥೆ ₨147 ಕೋಟಿ ನಷ್ಟ ಅನುಭವಿಸಿತ್ತು. ಈ  ಮಾರ್ಚ್‌ ಅಂತ್ಯದ ವರೆಗೆ ಸಂಸ್ಥೆ ₨140 ಕೋಟಿ ನಷ್ಟ ಅನುಭವಿಸಿದೆ. ಒಟ್ಟಾರೆ ನಷ್ಟದ ಪ್ರಮಾಣ ₨307 ಕೋಟಿ. ಈಗ ದರ ಏರಿಕೆ ಮಾಡಿ­ರುವುದರಿಂದ ₨235 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಈ ಮೂಲಕ ನಷ್ಟದ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸ­ಹುದು. ಸಂಸ್ಥೆಯ ಕಾರ್ಯದಕ್ಷತೆ ಹೆಚ್ಚಿಸಿ ಉಳಿದ ನಷ್ಟ ಸರಿದೂಗಿಸಲಾಗುವುದು’ ಎಂದರು.

‘ಕಳೆದ ಆರ್ಥಿಕ ವರ್ಷದಲ್ಲಿ ಸಂಸ್ಥೆಯು ತನ್ನ ಸಾಧನೆಯನ್ನು ಉತ್ತಮ ಪಡಿಸುವಲ್ಲಿ ವಾಹನ ಬಳಕೆಯನ್ನು ಅಧಿಕಗೊಳಿಸಿದೆ. ಜೊತೆಗೆ ಕಿ.ಮೀ. ರದ್ಧತಿ ಪ್ರಮಾಣ­ವನ್ನು ಶೇ 5.5ರಿಂದ ಶೇ 4.5ಗೆ ಇಳಿಸಲಾಗಿದೆ. ಸಿಬ್ಬಂದಿ ವರ್ಗದ ಸತತ ಪರಿಶ್ರಮದಿಂದ ಕಳೆದ ವರ್ಷಕ್ಕೆ ಹೊಲಿಸಿದಾಗ ಸಾರಿಗೆ ಆದಾಯದಲ್ಲಿ ₨240 ಕೋಟಿ­ಗಳಷ್ಟು ಹೆಚ್ಚಳವಾಗಿದ್ದು, ಇದ­ರಿಂದ ಸಂಸ್ಥೆಯ ಆದಾಯದಲ್ಲಿ ಶೇ 16 ವೃದ್ಧಿಯಾಗಿದೆ. ಡೀಸೆಲ್‌ ದರ, ಸಿಬ್ಬಂದಿ ವೇತನದ ಪ್ರಮಾಣ ಹೆಚ್ಚಳ ಮತ್ತಿತರ ಕಾರಣ­ಗ­ಳಿಂದಾಗಿ ನಷ್ಟ ಅನುಭವಿಸುತ್ತಿದೆ’ ಎಂದು ಸಮಜಾಯಿಷಿ ನೀಡಿದರು.

‘ಪ್ರತಿನಿತ್ಯ ಡೀಸೆಲ್‌ ದರಕ್ಕೆ ಸಂಸ್ಥೆ ₨2.60 ಕೋಟಿ ವೆಚ್ಚ ಮಾಡು­ತ್ತಿದೆ. 31,000ಕ್ಕೂ ಅಧಿಕ ಸಿಬ್ಬಂದಿ ವೇತನ ಪಾವತಿಗೆ ತಿಂಗಳಿಗೆ ₨51 ಕೋಟಿ ಮೀಸಲಿ­ಡಬೇಕಿದೆ. ಟೈರ್‌ ಬದಲಾವಣೆ, ಬಿಡಿಭಾಗಗಳ ಬದಲಾವಣೆ ಸೇರಿ ನಿರ್ವ­ಹಣಾ ವೆಚ್ಚವೇ ₨15 ಕೋಟಿ ಆಗುತ್ತಿದೆ. ಕೆಲವು ತಿಂಗಳಿಗೆ ಸಿಬ್ಬಂದಿಯ ತುಟ್ಟಿ­ಭತ್ಯೆ­ ನೀಡಲು ಸಾಧ್ಯವಾಗಿ­ರಲಿಲ್ಲ. ಸಂಸ್ಥೆ ತೀರಾ ಸಂಕಷ್ಟದ ಪರಿಸ್ಥಿತಿ­ಯಲ್ಲಿದೆ. ಶೇ 15 ದರ ಏರಿಕೆ­ಯಿಂದ ಸ್ವಲ್ಪ ನಿರಾಳ ಆಗಲಿದೆ. ಒಂದು ವರ್ಷ ಪ್ರಯಾಣ ದರ ಏರಿಸುವುದಿಲ್ಲ’ ಎಂದು ಹಿರಿಯ ಅಧಿಕಾರಿ­ಯೊಬ್ಬರು ತಿಳಿಸಿದರು.

ಕಳೆದ ವರ್ಷ ಸಂಸ್ಥೆ ಬಸ್‌ ದರ­ವನ್ನು ಶೇ 10ರಷ್ಟು ಏರಿಕೆ ಮಾಡಿತ್ತು. ಬಳಿಕ 2 ಬಾರಿ ವೋಲ್ವೊ, ಸಾಮಾನ್ಯ ಬಸ್‌ಗಳ ದರ ಏರಿಸಲಾ­ಗಿತ್ತು. ಆದರೂ, ನಷ್ಟ ಪ್ರಮಾಣ ಕಡಿಮೆ ಆಗಿರಲಿಲ್ಲ.

‘ಡೀಸೆಲ್‌ ದರ ಏರಿಕೆ ನೆಪ’
ಬಿಎಂಟಿಸಿ ಬಸ್‌ ದರವನ್ನು ಮತ್ತೊಮ್ಮೆ ಏರಿಕೆ ಮಾಡುವ ಪ್ರಯಾಣಿಕರಿಗೆ ದೊಡ್ಡ ಹೊಡೆತ ನೀಡಿದೆ. ನಗರದ ಬಡವರು ಹಾಗೂ ಮಧ್ಯಮ ವರ್ಗದವರು ಇದರಿಂದ ಹೆಚ್ಚಿನ ತೊಂದರೆ ಅನುಭವಿಸುತ್ತಾರೆ. ಪ್ರತಿ ಸಲವೂ ಪ್ರಯಾಣ ದರ ಏರಿಸಿದಾಗ ಡೀಸೆಲ್‌ ದರ ಏರಿಕೆಯ ನೆಪ ನೀಡಲಾಗುತ್ತಿದೆ.

ಕಳೆದ ಬಾರಿ ಪ್ರಯಾಣ ದರ ಏರಿಕೆ ಮಾಡಿದ ಬಳಿಕ ನಷ್ಟ ಪ್ರಮಾಣ ನಯಾಪೈಸೆ ಇಳಿಕೆ ಆಗಿಲ್ಲ. ನಷ್ಟ ಪ್ರಮಾಣ ದುಪ್ಪಟ್ಟು ಆಗಿದೆ. ಸಂಸ್ಥೆಯಲ್ಲಿನ ಸೋರಿಕೆ ಪ್ರಮಾಣದಿಂದಲೇ ನಷ್ಟ ಉಂಟಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು. ಅದನ್ನು ಬಿಟ್ಟು ಪದೇ ಪದೇ ಪ್ರಯಾಣಿಕರ ಮೇಲೆ ಬರೆ ಹಾಕುವುದು ಸರಿಯಲ್ಲ. ಪ್ರಯಾಣ ದರ ಏರಿಕೆಯನ್ನು ಖಂಡಿಸಿ ವೇದಿಕೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಗುವುದು.
–ವಿನಯ ಶ್ರೀನಿವಾಸ್‌, ಸಂಚಾಲಕ, ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT